ಪದಶಕ್ತಿ ೨೫

ಪದಶಕ್ತಿ= ೨೫

*ವಾಕ್*

_ವಚ್ ಧಾತು, ಕ್ವಿಪ್ ಪ್ರತ್ಯಯದ ಕೂಡುವಿಕೆಯಿಂದ ಹುಟ್ಟುವ ಶಬ್ದ. ಮಾತು, ವಾಕ್ಯಗಳ ಸಮೂಹ, ಅರ್ಥವತ್ತಾದ ಶಬ್ದಗಳು ಇವೆಲ್ಲವೂ ವಾಕ್ ಶಬ್ದದ ಅರ್ಥ._

_ಮಾತಿಗೆ ಸಂಬಂಧಿಸಿದ ಎಂಬ ಅರ್ಥ ತಂದುಕೊಡುವ ಶಬ್ದ ವಾಕ ಎಂಬುದು. *ನಮೋ ವಾಕಂ ಪ್ರಶಾಸ್ಮಹೇ* ಎಂಬ ಸಂಸ್ಕೃತದ ಶ್ಲೋಕದ ಸಾಲು ಸುಂದರ ಮಾತನ್ನು ಹೊಗಳುತ್ತಿದೆ‌. ಸಂಸ್ಕೃತದಲ್ಲಿ ಉಚ್ಚಾರಣೆಗೆ, ಅರ್ಥ ಮಾಡಿಕೊಳ್ಳುವುದಕ್ಕೆ ತುಂಬಾ ಮಹತ್ವವಿದೆ. *ಏಕಃ ಶಬ್ದಃ ಸುಷ್ಟುಪ್ ಪ್ರಯುಕ್ತಃ ಸಮ್ಯಕ್ ಜ್ಞಾತಃ ಸ್ವರ್ಗೇ ಲೋಕೇ ಕಾಮಧುಕ್ ಭವತಿ* ಎಂಬ ಮಾತು ಇದನ್ನು ಸ್ಪಷ್ಟಪಡಿಸುತ್ತದೆ. ಒಂದು ಶಬ್ದವನ್ನು ಸರಿಯಾಗಿ ಅರಿತು ಉಚ್ಚರಿಸಿದರೆ ಸ್ವರ್ಗದ ಸಾಧನಗಳು ನಮಗೆ ಬೇಕಾದ್ದನ್ನು ಕೊಡಬಲ್ಲವು ಎಂಬ ಮಾತಿನ ಪ್ರಶಂಸೆಯು ಆಡುವ ಮಾತಿನ ಬಗೆಗೆ ಎಷ್ಟು ಗಮನವಿದ್ದರೂ ಸಾಲದೆಂಬುದನ್ನು ಸಾರುತ್ತದೆ._

ವಾಕ್ ಶಬ್ದಕ್ಕೆ ಇನ್ನೊಂದು ಮುಖ್ಯ ಅರ್ಥ ಸರಸ್ವತಿ. ವಾಗ್ದೇವಿ ಅವಳೇ ಸರಿ. ವಾಗೀಶನು ಬ್ರಹ್ಮ. ಸರಸ್ವತಿಯ ಪತಿ ಎಂಬ ಸಾಮಾನ್ಯ ಅರ್ಥದಲ್ಲಿ. ನಮ್ಮ ಕ್ರಿಯೆಗಳಲ್ಲಿ ಮಾತೂ ಒಂದು. ಅದರ ನಿಯಂತ್ರಕನು ಬ್ರಹ್ಮನು. ಆ ಅರ್ಥದಲ್ಲಿ ಅವನು ವಾಗೀಶನು. ಸಾಹಿತ್ಯದಲ್ಲಿ ಲೆಕ್ಕವಿಲ್ಲದಷ್ಟು ಕಡೆ ಈ ಪದದ ಪ್ರಯೋಗವಿದೆ.

ಕಾಳಿದಾಸನ ರಘುವಂಶ ಕಾವ್ಯದ ಮಂಗಲಶ್ಲೋಕ *ವಾಗರ್ಥಾವಿವ ಸಂಪೃಕ್ತೌ* ಎಂದೇ ಆರಂಭವಾಗುವುದು. ಮಾತು ಮತ್ತು ಅರ್ಥಗಳು ಬಿಟ್ಟಿರದ ಬಂಧ ಹೊಂದಿರುವಂತೆ ಒಂದಾಗಿರುವ ಪಾರ್ವತೀಪರಮೇಶ್ವರರು ಮಂಗಳವನ್ನು ಉಂಟುಮಾಡಲಿ ಎಂದು.

*ಯತೋ ವಾಚೋ ನಿವರ್ತಂತೇ* ಎಂಬುದು ತೈತ್ತಿರೀಯ ಉಪನಿಷತ್ತಿನ ಪ್ರಸಿದ್ಧ ವಾಕ್ಯ. ಭಗವಂತನು ಮಾತಿಗೂ ನಿಲುಕದ ಗುಣಗಳ ಗಣಿ ಎಂಬ ಅರ್ಥದಲ್ಲಿ ಈ ಮಾತು.

ಮಾತು ಹೇಗಿರಬೇಕೆಂದು ಮನುಸ್ಮೃತಿ ಸಾರುತ್ತದೆ. *ವಾಕ್ ಚೈವ ಮಧುರಾ ಶ್ಲಕ್ಷ್ಣಾ ಪ್ರಯೋಜ್ಯಾ ಧರ್ಮಮಿಚ್ಛತಾ*  ಮಾತು ಮಧುರವಾಗಿ ಮೃದುವಾಗಿದ್ದರೆ ಅದು ಧರ್ಮವತ್ತಾಗುವುದು. ಮೃದು ಧ್ವನಿ ಇದ್ದು ಶಬ್ದಗಳು ಕಠಿಣವಾದರೂ ಸಲ್ಲ, ಶಬ್ದಗಳು ಮಧುರವಾಗಿದ್ದು ಮುಖಕ್ಕೆ ಹೊಡೆದಂತಿದ್ದರೂ ಸಲ್ಲ. ಸಲ್ಲುವ ಮಾತು ಇದೆರಡರ ಪಾಕವಾಗಬೇಕು.

ಈ ಪದ ಬೇರೆ ಪದಗಳೊಡನೆ ಎಷ್ಟು ಬಳಕೆಯಾಗುವುದೆಂದರೆ ಮಾತಿನ ಮಹತ್ವ ಅದರಿಂದಲೇ ತಿಳಿಯುತ್ತದೆ. *ವಾಗ್ದಾನ, ವಾಗ್ರೋಧ, ವಾಗ್ದಂಡನ, ವಾಕ್ಪಟು, ವಾಗ್ದೋಷ, ವಾಕ್ಪಾರುಷ್ಯ ಹೀಗೆ ಈ ಪದದ ವ್ಯಾಪ್ತಿ ಮಾತಿನಷ್ಟೇ ದೊಡ್ಡದು.

ಕನ್ನಡ ಸಾಹಿತ್ಯದ ಹಲವೆಡೆ ಈ ಪದದ ಬಳಕೆ ಇದೆ. ದಾಸರ ಪ್ರಸಿದ್ಧ ಕೀರ್ತನೆಯಲ್ಲಿ *ವರವ ಕೊಡು ಎನಗೆ ವಾಗ್ದೇವಿ* ಎನ್ನುತ್ತಾ ಮಾತಿನೊಡತಿ ಆ ಸರಸ್ವತಿಯನ್ನು ಸ್ತುತಿಸುವಲ್ಲಿ ಈ ಪ್ರಯೋಗ ನೋಡಬಹುದು. ನಮ್ಮ ವಾಕ್ಕು ಪರರನ್ನು ಕುಕ್ಕದಂತೆ ಇರಲೆಂದು ಆಶಿಸೋಣ.

ಸಂಗ್ರಹ🖊ಶ್ರೀನಿಧಿ ಅಭ್ಯಂಕರ್.

ಎಲ್ಲಾ  ಲೇಖನಗಳಿಗೆ ಅವಲೋಕಿಸಿ
http://shreenidhiabhyankar.blogspot.in/

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩