ರಾಮಾಯಣ ೧೨೯

📕🌳 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌳📕 ಭಾಗ-೧೨೯

*ವಿಜ್ಞಾಯ ತು ಮನಸ್ತಸ್ಯ ರಾಘವಸ್ಯ ಮಹಾತ್ಮನಃ ಸಂನಿವೃತ್ಯಾಹವಾಸ್ತಸ್ಮಾತ್ ಸಂವಿವೇಶ ಪುರಂ ತತಃ*

_ಲಕ್ಷ್ಮಣನಿಗೆ ಬುದ್ಧಿ ಮಾತು ಹೇಳಿ ಯುದ್ಧ ಮುಂದುವರೆಸಿದ ರಾಮನ ನಡೆಯಿಂದ ಇಂದ್ರಜಿತು ಗಾಬರಿಯಾದನು. ಇವರು ತನ್ನನ್ನೇ ಗುರಿಯಾಗಿಸಿ ಅನೇಕ ಅಸ್ತ್ರಗಳ ಮೂಲಕ ವಧಿಸಿಯಾರು, ತನ್ನ ಯಾಗ ಮುಗಿದ ಮೇಲೆ ಅವಧ್ಯತ್ವ ಸಿಗಬಹುದು. ಹಾಗಾಗಿ ದಾಳಿಗಿಂತ ಮೊದಲು ಶಕ್ತಿ ಹೆಚ್ಚಿಸಿಕೊಳ್ಳಬೇಕು‌. ಅಲ್ಲಿಯವರೆಗೆ ಶತ್ರುಗಳನ್ನು ತಡೆಯಲು ಉಪಾಯವೊಂದನ್ನು ಯೋಚಿಸಿ ಅದರಂತೆ ಮಾಯಾಸೀತೆಯನ್ನು ಸೃಷ್ಟಿಸಿದನು. ಹನುಮನೊಬ್ಬನೇ ಅವಳ ದರ್ಶನ ಮಾಡಿದವನಾದ ಕಾರಣ ಅವನು ನಿಂತಿರುವ ಲಂಕೆಯ ಪಶ್ಚಿಮದ ಬಾಗಿಲೆಡೆಗೆ ಹೋದನು. ಇಲ್ಲಿ ಅವನ ಮುಂದಾಲೋಚನೆ ತುಂಬಾ ಸರಿಯಾಗಿದೆ. ಶತ್ರು ಕೊಲ್ಲಲೆಂದು ಬಂದಾಗ ತನಗಿಂತ ಬಲಿಷ್ಠನಾಗಿದ್ದ ಪಕ್ಷದಲ್ಲಿ ಹೋರಾಡಿ ಕೆಲಸವಾಗದು. ಅದಕ್ಕೆ ಶತ್ರುವಿನ ಗಮನವನ್ನು ಬೇರೆ ಕಡೆ ಸೆಳೆಯುವ ತಂತ್ರ ಮಾಡಬೇಕು. ಅದು ಕೆಲಕಾಲ ಯುದ್ಧ ನಿಲ್ಲಿಸಲೂ ಹಾಗೂ ತನ್ನನ್ನು ತಾನು ರಕ್ಷಿಸಲು ಸಹಾಯ ಮಾಡುತ್ತದೆ. ತನ್ನ ಶಕ್ತಿ ಮೀರುವ ಶಕ್ತಿ ದೈವಶಕ್ತಿ‌. ಅದನ್ನು ಸಂಪಾದಿಸಿದರೆ ಶತ್ರುಗಳನ್ನು ಎದುರಿಸಲು ಪೂರಕವಾಗುವುದೆಂದು ಎಣಿಸಿದ ಇಂದ್ರಜಿತುವಿನ ರಣನೀತಿ ರಾಜಕೀಯದ ಉತ್ತಮ ನಡೆ._

*ಸ ದದರ್ಶ ಹತಾನಂದಾಂ ಸೀತಾಮಿಂದ್ರಜಿತೋ ರಥೇ ಏಕವೇಣೀಧರಾಂ ದೀನಾಮುಪವಾಸಕೃಶಾನನಾಮ್* *ಪರಿಕ್ಲಿಷ್ಟೈಕವಸನಾಂ ಅಮೃಜಾಂ ರಾಘವಪ್ರಿಯಾಮ್ ರಜೋಮಲಾಭ್ಯಾಮಾಲಿಪ್ತೈಃ ಸರ್ವಗಾತ್ರೈರ್ವರಸ್ತ್ರಿಯಾಮ್*

_ಶತ್ರುವಿನ ಆತ್ಮವಿಶ್ವಾಸವನ್ನು ಕುಗ್ಗಿಸುವ ಉಪಾಯ ಮಾಡಿದ ಇಂದ್ರಜಿತುವು ಮಾಯಾಸೀತೆಯನ್ನು ಸೃಷ್ಟಿ ಮಾಡಿ ತನ್ನ ರಥದಲ್ಲಿ ಕರೆದುಕೊಂಡು ಬಂದನು. ಆ ಸೀತೆ ದುಃಖಿತಳಾಗಿದ್ದಾಳೆ, ಏಕವೇಣಿಯನ್ನು ಧರಿಸಿ ದೀನಳಾಗಿದ್ದಾಳೆ. ಉಪವಾಸದಿಂದ ಮುಖವು ಬಾಡಿ ತನು ಬಡವಾಗಿದೆ. ಸುಕ್ಕುಗಟ್ಟಿದ ಸೀರೆಯನ್ನುಟ್ಟು ಸ್ನಾನಾದಿ ಸಂಸ್ಕಾರವಿಲ್ಲದೆ ಧೂಳಿಯಿಂದ ಮಲಿನವಾದ ದೇಹವಿದ್ದರೂ ಲಕ್ಷಣಸಂಪನ್ನೆಯಾದ ಉತ್ತಮಾಂಗನೆಯಾಗಿ ಶೋಭಿಸುತ್ತಿದ್ದಾಳೆ. ಇಲ್ಲಿ ಸೀತೆಯ ಈ ಬದುಕು ಒಂದು ಬಗೆಯ ತಪಸ್ಸೇ ಸರಿ. ಪತಿಯನ್ನು ಯೋಚಿಸುತ್ತಾ ಸ್ನಾನಾದಿಗಳನ್ನು ತ್ಯಜಿಸಿ ಆರು ತಿಂಗಳ ಕಾಲ ಕಡಿಮೆ ಆಹಾರ ಅಥವಾ ನೀರನ್ನೇ ಕುಡಿದು ಬದುಕು ನಡೆಸುವುದು ಕಷ್ಟಸಾಧ್ಯ. ಆದರೆ ಅವಳ ಅಂತಹ ತಪಸ್ಸೇ ಮೊಗದಲ್ಲಿ ಕಾಂತಿಯನ್ನು ತಂದುಕೊಟ್ಟಿದೆ ಅಥವಾ ಅವಳ ಪಾತಿವ್ರತ್ಯವೇ ಲಕ್ಷಣಗಳನ್ನು ಜೊತೆಗಿರಿಸಿದೆ ಎನ್ನಬಹುದು. ಹನುಮನು ಅವಳನ್ನು ನೋಡಿ ಅಳುತ್ತಾ ಇಂದ್ರಜಿತುವನ್ನು ನಿಂದಿಸತೊಡಗಿದನು. ಈಗ ಹೋರಾಡುತ್ತಿರುವ ಕೋಟಿಗೂ ಮೀರಿದ ಸೈನಿಕರಲ್ಲಿ ರಾಮ ಲಕ್ಷ್ಮಣ ಹಾಗೂ ಹನುಮಂತ ಮಾತ್ರ ಅವಳ ರೂಪ ಬಲ್ಲರು. ರಾಮ ಲಕ್ಷ್ಮಣರು ಇದನ್ನು ನಂಬಲಾರರು ಎಂದು ಭಾವಿಸಿದ ಮೇಘನಾದ ಹನುಮನ ಮನಸ್ಸನ್ನು ಯುದ್ಧದಿಂದ ಹಿಮ್ಮೆಟ್ಟಿಸಿ ತನ್ನ ಯಾಗವನ್ನು ಪೂರ್ಣಗೊಳಿಸಲು ಇಂತಹ ಉಪಾಯ ಮಾಡಿದನು._

*ನೃಶಂಸಾನಾರ್ಯ ದುರ್ವೃತ್ತ ಕ್ಷುದ್ರ ಪಾಪಪರಾಕ್ರಮ*
*ಅನಾರ್ಯಸ್ಯೇದೃಶಂ ಕರ್ಮ ಘೃಣಾ ತೇ ನಾಸ್ತಿ ನಿರ್ಘೃಣ*

_ಬಹುಶಃ ಹನುಮನ ಬೈಗುಳ ಇಲ್ಲಿ ಮಾತ್ರ ರಾಮಾಯಣದಲ್ಲಿ ಕಾಣಸಿಗುವುದು. ರಾವಣನಿಗೆ ತಿಳಿಹೇಳುತ್ತಾನೆ ಹೊರತು ಸಿಟ್ಟಿನಿಂದ ನಿಂದಿಸುವುದಿಲ್ಲ ಹನುಮ. ಎಲಾ ದುಷ್ಟ, ಪಾಪಿ, ಘಾತುಕ, ಅಯೋಗ್ಯ, ನೀಚ ಪಾಪಕಾರ್ಯದಲ್ಲಿ ಪರಾಕ್ರಮ ಬೇರೆ! ಅನಾರ್ಯನಾದ ದಸ್ಯುಗಳ ಕೆಲಸವಿದು, ( ಆಗಲೂ ಅನಾಗರಿಕ ವರ್ತನೆ ತೋರುವ ಪಾಶ್ಚಿಮಾತ್ಯ ಜನರು ಬಹುಶಃ ಇದ್ದರು) ಕರುಣೆ ಇಲ್ಲದ ಕ್ರೂರಿ, ಆ ಸಾಧ್ವಿಯ ತುರುಬು ಹಿಡಿದು ನೀನು ಲೋಕದಲ್ಲಿ ವಧ್ಯರಾದ ಕಟುಕರಿಗೂ ಬೇಡವಾದ ಸ್ತ್ರೀಘಾತುಕರಿಗೆ ಮೀಸಲಾದ ನರಕ ಹೊಂದುವೆ. ನೀನು ಸತ್ತು ಪ್ರೇತವಾಗಿ ನರಕದಲ್ಲಿ ಬೀಳುವಿ. ಈ ಸಾಧ್ವಿಯನ್ನು ವಧಿಸುವ ಸಾಹಸ ಮಾಡದಿರು ಎಂದೆಲ್ಲಾ ನಿವೇದಿಸಿದನು. ಕೊಲೆಗಡುಕರೂ ಸ್ತ್ರೀಯರನ್ನು ಕೊಲ್ಲಲು ಹಿಂಜರಿಯುತ್ತಾರೆ ಎಂಬ ಹನುಮಂತನ ಮಾತು ಭಾರತೀಯ ಸಂಸ್ಕೃತಿಯಲ್ಲಿ ಸ್ತ್ರೀಯರಿಗೆ ಕೊಡುತ್ತಿದ್ದ ಮಹತ್ವವನ್ನು ಸಾರುತ್ತದೆ._

ಸಂಗ್ರಹ: ಶ್ರೀನಿಧಿ ಅಭ್ಯಂಕರ್

ಎಲ್ಲಾ ಲೇಖನಗಳಿಗೆ ಅವಲೋಕಿಸಿ
http://shreenidhiabhyankar.blogspot.in/

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩