ರಾಮಾಯಣ ೧೨೭
📕🌳 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌳📕 ಭಾಗ-೧೨೭
*ಜುಹ್ವತಶ್ಚಾಪಿ ತತ್ರಾಗ್ನಿಂ ರಕ್ತೋಷ್ಣೀಷಧರಾಃ ಸ್ತ್ರಿಯಃ ಆಜಗ್ಮುಸ್ತತ್ರ ಸಂಭ್ರಾಂತಾ ರಾಕ್ಷಸ್ಯೋ ಯತ್ರ ರಾವಣಿಃ*
_ಲಂಕಾದಹನ ಎರಡನೇ ಬಾರಿಗೆ ನಡೆದ ಮೇಲೆ ರಾವಣನು ಆತಂಕಿತನಾಗಿ ( ಅವನೇ ಆತಂಕವಾದಿ. ಅವನಿಗೇ ಆತಂಕ!) ಪ್ರಹಸ್ತ ಪುತ್ರ, ಖರ ಪುತ್ರ, ಕುಂಭಕರ್ಣ ಪುತ್ರರಾದ ಕುಂಭ-ನಿಕುಂಭ, ಮಕರಾಕ್ಷ ಮೊದಲಾದ ವೀರರನ್ನು ಕಳುಹಿದಾಗ ಅಂಗದನೇ ಮೊದಲಾದವರು ಅವರನ್ನು ಸಂಹರಿಸುತ್ತಾರೆ. ಮತ್ತೆ ರಾವಣನು ಇಂದ್ರಜಿತುವನ್ನು ಯುದ್ಧಕ್ಕೆ ಕಳುಹಿಸುತ್ತಾನೆ. ಇಂದ್ರಜಿತುವಿನ ಒಂದು ನಿಯಮ ಯುದ್ಧಕ್ಕೆ ಹೋಗುವ ಮುನ್ನ ಯಜ್ಞ ಮಾಡಿ ದೇವರ ಅನುಗ್ರಹ ಪಡೆದು ಮುನ್ನಡೆಯುವುದು. ಇದು ನಮಗೆ ಸಕಲ ಕಾರ್ಯಗಳಿಗೆ ಮಾದರಿ. ಯಾವೊಂದು ಕಾರ್ಯಕ್ಕೆ ಹೊರಡುವ ಮುನ್ನ ದೇವತೆಗಳನ್ನು ಪ್ರಾರ್ಥಿಸಿ ಅವರ ಅನುಜ್ಞೆ ಪಡೆದು ಹೊರಟರೆ ಯಶಸ್ಸು ಸಿಗಬಹುದು ಎಂಬ ನಂಬಿಕೆ. ರಾಕ್ಷಸನಾದ ಇಂದ್ರಜಿತುವಿಗಿದ್ದ ನಂಬಿಕೆ ಹಿಂದುಗಳೆಂದು ಹೆಮ್ಮೆ ಪಡುವ ನಮಗಿಲ್ಲ ಎನ್ನುವುದು ದುರ್ದೈವ. ಯುದ್ಧಕ್ಕೆ ಸಜ್ಜಾದ ಅವನು ಒಡನೆಯೇ ಯಜ್ಞ ಭೂಮಿಗೆ ಹೋಗಿ ಆಭಿಚಾರಿಕ ಹೋಮದ ಸಂಕಲ್ಪ ಮಾಡಿದನು. ಋತ್ವಿಜರು ಧರಿಸಲೆಂದು ದಾಸಿಯರು ಕೆಂಪು ಬಣ್ಣದ ಉಷ್ಣೀಷಗಳನ್ನು ತಂದರು. ( ರುಮಾಲು ಅಥವಾ ಮುಂಡಾಸು) *ಲೋಹಿತೋಷ್ಣೀಷಾಃ ಪ್ರಚರಂತಿ* ಎಂಬ ಶ್ರುತಿ ವಾಕ್ಯದಂತೆ ಕೆಂಪು ಬಣ್ಣದ ಮುಂಡಾಸು ಸುತ್ತಿಕೊಂಡು ಯಜ್ಞದಲ್ಲಿ ಭಾಗವಹಿಸುತ್ತಾರೆ. ಈಗಲೂ ಸ್ಮಾರ್ತ ಯಜ್ಞಗಳಲ್ಲಿ ಇದು ಬಳಕೆ ನಿಂತಿದ್ದರೂ ಶ್ರೌತ ಯಜ್ಞಗಳಲ್ಲಿ ಮುಂಡಾಸು ಕಟ್ಟುತ್ತಾರೆ. ಬಡಗಿನ ಯಕ್ಷಗಾನದ ಹಿಮ್ಮೇಳದವರು ಹೆಚ್ಚಾಗಿ ಕೆಂಪು ಬಣ್ಣದ ಶಿರೋವಸ್ತ್ರ ಕಟ್ಟುತ್ತಾರೆ. ಅದೂ ಇದೇ ಪರಂಪರೆಯನ್ನು ಅನುಸರಿಸಿ ಬಂದಿದ್ದಿರಬೇಕು. ಆ ಯಜ್ಞ ಆಭಿಚಾರಿಕ ಅಂದರೆ ಕೆಟ್ಟ ಉದ್ದೇಶ ಹೊಂದಿರುವ ಕಾರಣ ದ್ರವ್ಯಗಳು ವಿಭಿನ್ನವಾಗಿದ್ದವು. ತೋಮರ, ಬಾಣ ಮೊದಲಾದ ಆಯುಧಗಳೂ, ದರ್ಭೆಯಂತೆ ಕಾಣುವ ಒಂದು ಬಗೆಯ ಹುಲ್ಲೂ, ತಾರೆಯ ಮರದ ಸಮಿಧೆಗಳೂ, ಕೆಂಪು ಬಟ್ಟೆಗಳೂ, ಕಬ್ಬಿಣದ ಸ್ರುವ ಸಿದ್ಧವಾದವು. ಕಬ್ಬಿಣ ಇಂತಹ ಕರ್ಮಕ್ಕೆ ಮಾತ್ರ ಉಪಯೋಗಿ. ಲೋಹಗಳಲ್ಲಿ ದೇವತಾ ಕಾರ್ಯಕ್ಕೆ ನಿಷಿದ್ಧ ಲೋಹವದು. ಈಗ ಮಾತ್ರ ಜನರು ಹಿತ್ತಾಳೆ ತಾಮ್ರ ಬೆಳ್ಳಿಗೆ ಹೆಚ್ಚು ಬೆಲೆಯೆಂದು ಕಬ್ಬಿಣದ ಇನ್ನೊಂದು ರೂಪ ಸ್ಟೀಲಿನ ಪಾತ್ರೆಗಳನ್ನು ಸಹಜವೆಂಬಂತೆ ಬಳಸುತ್ತಾರೆ. ಅನಂತರ ಆಯುಧಗಳಿಂದ ಅಗ್ನಿಯನ್ನು ಜ್ವಲಿಸಿ ಜೀವಂತ ಕಪ್ಪು ಮೇಕೆಯ ಕತ್ತನ್ನು ಅಗ್ನಿಯಲ್ಲಿ ಹೋಮ ಮಾಡಿದನು. ಇಲ್ಲಿ ಮಹರ್ಷಿಗಳು ಹೊಗೆಯಿಲ್ಲದ ಬೆಂಕಿ ಎಂದು ನುಡಿದಿದ್ದಾರೆ. ಯಜ್ಞ ಮಾಡುವಾಗ ಯಾವಾಗಲೂ ಹೊಗೆಯು ಅತ್ಯಲ್ಪ ಪ್ರಮಾಣದಲ್ಲಿದ್ದರೆ ಅದು ದೇವರಿಗೆ ಸಲ್ಲುತ್ತದೆ. ಹಾಗಿಲ್ಲದೆ ಹೋದಲ್ಲಿ ಕೊಟ್ಟ ಆಹುತಿ ಹುತವಾಗದೆ ಸುತ್ತ ಕೂತವರ ಆರೋಗ್ಯ ಹಾಳಾದೀತು ಅಷ್ಟೇ. ಒಮ್ಮೆ ಗಾಳಿ ಹಾಕಿದ ಕ್ಷಣವೇ ಮಹಾಜ್ವಾಲೆಯೊಡನೆ ಹೊತ್ತಿ ಉರಿದ ಬೆಂಕಿ ಇಂದ್ರಜಿತುವಿಗೆ ಶುಭಸೂಚನೆ ಕೊಡುತ್ತದೆ. ಇಂದ್ರಜಿತುವಿನ ನಿಷ್ಠೆ ಮೆಚ್ಚಬೇಕಾದದ್ದು. ಆದರೆ ಅವನು ದೇವತೆಗಳನ್ನು ಮೆಚ್ಚಿಸಲು ಆರಿಸಿದ ಮಾರ್ಗ ಕೆಟ್ಟದಿತ್ತು._
ಸಂಗ್ರಹ: ಶ್ರೀನಿಧಿ ಅಭ್ಯಂಕರ್
ಎಲ್ಲಾ ಲೇಖನಗಳಿಗೆ ಅವಲೋಕಿಸಿ
http://shreenidhiabhyankar.blogspot.in/
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ