ಪದಶಕ್ತಿ ೨೪

📝📕ಪದ ಶಕ್ತಿ ೨೪📕📝

*ಕುಮಾರ*

_ಕಾರ್ತಿಕೇಯನ ಅಥವಾ ಸುಬ್ರಹ್ಮಣ್ಯನ ಪ್ರಸಿದ್ಧ ಹೆಸರು‌. ಸುಬ್ರಮಣ್ಯದ ಪರ್ವತವನ್ನೂ ಕುಮಾರ ಪರ್ವತವೆಂದೂ, ಹರಿಯುವ ನದಿಯನ್ನೂ ಕುಮಾರ ಧಾರಾ ಎಂದು ಕರೆಯುತ್ತಾರೆ. ಹಾಗಾದರೆ ಏನೀ ಪದದ ಅರ್ಥ ಎಂದರೆ ಬಹುಅರ್ಥಗರ್ಭಿತ ಪದವಿದು. ಕುಮಾರಯತಿ ಅಂದರೆ ಆಟವಾಡುತ್ತಾನೆ ಹಾಗಾಗಿ ಕುಮಾರ. ರಾಕ್ಷಸರೊಡನೆಯ ಸಂಗ್ರಾಮ ಅವನಿಗೊಂದು ಆಟ ಎನ್ನಬಹುದು. ಕುತ್ಸಿತಃ ಮಾರಃ ಎಂದರೆ ಮಾರನು ಇವನ ವಿಷಯದಲ್ಲಿ ಪ್ರಭಾವ ಬೀರಲಾರನು. ಜಿತೇಂದ್ರಿಯನು ಈ ಕುಮಾರನು ಅಥವಾ ಸತಿ-ಪತಿಯರನ್ನು ಒಂದುಗೂಡಿಸಹೋಗಿ ದೇಹಾವಸಾನ ಮಾಡಿಕೊಂಡ ಮಾರನ ಕಾರಣದಿಂದ ಹುಟ್ಟಿದವನು ಈ ಕುಮಾರ. ಮಾರಯತಿ ಕೌ ಅಂದರೆ ದುಷ್ಟರನ್ನು ದಮನಿಸುವನಾದ್ದರಿಂದ ಕುಮಾರ. ಯುವರಾಜನೆಂಬ ಅರ್ಥವೂ ಇದೆ. ದೇವತೆಗಳ ಯುವರಾಜ ಅವನೇ ಅಲ್ಲವೇ! ಗಿಳಿಗೊಂದು ಪರ್ಯಾಯ ಈ ಹೆಸರು. ಕುದುರೆಯ ನಿಯಂತ್ರಕನಿಗೂ, ವರುಣವೆಂಬ ಒಂದು ಜಾತಿಯ ಮರಕ್ಕೂ ಕುಮಾರ ಎಂಬ ಹೆಸರಿದೆ. ಐದು ವರ್ಷದ ಬಾಲಕನು ಕುಮಾರ. ಬಹಳ ಪುರಾತನವಾದ ನದಗಳಲ್ಲಿ ಒಂದಾದ ಸಿಂಧುವಿಗೆ ಇನ್ನೊಂದು ಹೆಸರು ಕುಮಾರ.( ಸಂಸ್ಕೃತದಲ್ಲಿ ನದ ಎಂದರೆ ಗಂಡು ನದಿ) ಜೈನರ ಒಂದು ಭೇದ ಅಥವಾ ಜಾತಿ ಈ ಕುಮಾರ. ಅವಿವಾಹಿತನು ಕುಮಾರನಾದರೂ ಷಣ್ಮುಖನು ಆ ಅರ್ಥದಲ್ಲಿ ಅಲ್ಲ.‌ ಅವನು ದೇವಸೇನಾಪತಿ. ಸಂಗೀತದ ಒಂದು ಸ್ವರಭೇದ ಕುಮಾರ. ಮಕ್ಕಳನ್ನು ರಚ್ಚೆ ಹಿಡಿಸುವಂತೆ ಮಾಡುವ ಒಂದು ಬಗೆಯ ಬಾಲಗ್ರಹವೂ ಕುಮಾರ. ಹೀಗೆ ನಾನಾ ಅರ್ಥಗಳಿದ್ದರೂ ಸಹಜವಾಗಿ ಗೋಚರಿಸುವವನು ಶರವಣ. ಮಧ್ಯದ ಅಕ್ಷರಗಳನ್ನು ತಿರುಗಿಸಿ ನಮಗೆ ಕೊಡಲೆಂದು ಬೇಡಿಕೊಳ್ಳೋಣ._

ಸಾಹಿತ್ಯದ ಹಲವೆಡೆ ಈ ಪದ ಬಳಕೆಯಾಗಿದೆ.

*अग्नेः पुत्त्रः कुमारस्तु श्रीमान्शरवणालयः तस्य शाखो विशाखश्च नैगमेयश्च पृष्ठजः ।*

_ಅಗ್ನಿಯ ಪುತ್ರನೆಂದು ಉಲ್ಲೇಖಿತನಾದ ಕುಮಾರನ ಲಕ್ಷಣ ಇಲ್ಲಿ ಹೇಳಲಾಗಿದೆ._

ಕನಕದಾಸರು ನಮ್ಮಮ್ಮ ಶಾರದೆ ಪಟ್ಟದರಾಣಿ ಪಾರ್ವತಿಯ ಕುಮಾರನು ಎನ್ನುತ್ತಾ ಸ್ತುತಿಸಿದ್ದು ಗಣಪನ್ನಾದರೂ ಕುಮಾರನೂ ಪಾರ್ವತಿಯ ಕುವರನಲ್ಲವೇ!




ಸಂಗ್ರಹ. ಶ್ರೀನಿಧಿ ಅಭ್ಯಂಕರ್

ಎಲ್ಲಾ ಲೇಖನಗಳಿಗಾಗಿ ವೀಕ್ಷಿಸಿ http://shreenidhiabhyankar.blogspot.in/

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩