ರಾಮಾಯಣ ೧೨೭
📕🌳 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌳📕 ಭಾಗ-೧೨೬
*ಸರ್ವೇ ವಿಶಲ್ಯಾ ವಿರುಜಃ ಕ್ಷಣೇನ ಹರಿಪ್ರವೀರಾ ನಿಹತಾಶ್ಚ ಯೇ ಸ್ಯುಃ. ಗಂಧೇನ ತಾಸಾಂ ಪ್ರವರೌಷಧೀನಾಂ ಸುಪ್ತಾ ನಿಶಾಂತೇಷ್ವಿವ ಸಂಪ್ರಬುದ್ಧಾಃ*
_ಹನುಮನು ಯಾವಾಗ ಆ ಓಷಧಪರ್ವತವನ್ನು ಹೊತ್ತುತಂದನೋ ಆ ಕ್ಷಣದಲ್ಲಿ ವಾನರಸೈನಿಕರ ದೇಹದಲ್ಲಿ ನಾಟಿದ್ದ ಬಾಣಗಳು ಹೊರಬಂದವು. ಗಾಯಗಳು ಮಾಗಿದವು. ಸಮಸ್ತರ ಯಾತನೆಗಳೂ ದೂರಹೋದವು. ಮೃತರಾಗಿದ್ದ ಲಕ್ಷಾಂತರ ಕಪಿಗಳು ರಾತ್ರಿ ಮಲಗಿ ಬೆಳಗ್ಗೆ ಏಳುವಂತೆ ಸುಖವಾಗಿ ಎದ್ದು ನಿಂತರು. ಇಲ್ಲಿ ರಾಕ್ಷಸರು ಕೂಡ ಬದುಕಿ ಉಳಿಯುತ್ತಿದ್ದರೇನೋ! ಆದರೆ ಯುದ್ಧದ ಪೂರ್ವದ ಉಪಾಯದಂತೆ ಸತ್ತ ರಾಕ್ಷಸರ ಶವಗಳನ್ನೂ ರಾಕ್ಷಸಭಟರೇ ಸಮುದ್ರಕ್ಕೆ ಎಸೆದುಬಿಡುತ್ತಿದ್ದರು. ಶತ್ರುಗಳಿಗೆ ತಮ್ಮ ಕಡೆಯಿಂದ ಸತ್ತವರೆಷ್ಟು ಎನ್ನುವುದು ತಿಳಿಯಬಾರದೆಂಬ ಉದ್ದೇಶದಿಂದ ಹೀಗೆ ಮಾಡಲಾಗುತ್ತಿತ್ತು. ರಾವಣನ ಆಜ್ಞೆ ಹೀಗೆ ಇತ್ತು. ಹಾಗಾಗಿ ಹನುಮನ ಪರಿಶ್ರಮವು ಅವರನ್ನೂ ಬದುಕಿಸುವಲ್ಲಿ ವಿಫಲವಾಯಿತು. ಅನಂತರ ಮಾರುತಿಯು ಮೊದಲಿನಂತೆಯೇ ಆ ಪರ್ವತವನ್ನು ಹಿಮವತ್ಪರ್ವತಕ್ಕೆ ಸಾಗಿಸಿ ಸೈನ್ಯದೊಡನೆ ಸೇರಿಕೊಂಡನು. ಇಲ್ಲಿ ಕಲಿಯಬೇಕಾದ ಅಂಶ- ಉಪಕಾರ ಆದ ನಂತರ ಅದನ್ನು ತಮ್ಮಲ್ಲೇ ಉಳಿಸಿಕೊಳ್ಳದೇ ಯಥಾಸ್ಥಾನಕ್ಕೆ ಸಾಗಿಸುವ ಉದಾರತೆ ನಮಗೆಲ್ಲ ಮಾದರಿ. ನಾವು ಸಾಕಷ್ಟು ಸಲ ಯಾರ ಬಳಿಯಿಂದಲೋ ಅಥವಾ ಕೆಲವು ಸಾರ್ವಜನಿಕ ಪ್ರದೇಶಗಳಿಂದಲೋ ಉಪಯೋಗ ಆಗುವುದೆಂದು ಹಲವು ವಸ್ತುಗಳನ್ನು ತರುತ್ತೇವೆ. ಆದರೆ ನಮ್ಮ ಕೆಲಸ ಆದ ಕೂಡಲೇ ಕೊಡುವ ಬುದ್ಧಿ ಬಹಳ ಕಡಿಮೆ. ಅಲ್ಲಿ ಜಾಣಮರೆವು ನಮ್ಮನ್ನಾವರಿಸುತ್ತದೆ. ಇಂತಹ ಆಲಸ್ಯ ಬಿಡಬೇಕೆನ್ನುವುದೇ ಹನುಮನ ಕಾರ್ಯದ ಶಿಕ್ಷಣ._
*ತೇಷಾಂ ಗೃಹಸಹಸ್ರಾಣಿ ದದಾಹ ಹುತಭುಕ್ತದಾ ಪ್ರಾಸಾದಾಃ ಪರ್ವತಾಕಾರಾಃ ಪತಂತಿ ಧರಣೀತಲೇ*
_ಅನಂತರ ಸುಗ್ರೀವನ ಆಣತಿಯಂತೆ ಆ ರಾತ್ರಿಯೇ ಪಂಜು ಹಿಡಿದು ಲಂಕೆಗೆ ನುಗ್ಗಿ ಸಿಕ್ಕಸಿಕ್ಕ ಭವನಗಳಿಗೆ ಬೆಂಕಿ ಇಡಲು ಪ್ರಾರಂಭಿಸಿತು ಕಪಿಸೈನ್ಯ. ಇಲ್ಲಿ ಲಕ್ಷಾಂತರ ಪಂಜು ಹತ್ತಿಸಲು ಎಣ್ಣೆ ಬಟ್ಟೆ ಅಥವಾ ತೆಂಗಿನ ಗರಿ ಮೊದಲಾದ ಸಾಮಗ್ರಿ ಜೊತೆಗೆ ಬೆಂಕಿಯ ಉತ್ಪಾದಕತೆ ಇವೆಲ್ಲವೂ ನಮಗೆ ಯೋಚಿಸಲೂ ಕಷ್ಟವಾಗುತ್ತದೆ. ಆಗ ಬೆಂಕಿಕಡ್ಡಿ ಅಥವಾ ಲೈಟರ್ ಮೊದಲಾದ ವಸ್ತುಗಳಿಲ್ಲದೇ ಕಲ್ಲಿಗೆ ತಿಕ್ಕಿ ಅಥವಾ ಮರ ಉಜ್ಜಿ ಬೆಂಕಿಯನ್ನು ಉತ್ಪಾದಿಸಿ ಹೀಗೆ ಒಂದಕ್ಕೊಂದು ಹಚ್ಚುವುದು ಎಷ್ಟು ಕಷ್ಟದ ಕೆಲಸ. ಬಹುಶಃ ಯುದ್ಧಕ್ಕೆ ಹೊರಟಾಗಲೇ ಇಂತಹ ಸಾಮಗ್ರಿಗಳ ಅಪಾರ ಸಂಗ್ರಹ ಇರುತ್ತಿತ್ತೇನೋ! ಹನುಮನು ಹಿಂದೆ ಬೆಂಕಿ ಕೊಟ್ಟ ದ್ದರಿಂದ ಪ್ರೇರಿತರಾದಂತಿದ್ದ ಆ ವಾನರರು ಪುರದ್ವಾರ, ಮಹಡಿ ಮನೆಗಳು, ರಸ್ತೆ, ಗಲ್ಲಿ, ಅರಮನೆ ಹೀಗೆ ಎಲ್ಲೆಡೆ ಸುಟ್ಟರು. ಸಾವಿರಾರು ಮನೆಗಳು ಸುಟ್ಟು ಬೂದಿಯಾದವು. ಹಿಂದೆ ಹನುಮನ ಬೆಂಕಿಗೆ ಸಿಕ್ಕಿ ಪುನರ್ನಿರ್ಮಾಣ ಆಗಿದ್ದ ಮನೆಗಳು ಈಗ ಮತ್ತೆ ಸುಟ್ಟು ಕರಕಲಾದವು. ಪರ್ವತಾಕಾರದ ಬೃಹತ್ ಅರಮನೆಗಳು, ಮಹಡಿ ಮನೆಗಳು ಸುಟ್ಟು ಕುಸಿದುಬಿದ್ದವು. ಅಗುರು, ಚಂದನ, ನುಣುಪಾದ ಮುತ್ತಿನ ಮಣಿಗಳು, ವಜ್ರ, ಹವಳ, ನಾರುಮಡಿ, ಉತ್ತಮವಾದ ರೇಶ್ಮೆಯ ಬಟ್ಟೆ, ಕಂಬಳಿಗಳು, ಉಣ್ಣೆಯ ನಾನಾ ಬಟ್ಟೆಗಳೆಲ್ಲವೂ ಕ್ಷಣಾರ್ಧದಲ್ಲಿ ಸುಟ್ಟು ಬೂದಿಯಾದವು. ಯೋಧರ ಕವಚಗಳು, ಖಡ್ಗಗಳು, ಧನುಸ್ಸುಗಳು, ಹೆದೆ, ಬಾಣಗಳು, ತೋಮರಗಳು,ಅಂಕುಶಗಳು, ಶಕ್ತಿ ಮೊದಲಾದ ಆಯುಧಗಳು, ರೋಮದಿಂದ ನಿರ್ಮಿತವಾದ ಚಾಮರಾದಿಗಳೂ, ಹುಲಿಯ ಚರ್ಮ, ಕಸ್ತೂರಿ , ಪುನಗು ಮೊದಲಾದ ಸುಗಂಧ ದ್ರವ್ಯಗಳು ಸುಟ್ಟು ನಷ್ಟವಾದವು. ಯುದ್ಧದಲ್ಲಿ ಆದ ನಷ್ಟಕ್ಕಿಂತ ಹೆಚ್ಚು ನಷ್ಟ ಬಹುಶಃ ಈ ಅಗ್ನಿ ಅನಾಹುತದಿಂದ ಉಂಟಾಗಿರಬೇಕು. ಮುಂದಿನ ದಾಳಿಕೋರರಿಗೆ ಬಹುಶಃ ಈ ಘಟನೆ ಬೆಂಕಿ ಹಚ್ಚಲು ಪ್ರೇರಣೆ ಆಗಿರಬೇಕು._
ಸಂಗ್ರಹ: ಶ್ರೀನಿಧಿ ಅಭ್ಯಂಕರ್
ಎಲ್ಲಾ ಲೇಖನಗಳಿಗೆ ಅವಲೋಕಿಸಿ
http://shreenidhiabhyankar.blogspot.in/
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ