ಚಾರುದತ್ತ ೧೫

👳ಚಾರುದತ್ತ  ಬೆಳಕು-೧೪🌞

*इयं हि निद्रा नयनावलम्बिनी ललाटदेशादुपसर्पतीव माम्। अदृश्यमाना चपला जरेव या मनुष्यवीर्यं परिभूय वर्धते।।*

_ನಾಯಕನ ಮಾತು. ಭಾಸನ ಕವಿತ್ವದ ವೈಶಾಲ್ಯಕ್ಕೆ ಇದು ಒಳ್ಳೆಯ ನಿದರ್ಶನ. ನಿದ್ರೆಯನ್ನೂ ವರ್ಣಿಸಿದ ಪರಿ ಸುಂದರ. ನಾಯಕ ಕತ್ತಲೆಯಲ್ಲಿ ವಾಯುಸೇವನೆ ಮಾಡಿ ಮನೆಯನ್ನು ಸೇರಿದ್ದಾನೆ. ಈಗಿನ ಪೋಕರಿಗಳಂತೆ ಅಥವಾ ಪಾರ್ಟಿವೀರರಂತಲ್ಲ ಅವನ ವರ್ತನೆ. ಏನನ್ನೂ ಮತಿಗೆಡುವ ವಸ್ತು ಸೇವಿಸದೆ ಹಾಗಿದ್ದರೂ ಒಳಗೆ ಬರುವಾಗ ಕಾಲು ತೊಳೆದು ಬಂದಿದ್ದಾನೆ. ವ್ಯಕ್ತಿ ವಾಹನದಲ್ಲಿ ಬಂದಿರಲಿ, ನಡೆದು ಬಂದಿರಲಿ ಮನೆಯೊಳಗೆ ಕಾಲಿಡುವ ಮುನ್ನ ಕಾಲು ತೊಳೆಯುವ ಪದ್ಧತಿ ಎಷ್ಟು ಚಂದ!. ಮಲಗಿ ಕ್ಷಣದಲ್ಲೇ ನಿದ್ರೆಗೆ ಜಾರುತ್ತಿದ್ದಾನೆ. ನಿದ್ರೆ ಹೇಗೆ ಅವನನ್ನು ಆವರಿಸಿತು ಎಂಬುದು ಅವನದೇ ವಾಕ್ಯದಲ್ಲಿ- ಕಣ್ಣುಗಳನ್ನು ಅವಲಂಬಿಸಿ ಅಥವಾ ಕಣ್ಣನ್ನೇ ಗುರಿಯಾಗಿಸಿ ಈ ನಿದ್ರೆ ವೇಗವಾಗಿ ಹಣೆಯ ಮೇಲಿನಿಂದ ಇಳಿದು ಬಂದು ನನ್ನನ್ನು ಆವರಿಸಿದೆ ಅಥವಾ ಪರಾಭವ ಮಾಡಿದೆ. ನಿದ್ರೆ ಮಾಡದೇ ಇರಲು ಅಥವಾ ತಡೆಯಲು ಮಾಡಿದ ಪ್ರಯತ್ನಗಳೆಲ್ಲವೂ ಸೋತು ನಾನು ಶರಣಾಗಿದ್ದೇನೆ‌. ಒಂದು ವೇಳೆ ಬರುವ ಸಮಯ ಗೊತ್ತಾದರೆ ಅಡಗಿಯೋ, ಓಡಿ ಹೋಗಿಯೋ ತಪ್ಪಿಸಿಕೊಳ್ಳಬಹುದಿತ್ತು. ಆದರೆ ಅವಳು ಅದೃಶ್ಯ ದೇವತೆ. ಶಿವನ ಜಟೆಯಿಂದ ಇಳಿದುಬಂದ ಭಾಗೀರಥಿಯಂತೆ ನಿದ್ರಾದೇವಿ ಧುಮುಕಿ ಧುಮುಕಿ ಆವರಿಸಿದ್ದಾಳೆ. ಎಷ್ಟು ಹೊತ್ತು ಇರುವಳು ಎಂದರೆ ಅವಳ ಸ್ವಭಾವ ಚಂಚಲ. ಕ್ಷಣಕಾಲ ಬಂದು ಹೋಗಬಹುದು ಅಥವಾ ಬಹು ದೀರ್ಘ ಕಾಲ ಆವರಿಸಬಹುದು. ಅವಶ್ಯಕತೆ ಇದ್ದಾಗ ಅಪ್ಪುಗೆ ಕೊಡದೆ ಮಾಯ ಆಗಬಹುದು, ಕಾರ್ಯದಲ್ಲಿ ಮಗ್ನರಾಗಿದ್ದಾಗ ಅಥವಾ ತುಂಬಾ ಅವಸರದಲ್ಲಿ ಇದ್ದಾಗ ಆಕಸ್ಮಿಕವಾಗಿ ಬಂದು ಮುತ್ತಿಕ್ಕಬಹುದು. ಅವಳ ಒಂದೇ ಒಂದು ಪ್ರಬಲ ಶಕ್ತಿ ಅಥವಾ ತೊಂದರೆ ಎಂದರೆ ಅದು ನಮ್ಮ ಸಾಮರ್ಥ್ಯವನ್ನು ಕುಗ್ಗಿಸುವುದು. ಮುಪ್ಪು ಬಂದಾಗ ಹೇಗೆ ಮನುಷ್ಯನ ನೈಜ ಸಾಮರ್ಥ್ಯ ಮರೆಮಾಚುವುದೋ ಅಥವಾ ಶಕ್ತಿ ಕುಂದುವುದೋ ನಿದ್ರೆಯ ಕಾರ್ಯವೂ ಅದೇ ಆಗಿದೆ. ಮನುಷ್ಯರ ಸಾಮರ್ಥ್ಯವನ್ನು ಅಥವಾ ಸಮಯದ ಸದುಪಯೋಗದ ಜಾಗರೂಕತೆಯನ್ನು ಕ್ಷಣದಲ್ಲೇ ಹೊಸಕಿ ತಾನು ಬಂದು ಆಕ್ರಮಿಸುತ್ತಾಳೆ. ಕೆಲ ಹೊತ್ತಾದರೂ ಯಾವ ವ್ಯಕ್ತಿಯನ್ನೂ ಪರಾಭವಗೊಳಿಸದೆ ಇರಲಾರಳವಳು.ತಡೆದಷ್ಟೂ ಮತ್ತೆ ಹೆಚ್ಚಾಗುವ ಗುಣ ಮುಪ್ಪಿನ ಸಹಜ ಲಕ್ಷಣ. ನಿದ್ರೆಯೂ ಹಾಗೆಯೇ ಒತ್ತರಿಸಿ ಬಂದಾಗ ತಡೆಹಿಡಿದರೆ ಬಿಟ್ಟು ಹೋಗಬಹುದೆನ್ನುವ ನಿರೀಕ್ಷೆ ಸುಳ್ಳು. ಆ ಕ್ಷಣ ಮರೆಯಾದರೂ ಮುಂದಿನ ಕ್ಷಣದಲ್ಲೇ ನಮಗೆ ಅರಿವಾಗದಂತೆ ಆವರಿಸಿಕೊಳ್ಳುವಳು ಅವಳು. ನನ್ನ ಪರಿಸ್ಥಿತಿಯೂ ಈಗ ನಿದ್ರೆಗೆ ಶರಣಾದ ಸಾಮಾನ್ಯನಂತೆ ಆಗಿದೆ. ಕವಿಯ ಮುಪ್ಪಿನ ಹೋಲಿಕೆ ನಿದ್ರೆಗೆ ಬಹಳ ಸೊಗಸಾಗಿದೆ. ಅತಿನಿದ್ರೆ ಅಥವಾ ಹಗಲಿನ ನಿದ್ರೆ ನಿಜಕ್ಕೂ ನಮ್ಮ ದೇಹದ ಶಕ್ತಿಯನ್ನು ಅಥವಾ ಕಸುವನ್ನು ಕುಂದಿಸಿ ಅಮಲೇರಿಸುತ್ತದೆ. ಬೆಳಗಿನ ಜಾವದ ನಿದ್ರೆ ಕೆಲಸಗಳನ್ನೆಲ್ಲಾ ದೂರತಳ್ಳಿ ಮತ್ತಷ್ಟು ಇನ್ನಷ್ಟು ಮತ್ತೇರಿಸುತ್ತದೆ. ನಮ್ಮ ಜಾಗರೂಕತೆಯನ್ನು, ಜವಾಬ್ದಾರಿಯನ್ನು ಮರೆಸಿ ಮಾದಕದ್ರವ್ಯದಂತೆ ಕುಣಿಸುತ್ತದೆ ಹಾಗೂ ನಮ್ಮನ್ನೇ ಮರೆಸುತ್ತದೆ. ಕವಿಯ ಅಭಿಮತವೂ ಬಹುಶಃ ಇದೇ ಇರಬೇಕು. ಕೆಲವರಿಗೆ ಕರೆದರೂ ಬರದ ಚಂಚಲತೆಯೂ ಅವಳ ಮುಚ್ಚಿದ ಗುಣ._

✍ ಸಂಗ್ರಹ ಶ್ರೀನಿಧಿ ಅಭ್ಯಂಕರ್

ಎಲ್ಲಾ ಲೇಖನಗಳಿಗಾಗಿ ಭೇಟಿ ನೀಡಿ  

http://shreenidhiabhyankar.blogspot.in/

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩