ಚಾರುದತ್ತ ೧೧

👳ಚಾರುದತ್ತ  ಬೆಳಕು-೧೧🌞

*स मद्विधानां प्रणयैः कृशीकृतो न तस्य कश्चिद् विभवैरमण्डितः । निदाघसंशुष्क इव ह्रदो महान् नृणां तु तृष्णामपनीय शुष्यति ।।*

_ವಿಟನ ಮಾತು ಚಾರುದತ್ತನ ಬಗೆಗೆ. ಶಕಾರನು ಏಕೆ ಆರ್ಯಪುತ್ರನಾದ ಚಾರುದತ್ತನ ಬಗೆಗೆ ಹೆದರಿಕೆ ಎಂದಾಗ ಅವನಾಡುವ ಮಾತು. ನನ್ನಂತಹ ದುಷ್ಟರೂ ಅವನಿಗೆ ಹೆದರಲೇಬೇಕು. ಅದಕ್ಕೆ ಕಾರಣ ಅವನು ಪರಾಕ್ರಮಿಯೋ, ಮಾಯಾವಿಯೋ ಎಂಬುದಲ್ಲ. ನಮ್ಮಂತಹ ಯಾಚಕರಿಂದ ಅಥವಾ ಸಾಲಗಾರರಿಂದ ಚಾರುದತ್ತನು ತನ್ನ ಹೆಸರಿನಂತೆಯೇ ಕೊಟ್ಟು ಕೊಟ್ಟು ದರಿದ್ರನಾಗಿದ್ದಾನೆ. ಅವನ ತಿಜೋರಿ ಕೃಶವಾಗಿ ಹೋಗಿದೆ. ಅವನ ಸಂಪತ್ತು ಯಾವೊಬ್ಬ ವ್ಯಕ್ತಿಯನ್ನೂ ಅಥವಾ ಯಾಚಕನನ್ನೂ ಬಿಡದೇ ಸತ್ಕರಿಸಿದೆ. ಅವನಿಂದ ಅಸತ್ಕೃತನಾದವನು ಅಥವಾ ಏನನ್ನೂ ಪಡೆಯದೇ ಹಿಂತಿರುಗಿದವನು ಇಲ್ಲವೇ ಇಲ್ಲವೇನೋ! ಇಡೀ ವರ್ಷ ಸುತ್ತಲಿನ ಜೀವಿಗಳ ಬಾಯಾರಿಕೆಯನ್ನು ತಣಿಸಿದ ಕೊಳವೊಂದು ಗ್ರೀಷ್ಮಕಾಲದಲ್ಲಿ ತಾನೇ ಅಸಹಾಯಕವಾಗಿ ಒಣಗಿ ನಿಂತಿರುವಂತೆ ಇವನೂ ಜನರ ಬಯಕೆಗಳನ್ನು ಪೂರೈಸುತ್ತಾ ತಾನೇ ದರಿದ್ರನಾಗಿ ನಿಂತಿದ್ದಾನೆ‌. ಚಾರುದತ್ತನ ದಾನಶೀಲತೆ ಅಂತಹದ್ದು. ಎಲ್ಲರೂ ತಮಗಿಟ್ಟುಕೊಂಡು ದಾನ ಮಾಡುವವರಾದರೆ ಇವನು ತನಗೆಂದು ಏನೊಂದೂ ಇಟ್ಟುಕೊಳ್ಳದೆ ಒಂದೊಮ್ಮೆ ಶ್ರೀಮಂತನಾಗಿದ್ದವನು ಈಗ ರಿಕ್ತಹಸ್ತನಾಗಿರುವನು. ಅವನ ಇಂತಹ ಗುಣವೇ ನನಗೆ ಭಯ. ಸದ್ಗುಣಗಳನ್ನು ಗೌರವಿಸುವ ಜನರು ಜನರೇನು! ಅವರು ಮೃಗಗಳು. ಅವನ ಗುಣಗಳೇ ನನ್ನನ್ನು ಬಂಧಿಸಿವೆ. ಕವಿ ಸದ್ಗುಣಗಳ ಮಹತ್ವವನ್ನು ಇಲ್ಲಿ ಸಾರಿದ್ದಾನೆ‌. ವಸಂತಸೇನೆಗಾಗಿ ಖಡ್ಗ ಹಿಡಿದು ಹೊರಟ ವಿಟನು ಚಾರುದತ್ತನ ವಿಷಯದಲ್ಲಿ ಏನೊಂದೂ ಮಾತನಾಡದೆ ಸುಮ್ಮನಿರುವನೆಂದರೆ ಚಾರುದತ್ತನ ಗುಣ ಎಂತಹದ್ದು! ನಮ್ಮಲ್ಲಿ ಗುಣಗಳಿದ್ದಲ್ಲಿ ಜೇನನ್ನು ಅರಸಿ ಬರುವ ಜನರಂತೆ ಜನರೇ ನಮ್ಮ ಬಳಿಗೆ ಬರುತ್ತಾರೆ. ದುಷ್ಟರೂ ನಮ್ಮ ಗುಣಗಳಿಂದ ಪ್ರಭಾವಿತರಾಗುವರು._

✍ ಸಂಗ್ರಹ ಶ್ರೀನಿಧಿ ಅಭ್ಯಂಕರ್

ಎಲ್ಲಾ ಲೇಖನಗಳಿಗಾಗಿ ಭೇಟಿ ನೀಡಿ  

http://shreenidhiabhyankar.blogspot.in/

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩