ಚಾರುದತ್ತ ೧೦

👳ಚಾರುದತ್ತ  ಬೆಳಕು-೧೦🌞

*लिम्पतीव तमोङ्गानि वर्षतीवाञ्जनं नभः। असत्पुरुषसेवेव दृष्टिर्निष्फलतां गता ।।*

_ಅತ್ತಿತ್ತ ಸುತ್ತಲೆಲ್ಲ ಗಾಢವಾದ ಅಂಧಕಾರ ವ್ಯಾಪಿಸಿದೆ. ಮೊದಲೇ ವಿಟನ ಮನದಲ್ಲಿ ವಸಂತಸೇನೆಯ ಬಗೆಗಿನ ಕಾಮವೆಂಬ ತಮವು ಆವರಿಸಿತ್ತು. ಈಗ ಒಳಗೂ ಕತ್ತಲೆ ಹೊರಗೂ ಕತ್ತಲೆ. ಏನೊಂದೂ ಕಾಣುತ್ತಿಲ್ಲ. ಕವಿ ವಿಟನ ಮಾತಿನಲ್ಲಿ ಕತ್ತಲನ್ನು ವರ್ಣಿಸಿದ್ದಾನೆ. ಕತ್ತಲನ್ನು ಹೇಗಪ್ಪಾ ವರ್ಣಿಸುವುದು ಎಂದರೆ ಕವಿಗಳ ಶ್ಲೋಕ ನೋಡಿ  ಆನಂದಿಸಿ. ಭೋಜನು ಚಂಪೂರಾಮಾಯಣದಲ್ಲಿ ಸುತ್ತಲಿನ ಕಗ್ಗತ್ತಲು ರಾವಣನ ಮನದೊಳಗೆ ಹೊಕ್ಕಿತು ಎಂದಿದ್ದಾನೆ ಒಂದು ಕಡೆ.ಇಲ್ಲಿ ಸ್ವಲ್ಪ ಭಿನ್ನವಾದ ವರ್ಣನೆ. ಉತ್ಪ್ರೇಕ್ಷಾ ಅಲಂಕಾರಕ್ಕೆ ಅಥವಾ ಉಪಮಾ-ಉತ್ಪ್ರೇಕ್ಷೆಗಳ ಸಂಸೃಷ್ಟಿಗೆ ಇದು ಉತ್ತಮ ಉದಾಹರಣೆ. ಸುತ್ತಲ ಕತ್ತಲು ಮೈಗೆ ಹಚ್ಚಿಕೊಂಡಂತಿದೆ. ಅಭ್ಯಮಗದ ಸಮಯದಲ್ಲಿ ಎಣ್ಣೆಯನ್ನು ಲೇಪಿಸಿಕೊಂಡಂತೆ ನನ್ನ ಅವಯವಗಳೂ ಕಾಣದಷ್ಟು ಕತ್ತಲೆ ಮುತ್ತಿದೆ. ಹೋಗಲಿ ಅತ್ತಿತ್ತ ಕಾಣಬಹುದೆಂದರೆ ಅದೂ ಕಾಣೆ. ಗಗನವು ಮಳೆಯ ಬದಲಾಗಿ ಕಾಡಿಗೆಯನ್ನು ಸುರಿಸುವಂತಿದೆ. ಶಿಶಿರದಲ್ಲಾದರೆ ಹಿಮವನ್ನಾದರೂ ಕಾಣಬಹುದಿತ್ತು, ಆದರಿಂದು ಎತ್ತ ನೋಡಿದರೂ ನಭ ಸುರಿಸಿದ ಕಾಡಿಗೆಯ ಕಪ್ಪು. ಚುರುಕಾದ ನನ್ನ ಹದ್ದಿನ ದೃಷ್ಟಿ ಇಂದು ನಿಷ್ಫಲವಾಗಿದೆ. ಎಷ್ಟು ಕಣ್ಣು ಉಜ್ಜಿದರೂ, ಪೂರ್ತಿ ತೆರೆದರೂ ಯಾವ ಉಪಯೋಗವೂ ಇಲ್ಲ. ಕವಿ ಇಲ್ಲಿ ಸುಂದರ ಉದಾಹರಣೆ ಕೊಟ್ಟಿದ್ದಾನೆ. ಎಂದಿಗೂ ಸತ್ಪುರುಷರ ಸೇವೆ ವ್ಯರ್ಥವಾಗದು. ಅದು ಇಂದಲ್ಲಾ ನಾಳೆ ಫಲ ಕೊಡುತ್ತದೆ. ಆದರೆ ದುಷ್ಟರ ಅಥವಾ ಅಸತ್ಪುರುಷರ ಸೇವೆ ಅದು ಯಾವತ್ತಿದ್ದರೂ ವ್ಯರ್ಥ. ಮಾಡುವ ಸಮಯದಲ್ಲೂ ನಂತರವೂ ಕೆಟ್ಟ ಫಲವನ್ನೇ ನೀಡುವುದೇ ಹೊರತು ಪ್ರಯೋಜನಕಾರಿಯಲ್ಲ. ಕಣ್ಣು ಬೆಳಕಿನಲ್ಲಿ ಸರಿಯಾಗಿ ನೋಡಬಹುದೇ ಹೊರತು ಕತ್ತಲಿನಲ್ಲಿ ಅಲ್ಲ. ಸತ್ಪುರುಷರು ಬೆಳಕಿನಂತೆ, ದುಷ್ಟರು ಕತ್ತಲಿನಂತೆ ಇದ್ದಾರೆ. ಪ್ರಕೃತ ಕಾಮಾತುರನಾದ ನನಗೆ ವಸಂತಸೇನೆಯ ಹೆಜ್ಜೆಯ ಜಾಡು ಈ ಗಾಢಾಂಧಕಾರದಲ್ಲಿ ಕಿಂಚಿತ್ತೂ ತೋರುತ್ತಿಲ್ಲ. ಕೆಟ್ಟವರ ಸಹವಾಸ ಅನಿವಾರ್ಯವೆಂದೋ, ಮಿತ್ರರೆಂದೋ, ಬಂಧುಗಳೆಂದೋ ಮಾಡಿದಿರೆಂದರೆ ಅದರ ಫಲ ನಮ್ಮ ಬದುಕಲ್ಲಿ ಕತ್ತಲೆಯೇ ಹೊರತು ಬೆಳಕಲ್ಲ ಎಂಬ ನೀತಿಯನ್ನು ಕವಿ ಸುಂದರವಾಗಿ ನಿರೂಪಿಸಿದ್ದಾನೆ._

✍ ಸಂಗ್ರಹ ಶ್ರೀನಿಧಿ ಅಭ್ಯಂಕರ್

ಎಲ್ಲಾ ಲೇಖನಗಳಿಗಾಗಿ ಭೇಟಿ ನೀಡಿ  

http://shreenidhiabhyankar.blogspot.in/

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩