ರಾಮಾಯಣ ೧೨೪
📕🌳 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌳📕 ಭಾಗ-೧೨೪
*ತಾವುಭೌ ಯುಗಪದ್ವೀರೌ ಹನುಮದ್ರಾಕ್ಷಸೋತ್ತಮೌ ಉಲ್ಕಾಹಸ್ತೌ ತದಾ ರಾತ್ರೌ ರಣಶೀರ್ಷೇ ವಿಚೇರತಃ*
_ಇಂದ್ರಜಿತುವಿನ ಬ್ರಹ್ಮಾಸ್ತ್ರದ ಹೊಡೆತಕ್ಕೆ ವಾನರಸೈನ್ಯ ನಷ್ಟವಾಗಿದೆ. ರಾಮ ಲಕ್ಷ್ಮಣರು ಅದಕ್ಕೆ ಗೌರವ ಕೊಟ್ಟು ಮೂರ್ಛೆ ತಪ್ಪಿದ್ದಾರೆ. ಹನುಮನು ವಿಭೀಷಣನ ಮಾತಿನಂತೆ ಕೆಲಕಾಲ ಸುಮ್ಮನಿದ್ದು ಅಸ್ತ್ರಕ್ಕೆ ಗೌರವವಿತ್ತು ನಂತರ ವಿಭೀಷಣನೊಡನೆ ಸೈನ್ಯದಲ್ಲಿ ಬದುಕುಳಿದವರನ್ನು ಹುಡುಕಲು ಆ ರಾತ್ರಿ ಪಂಜು ಹಿಡಿದು ಹೊರಟನು. ಗೌರವ ಕೊಟ್ಟು ಗೌರವ ಪಡೆ ಎಂಬ ತತ್ವ ಬಹುಶಃ ಅಸ್ತ್ರಗಳ ವಿಷಯದಲ್ಲೂ ಅನ್ವಯಿಸುತ್ತದೆ. ಅಸ್ತ್ರದ ಪ್ರಭಾವಕ್ಕೆ ಮರ್ಯಾದೆ ನೀಡಿದಾಗ ನಮಗೂ ಮುಂದೊಮ್ಮೆ ಅಸ್ತ್ರ ಒದಗಿಬಂದೀತು. ಇಲ್ಲವಾದರೆ ಕರ್ಣನ ಜೊತೆಗೆ ಮುನಿಸಿಕೊಂಡಂತೆ ದೂರವಾದೀತು. ಅವರಿಬ್ಬರೂ ತಿರುಗಾಡುತ್ತಿದ್ದಾಗ ಎಲ್ಲಿ ನೋಡಿದರೂ ವಾನರರ ತುಂಡಾದ ಬಾಲಗಳು, ಮುರಿದ ಕೈಗಳು, ಒಡೆದ ತೊಡೆಗಳು, ಕತ್ತರಿಸಿದ ಕಾಲುಗಳು, ಮುರಿದು ಬಿದ್ದ ಬೆರಳುಗಳು, ಅಪ್ಪಚ್ಚಿಯಾಗಿರುವ ತಲೆಗಳು, ಹರಿಯುತ್ತಿರುವ ರಕ್ತದ ಕೋಡಿ ಹೀಗೆ ಘನಘೋರ ದೃಶ್ಯ ಎದಿರಿಗಿತ್ತು. ಮೇಘನಾದ ಪ್ರಯೋಗಿಸಿದ ಆ ಬ್ರಹ್ಮಾಸ್ತ್ರವು ಹಗಲಿನ ಐದನೆಯ ಭಾಗವಾದ ಸಾಯಂಕಾಲದ ಆರು ಘಳಿಗೆಗಳಲ್ಲಿ ಅರವತ್ತೇಳು ಕೋಟಿ ಕಪಿಯೋಧರನ್ನು ಬಲಿಪಡೆದಿತ್ತು. ಈಗಿನ ಅಣುಬಾಂಬು ಸುಮಾರು ಇಷ್ಟೇ ಸಾಮರ್ಥ್ಯ ಹೊಂದಿರಬಹುದೇನೋ! ಹಾಗಾಗಿಯೇ ಸಾತ್ವಿಕ ಅಥವಾ ರಾಜಸ ಪ್ರವೃತ್ತಿಯ ವೀರರಾರೂ ಇದರ ಪ್ರಯೋಗದ ಬಗ್ಗೆ ಯೋಚಿಸುತ್ತಿರಲಿಲ್ಲ. ಒಂದು ಘಳಿಗೆ ಅಂದರೆ ೨೪ ನಿಮಿಷಗಳು. ಎರಡು ಗಂಟೆ ಇಪ್ಪತ್ತನಾಲ್ಕು ನಿಮಿಷಗಳಲ್ಲಿ ಈ ಅಸಂಭವ ನಡೆದುಹೋಗಿತ್ತು. ದಿನವನ್ನು ಐದು ಭಾಗ ಮಾಡಿದಾಗ ಪ್ರಾತಃಕಾಲ, ಮಧ್ಯಾಹ್ನ, ಸಂಗವ, ಅಪರಾಹ್ಣ, ಸಾಯಂಕಾಲ ಎಂದು ವಿಭಾಗ. ರಾಕ್ಷಸರಿಗೆ ಸಹಜವಾಗಿ ಕೊನೆಯ ಭಾಗದಿಂದ ಶಕ್ತಿ ವೃದ್ಧಿಯಾಗುವುದು. ಹಾಗಾಗಿ ಇಮದ್ರಜಿತು ಇದೇ ಸಮಯ ಆರಿಸಿದ್ದಿರಬೇಕು. ಇಬ್ಬರು ವೀರರೂ ಮಾರ್ಗದರ್ಶನ ಮಾಡಬೇಕಾದ ಜಾಂಬವನು ಎಲ್ಲಿರುವನೆಂದು ಹುಡುಕುತ್ತಾ ಸಾಗಿದರು. ಏಕೆಂದರೆ ವಯಸ್ಸಿನಲ್ಲೂ ಅನುಭವದಲ್ಲೂ ಹಿರಿಯನಾದ ಜಾಂಬವನಿಗೆ ಮುಂದೇನು ಮಾಡಬೇಕೆಂಬ ಸ್ಪಷ್ಟ ಚಿತ್ರಣ ಇರುವುದೆಂಬ ಸಂಗತಿಯಿಂದ ಹುಡುಕಿದರು. ಹಿರಿಯರ ಆದರ ಎಂದಿಗೂ ಲಾಭದಾಯಕ. ಎಂತಹ ಕಠಿಣ ಪರಿಸ್ಥಿತಿ ಎದುರಾದರೂ ಮಾರ್ಗದರ್ಶನ ಮಾಡುವ ಸಾಮರ್ಥ್ಯ ಅವರಿಗಿರುತ್ತದೆ. ಮನೆಯಲ್ಲಿದ್ದರೆ ಕೂಳು ದಂಡ, ಅವರ ಅಭ್ಯಾಸಗಳು ಹೊಂದಿಕೆ ಆಗಲಾರವೆಂಬ ಈಗಿನ ಯುವಜನತೆ ಈ ಸಂದರ್ಭ ಗಮನಿಸಬೇಕು. ವಾಲ್ಮೀಕಿಗಳ ನಿಷ್ಪಕ್ಷಪಾತ ಕಥೆ ಹೇಳುವಿಕೆ ಇಲ್ಲಿ ಸ್ಪಷ್ಟ . ಹೆರೋಟೊಡಸ್ ನಿಂದ ಆರಂಭವಾದ ಪಾಶ್ಚಾತ್ಯರ ಚರಿತ್ರೆಯಂತೆ ಹೊಗಳುವುದೇ ಮುಖ್ಯವಾಗಿ ವೈರಿಗಳನ್ನು ತೆಗಳಿ ಬರೆಯುವ ಕ್ರಮ ಇಲ್ಲಿಲ್ಲ. ರಾಮನ ಸೈನ್ಯಕ್ಕಾದ ನಷ್ಟವನ್ನು ಯಾವ ಭಾವವಿಲ್ಲದೆ ವರ್ಣಿಸಿದ್ದಾರೆ. ಇದು ನಿಜವಾದ ಇತಿಹಾಸ. ನಮಗೆ ಆಶ್ರಯ ಕೊಟ್ಟ ಅಥವಾ ನಮಗೆ ಸರಿಯೆನಿಸುವ ದೊರೆಗಳ ಬಗ್ಗೆ ಬರೆಯುವುದಲ್ಲ ಇತಿಹಾಸ._
ಸಂಗ್ರಹ: ಶ್ರೀನಿಧಿ ಅಭ್ಯಂಕರ್
ಎಲ್ಲಾ ಲೇಖನಗಳಿಗೆ ಅವಲೋಕಿಸಿ
http://shreenidhiabhyankar.blogspot.in/
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ