ಚಾರುದತ್ತ ೧೪

👳ಚಾರುದತ್ತ  ಬೆಳಕು-೧೩🌞

*रक्तं च तारमधुरं च समं स्फुटं च भावार्पितं च न च साभिनप्रयोगम् । किं वा बहु प्रशस्य विविधैर्बहु तत्तदुक्त्वा भित्त्यन्तरं यदि भवेद् युवतीति विद्याम् ।।*

_ನಾಯಕನು ವೀಣಾನಾದವನ್ನು ಆಸ್ವಾದಿಸುತ್ತಾ  ವೀಣೆಯ ಜೊತೆಗೆ ಹಾಡುತ್ತಿರುವ ಗೀತದ ಬಗ್ಗೆ ವ್ಯಾಖ್ಯಾನ ಮಾಡುತ್ತಿರುವನು. ಒಂದು ಸುಮಧುರ ನಾದದ ಅಥವಾ ಗಾಯನದ ಲಕ್ಷಣವನ್ನು ಇಲ್ಲಿ ನಿರೂಪಿಸುತ್ತಿದ್ದಾನೆ. ಎಲ್ಲಾ ರೀತಿಯಿಂದಲೂ ಗೀತವು ಮಧುರವಾಗಿದೆ. ಈ ಪದ್ಯದ  ಹಾಡುವಿಕೆಯಲ್ಲಿ ತುಂಬಾ ಅನುರಾಗ ಇದೆ. ಯಾವ ವಾದ್ಯವಿರಲಿ- ಪದ್ಯವಿರಲಿ ಭಾವ ತುಂಬಿದಾಗ ಮಾತ್ರ ಅದು ಮನಮುಟ್ಟುವುದು. ಹೊರ ಹೊಮ್ಮುತ್ತಿರುವ ಧ್ವನಿ ಎತ್ತರದಲ್ಲಿ ಇದೆ. ಕೀರಲು ಅಥವಾ ತುಂಬಾ ಸಣ್ಣ ಧ್ವನಿಯಾದರೂ ಅದು ಕೇಳುಗರನ್ನು ಸರಿಯಾಗಿ ತಲುಪಲಾರದು. ಈ ನಾದ ಮತ್ತೆ ಮತ್ತೆ ಕೇಳಬೇಕೆನ್ನುವ ಮಾಧುರ್ಯವನ್ನು ಒಳಗೊಂಡಿದೆ. ಶ್ರುತಿಯು ಸುಖಕ್ಕೆ ಕಾರಣವಾಗಬೇಕೇ ಹೊರತು ಅನಾದರಕ್ಕೋ ಬೇಸರಕ್ಕೋ ಅಲ್ಲ. ಹಾಡುತ್ತಿರುವವನ ರಾಗ-ತಾಳ- ಸ್ವರ ಅಥವಾ ಶ್ರುತಿ ಇವುಗಳೆಲ್ಲವೂ ಒಂದಕ್ಕೊಂದು ಪೂರಕವಾಗಿ ಹೊಮ್ಮುತ್ತಿವೆ. ಯಾವೊಂದೂ ತನ್ನದೇ ದಾರಿ ಹಿಡಿದಿಲ್ಲ. ಕೇಳುಗನಿಗೆ ಸಂದೇಹ ಹುಟ್ಟುವಂತಿಲ್ಲ ರಾಗದ ಆಯ್ಕೆ, ಸ್ಫುಟವಾಗಿ ತೋರುತ್ತಿದೆ. ಇದು ಬಹಳ ಮುಖ್ಯ. ರಾಗವೊಂದನ್ನು ಆರಿಸಿಕೊಂಡಾಗ ಅದೇ ರಾಗಕ್ಕೆ ಬದ್ಧರಾಗಿರಬೇಕೇ ಹೊರತು ಕ್ಷಣಕ್ಕೊಂದು ಮಿಶ್ರ ಮಾಡುವುದಲ್ಲ. ಇಷ್ಟಲ್ಲದೆ ವೀಣೆಯ ಜೊತೆಗಿನ ಹಾಡುಗಾರನ ಧ್ವನಿ ತುಂಬಾ ಭಾವಪೂರ್ಣವಾಗಿದೆ. ಹಾಡು ಯಾವ ಭಾವವನ್ನು ಅಭಿವ್ಯಕ್ತಪಡಿಸುತ್ತಿದೆಯೋ ಹಾಡುಗಾರರೂ ಅದನ್ನು ತಮ್ಮ ಧ್ವನಿಯಲ್ಲಿ ವ್ಯಕ್ತಪಡಿಸುವುದು ಮುಖ್ಯ. ಭಾವವಿಲ್ಲದ ಪದ್ಯ ಚಕ್ರವಿಲ್ಲದ ಬಂಡಿಯಂತೆ. ಅಭಿನಯ ಮಾಡಿ ತೋರಲು ಯೋಗ್ಯವಾಗಿದೆ ಅಥವಾ ಹಾಡುಗಾರನಿಂದ ಹಸ್ತಸಂಜ್ಞೆಗಳಿಂದ ಅಭಿನಯಿಸಲ್ಪಡುತ್ತಿದೆ. ಹೆಚ್ಚೇನು ಪ್ರಶಂಸೆ ಮಾಡಲಿ, ಈ ಗೋಡೆಯ ಆಚೆ ಒಂದು ವೇಳೆ ಇದ್ದಿದ್ದರೆ ನಾನು ಯಾರೋ ಯುವತಿಯ ಧ್ವನಿಯೆಂದೇ ಭಾವಿಸುತ್ತಿದ್ದೆ. ಪ್ರತ್ಯಕ್ಷವಾಗಿ ನೋಡುತ್ತಿರುವ ಕಾರಣ ಪುರುಷನ ಧ್ವನಿ, ವೀಣಾವಾದಕನೂ ಪುರುಷನೆಂಬುವುದನ್ನು ನಂಬುತ್ತೇನೆ. ಹಾಗಿಲ್ಲದ ಪಕ್ಷದಲ್ಲಿ ಸಾಮಾನ್ಯವಾಗಿ ಪುರುಷರ ಧ್ವನಿಯಲ್ಲಿ ಸ್ವಲ್ಪ ಗಡಸು, ಕೆಲವೊಮ್ಮೆ ಅಲ್ಪ ಕಾರ್ಕಶ್ಯ ಸಹಜ. ಅದೇ ಹೆಣ್ಣಾದರೆ ಮಧುರತೆ ಸಹಜ.) ಈ ಎಲ್ಲಾ ಕಾರಣಗಳಿಂದಲೇ ಚಾರುದತ್ತನು ಅಪರ ರಾತ್ರಿಯಲ್ಲೂ ಮನಬಿಚ್ಚಿ ಕಿವಿಕೊಟ್ಟು ಆಲಿಸುತ್ತಾ ಅನುಭವಿಸುತ್ತಿದ್ದಾನೆ. ಉತ್ತಮ ಹಾಡಿಗೆ ಕೇಳುಗನೂ ಉತ್ತಮನಾಗಿರಬೇಕು. ಚಾರುದತ್ತನು ಸ್ವತಃ ಸಂಗೀತಜ್ಞನಾಗಿರುವ ಕಾರಣ ಹಾಗೂ ಸಹೃದಯಿ ಆದ ಕಾರಣ ಇದು ಸಾಧ್ಯವಾಗಿದೆ._

✍ ಸಂಗ್ರಹ ಶ್ರೀನಿಧಿ ಅಭ್ಯಂಕರ್

ಎಲ್ಲಾ ಲೇಖನಗಳಿಗಾಗಿ ಭೇಟಿ ನೀಡಿ  

http://shreenidhiabhyankar.blogspot.in/

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩