ಧಾರ್ಮಿಕ ವಿಷಯ ೧೬

🔥ಧಾರ್ಮಿಕ ವಿಷಯಗಳು🔥
ಭಾಗ-೧೬

*ಅಪಮೃತ್ಯು*

_ಸಾಧಾರಣವಾಗಿ ಲೋಕರೂಢಿಯಲ್ಲಿರುವ ಶಬ್ದ ಇದು. ತನ್ನ ಆತ್ಮವನ್ನು ಸಹಜವಾಗಿ ದೇಹವನ್ನು ತ್ಯಜಿಸಲು ಬಿಡದೇ ಮೊದಲೇ ಪ್ರಾಣತ್ಯಾಗ ಮಾಡುವುದು ಆತ್ಮಹತ್ಯೆ. ಇದು ಅಪಮೃತ್ಯು.*ಅಪಕೃಷ್ಟಃ ರೋಗೇಣ ವಿನಾ ಮೃತ್ಯುಃ*  ಎಂಬಂತೆ ರೋಗಗಳಾವುದೂ ಬರದೇ ಅಥವಾ ಮುಪ್ಪಿನ ಸಹಜ ಸಮಸ್ಯೆಗಳೂ ಬರದೇ ಉಂಟಾದ ಸಾವು ಅಪಮೃತ್ಯು._

_ವಾಹನ ಅಪಘಾತ, ಪಕ್ಷಿ- ಹಾವು-ಮೀನು- ಹಸು ಮೊದಲಾದವುಗಳ ಕೊಂಬು- ಉಗುರು- ಹುಲಿ ಮೊದಲಾದ ಕ್ರೂರ ಮೃಗಗಳ ದಾಳಿಯಿಂದ ಸಾವು ಉಂಟಾದಾಗ, ಪರ್ವತ-ಮಹಡಿ ಮೊದಲಾದ ಎತ್ತರದ ಪ್ರದೇಶದಿಂದ ಬಿದ್ದಾಗ, ಅನೇಕ ದಿನಗಳ ಉಪವಾಸದಿಂದ, ವಜ್ರ-ವಿಷ ಮೊದಲಾದವುಗಳ ಸೇವನೆ, ಬೆಂಕಿ ತಾಗಿ, ಬಂಧನದಲ್ಲಿ ಸೊರಗಿ ಅಥವಾ ಕೊರಗಿ, ನೀರಿನ ಸೆಳೆತಕ್ಕೆ ಸಿಕ್ಕಿ, ಆಯುಧಗಳ ಹೊಡೆತದಿಂದ, ಆಟವಾಡುವ ಹುಮ್ಮಸ್ಸಿನಲ್ಲಿ ಉಂಟಾದ ಆಘಾತ, ಸಿಡಿಲು- ವಿದ್ಯುತ್ ಮೊದಲಾದ ಆಘಾತಗಳಿಂದ ಉಂಟಾದ ಮರಣಗಳೆಲ್ಲವೂ ಅಪಮೃತ್ಯು. ರಾಜನಿಂದ ಶಿಕ್ಷೆಗೆ ಗುರಿಯಾಗಿ ಸಾವು, ಪರಪತ್ನಿಯರ ಸಂಗ ಮಾಡಿ ಅವರ ಪತಿಯರ ಹೊಡೆತದಿಂದುಂಟಾದ ಸಾವು, ಅಪಮಾನಗಳ ಸರಪಳಿಯಿಂದ ನೊಂದುಂಟಾದ ಸಾವುಗಳೆಲ್ಲವೂ ಅಪಮೃತ್ಯು._

_ಧರ್ಮಸಿಂಧುವಿನ ಪ್ರಕಾರ ಇಂತಹ ಅಪಮೃತ್ಯು ಸಂಭವಿಸಿದಾಗ ಸಂಬಂಧಿಗಳಿಗೆ ಸೂತಕವಿಲ್ಲ. ಇವರ ಶವಸ್ಪರ್ಶ- ರೋದನ- ವಹನ- ದಹನ ಮೊದಲಾದವುಗಳಿಲ್ಲ. ಇಂತಹ ದೇಹವನ್ನು ನೀರಿನಲ್ಲಿ ವಿಸರ್ಜಿಸಬೇಕು. ಈ ಕಾಲದಲ್ಲಿ ಈ ಪ್ರಕ್ರಿಯೆ ಕಷ್ಟ. ಒಂದು ವರ್ಷ ಆ ವ್ಯಕ್ತಿಯ ಪಾಪಕರ್ಮಗಳಿಗೂ, ಅದರ ಸಂಬಂಧದಿಂದ ನಮಗುಂಟಾಗುವ ತೊಂದರೆಗೂ ಪ್ರಾಯಶ್ಚಿತ್ತ ಪಡೆದು ಅನಂತರ ಔರ್ಧ್ವದೇಹಿಕ ಕ್ರಿಯೆ ಮಾಡಬಹುದೆನ್ನುವುದು ಶಾಸ್ತ್ರ._

_ಪ್ರಾಯಶ್ಚಿತ್ತದ ಒಂದು ಬಗೆ ಕೃಚ್ಛ್ರದ ಆಚರಣೆ. ಗೋಮೂತ್ರ, ಗೋಮಯ, ಹಾಲು, ತುಪ್ಪ, ಕುಶೋದಕ ಇವುಗಳನ್ನು ಮಾತ್ರ ಸೇವಿಸಿ ಒಂದು ದಿನ, ಮೂರು ದಿನ, ಏಳು ದಿನ ಹೀಗೆ ಯಥಾಸಾಧ್ಯ ವರ್ಷದಲ್ಲಿ ಹಲವು ಬಾರಿ ಆಚರಣೆ ಮಾಡುವುದು. ಇನ್ನೊಂದು ಬಗೆ-ಶುಕ್ಲಪಕ್ಷದ ಚಂದ್ರನ ಬೆಳವಣಿಗೆ ಹೊಂದಿದಂತೆ ಮೊದಲ ದಿನ ಒಂದು ತುತ್ತು, ಹದಿನೈದನೇ ದಿನ ಹದಿನೈದು ತುತ್ತು, ಕೃಷ್ಣಪಕ್ಷದಲ್ಲಿ ಕಡಿಮೆ ಮಾಡುತ್ತಾ ಅಮಾವಾಸ್ಯೆಗೆ ಉಪವಾಸ ಮಾಡಿ ಚಾಂದ್ರಾಯಣ ವ್ರತವನ್ನು ಕೊನೆಗೊಳಿಸುವುದು. ಇಂತಹ ಪ್ರಾಯಶ್ಚಿತ್ತ ಆಚರಿಸಿ ಅನಂತರ ನಾರಾಯಣ ಬಲಿಯನ್ನೂ ಮಾಡಿ ಅನಂತರ ಮೃತನ/ಳ ಅಂತ್ಯಕ್ರಿಯೆ ಮಾಡಬಹುದೆನ್ನುತ್ತದೆ ಶಾಸ್ತ್ರ. ಸೂತಕ ಹಿಡಿಯುವುದೂ ವರ್ಷ ಕಳೆದ ಮೇಲೆಯೇ ಸರಿ. ಎಲೆಯ ಬಾಣ ಮಾಡಿ ದೇಹದ ಬದಲು ಅದನ್ನೇ ದಹನ ಮಾಡಿ, ಸೂತಕ ಹಿಡಿದು ಪೂರ್ಣ ಹದಿಮೂರು ದಿನಗಳ ಕರ್ಮಗಳನ್ನು ಮಾಡಬೇಕು. ಕೆಲವರ ಪಕ್ಷದಲ್ಲಿ ಮೂರು ಚಾಂದ್ರಾಯಣ ವ್ರತ ಆಚರಿಸಿ ಮೃತನ ಅಸ್ಥಿಯನ್ನು ಇಟ್ಟುಕೊಂಡು ವರ್ಷ ಕಳೆದ ಮೇಲೆ  ಕ್ರಿಯೆ. ಆತ್ಮಹತ್ಯೆ ಮಾಡಿಕೊಂಡಾಗಲಂತೂ ಪುತ್ರ ಅಥವಾ ಪುತ್ರಿಯರು ಬ್ರಹ್ಮಹತ್ಯಾದಿ ದೋಷಗಳಿಗೆ ಪ್ರಾಯಶ್ಚಿತ್ತ ತೆಗೆದುಕೊಂಡು, ಚಾಂದ್ರಾಯಣ ಮತ್ತು ಎರಡು ಬಾರಿ ತಪ್ತಕೃಚ್ಛ್ರ ಆಚರಿಸಿ ನಂತರ ನಾರಾಯಣ ಬಲಿಪೂರ್ವಕ ದಹನ. ಅನಂತರ ಯಥಾಪ್ರಕಾರ ವರ್ಷ ಆಗುತ್ತಿದ್ದಂತೆ ಕ್ರಿಯೆ. ಇದರ ಬಗ್ಗೆ ಪ್ರಮಾಣ ಭೇದ ಇರಬಹುದು. ಒಟ್ಟಾರೆ ಅಪಮೃತ್ಯು ಜೀವಿಗೆ ಒಳ್ಳೆಯದಲ್ಲ ಎನ್ನುವುದು ಶಾಸ್ತ್ರದೃಷ್ಟಿಯಲ್ಲೂ, ಲೋಕದೃಷ್ಟಿಯಲ್ಲೂ ಸತ್ಯ. ಹಾಗಾಗಿ ಸಂತರ ಮಾತು- ಅನಾಯಾಸೇನ ಮರಣಂ ವಿನಾ ದೈನ್ಯೇನ ಜೀವನಮ್ ಎಂದು._

ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.in/

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩