ರಾಮಾಯಣ ೧೩೦

📕🌳 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌳📕 ಭಾಗ-೧೩೦

*ಕಸ್ಮಾದ್ವಿಷಣ್ಣವದನಾ ವಿದ್ರವಧ್ವಂ ಪ್ಲವಂಗಮಾಃ ತ್ಯಕ್ತಯುದ್ಧಸಮುತ್ಸಾಹಾಃ ಶೂರತ್ವಂ ಕ್ವ ನು ವೋ ಗವಮ್* *ಪೃಷ್ಠತೋನುವ್ರಜಧ್ವಂ ಮಾಮಗ್ರತೋ ಯಾಂತಮಾಹವೇ ಶೂರೈರಭಿಜನೋಪೇತೈರಯುಕ್ತಂ ಹಿ ನಿವರ್ತಿತುಮ್*

_ಹನುಮನ ಮಾತು. ನಾಯಕನಾಗುವುದು ಸುಲಭದ ಕಾರ್ಯವಲ್ಲ. ಎಂತಹ ಸಂಕಷ್ಟದಲ್ಲೂ ಧೃತಿಗೆಡದೆ ತಂಡವನ್ನು ಮುನ್ನಡೆಸುವ ಸ್ವಭಾವ ಹೊಂದಿರುವುದು ತುಂಬಾ ಮುಖ್ಯ. ಇಂದ್ರಜಿತು ಮಾಯಾಸೀತೆಯನ್ನು ಸೃಷ್ಟಿಸಿ ರಥದಲ್ಲಿ ಯುದ್ಧಕ್ಕೆ ಕರೆತಂದು ತುರುಬು ಹಿಡಿದು ಅಡ್ಡಡ್ಡ ಸೀಳಿ ಹಾಕುತ್ತಾನೆ. ಇದನ್ನು ಕಂಡ ಹನುಮನೇ ಮೊದಲಾದ ಸಕಲ ವೀರರು ಕಣ್ಣೀರು ತುಂಬಿ ದುಃಖಿಸಿದರು. ವಾನರರೆಲ್ಲ ಅಧೀರರಾಗಿ ಯುದ್ಧದಿಂದ ವಿಮುಖರಾಗಲು ತೊಡಗಿದರು. ಆಗ ಹನುಮನಾಡುವ ಮಾತು, ಎಲೈ ಕಪಿವೀರರೇ, ವಿಷಣ್ಣ ವದನದಿಂದ ಏಕೆ ಓಡುವಿರಿ! ಯುದ್ಧದ ಉತ್ಸಾಹ ಎಲ್ಲಿ ಹೋಯಿತು? ನಿಮ್ಮ ಶೌರ್ಯ ಎಲ್ಲಿ ಹೋಯಿತು? ರಣದಲ್ಲಿ ನಾನು ಮುಂದೆ ಹೋಗುವೆನು, ನನ್ನನ್ನು ಹಿಂಬಾಲಿಸಿ, ವಿಖ್ಯಾತವಂಶದಲ್ಲಿ ಜನಿಸಿದ ನಿಮ್ಮಂತಹ ವೀರರಿಗೆ ಯುದ್ಧದಿಂದ ಹಿಮ್ಮೆಟ್ಟುವುದು ಶೋಭೆ ತರದು. ಬನ್ನಿ ಒಂದಾಗಿ ಶತ್ರುವನ್ನು ಎದುರಿಸೋಣ‌. ಹೀಗೆ ತಾನೇ ಮುಂದಾಗಿ ಹೋರಾಡುವ ಗುಣ ಅಪರೂಪ. ಒಬ್ಬ ಸಮರ್ಥ ನಾಯಕ ಆಗಬೇಕಾದವನು ಇಂತಹ ಧೈರ್ಯದ ಸ್ವಭಾವ ಅವಶ್ಯವಾಗಿ ಹೊಂದಿರಬೇಕು. ಹನುಮನ ಈ ಧೃತಿಗೆಡದೆ ಹೋರಾಡುವ ಗುಣ ನಮಗೆಲ್ಲ ಮಾದರಿ._

*ಯಜ್ಞಭೂಮ್ಯಾಂ ತು ವಿಧಿವತ್ ಪಾವಕಸ್ತೇನ ರಕ್ಷಸಾ ಹೂಯಮಾನಃ ಪ್ರಜಜ್ವಾಲ ಮಾಂಸಶೋಣಿತಭುಕ್ ತದಾ*

_ಸ್ವಲ್ಪ ಹೊತ್ತು ಕಾದಾಡಿದ ಕೊನೆಗೆ ತನ್ನ ಸೈನ್ಯವನ್ನು ರಕ್ಷಿಸಿಕೊಂಡು ಆ ಕೂಡಲೇ ರಾಮನನ್ನು ಕಂಡು ವಿಷಯ ಅರುಹಬೇಕೆಂದು ಧಾವಿಸಿದನು‌. ಇತ್ತ ಇಂದ್ರಜಿತು ಹನುಮನು ರಾಮನೆಡೆಗೆ ಹೋದ ಕಾರಣ ಸಂತೋಷದಿಂದ ನಿಕುಂಭಿಳಾ ಯಾಗ ಮಾಡಲು ದೇವಾಲಯಕ್ಕೆ ಹೋದನು.‌ಅಲ್ಲಿ  ವಿಧಿಪೂರ್ವಕವಾಗಿ ಹವನ ಮಾಡುತ್ತಾ ರಕ್ತ ಮಾಂಸಗಳೆಂಬ ಹವಿಸ್ಸನ್ನು ಅಗ್ನಿಗೆ ಅರ್ಪಿಸಲು ಆರಂಭಿಸಿದನು‌. ಇಲ್ಲಿ ಇಂದ್ರಜಿತು ಮಾಡುತ್ತಿರುವ ಯಜ್ಞ ಕೆಟ್ಟ ಉದ್ದೇಶ ಇದ್ದರೂ ವಿಧಿ ಮೀರದೇ ಮಾಡುತ್ತಿದ್ದಾನೆ. ತಾನು ಅಜೇಯನಾಗಬೇಕೆಂಬ ಉದ್ದೇಶದಿಂದ ಅಗ್ನಿಗೆ ರಕ್ತ ಮಾಂಸಗಳನ್ನು ಅದೂ ಅನೇಕ ಯಜ್ಞ ವಿಧಿ ಬಲ್ಲ ರಾಕ್ಷಸರ ನೆರವಿನಿಂದ ಮಾಡುತ್ತಿದ್ದನು. ಉದ್ದೇಶ ಕೆಟ್ಟದಿದ್ದರೂ ಕ್ರಮದಲ್ಲಿ ವ್ಯತ್ಯಾಸ ಆಗದಂತೆ ಯಜ್ಞಕ್ಕೆ ಶಾಸ್ತ್ರ ಹೇಳುವ ವಿಧಿ ಮೀರದಂತೆ ಮಾಡಿದಾಗ ಮಾತ್ರ ಫಲ ಎನ್ನುವ ಸತ್ಯ ಅವನಿಗೆ ಗೊತ್ತಿತ್ತು. ನಾವು ಮಾತ್ರ ಈಗ ಉದ್ದೇಶ ಒಳ್ಳೆಯದೇ ಇಟ್ಟುಕೊಂಡರೂ ತಾರಾಬಲ- ಭೂಮಿಯಲ್ಲಿ ಅಗ್ನಿಯ ಸಾನ್ನಿಧ್ಯ- ಶಾಂತಿಗೆ ಸಂಬಂಧಿಸಿದ ಅಗ್ನಿ- ಉತ್ತಮ ಶಾಸ್ತ್ರವೇತ್ತರು- ಕಳಪೆ ಅಲ್ಲದ ದ್ರವ್ಯಗಳು- ಗ್ರಹಗಳ ಉದಯ ಇದಾವುದನ್ನೂ ಸರಿಯಾಗಿ ನೋಡದೇ ಯಜ್ಞ ಯಾಗಾದಿಗಳನ್ನು ಮಾಡಿ ಫಲ ಪಡೆಯಬೇಕೆಂದರೆ ಹೇಗೆ ತಾನೇ ದೊರಕೀತು! ದೊರಕಿದರೂ ನೂರಕ್ಕೆ ಹತ್ತು ದೊರಕೀತು. ಏಕೆಂದರೆ ನಮ್ಮ ಶ್ರದ್ಧೆ ಅಷ್ಟೇ ತಾನೇ ಇದ್ದಿದ್ದು.‌ ಕಟ್ಟಿಗೆ ಇರಲಿ ದ್ರವ್ಯ ಇರಲಿ ರಕ್ತ ಮಾಂಸದ ಸಂಪರ್ಕ ಆದರೆ ಅದು ಆಭಿಚಾರಿಕ ಕರ್ಮ ಆಗುವುದೆನ್ನುವ ಸತ್ಯವೂ ಇಲ್ಲಿದೆ. ಹಾಗಾಗಿ ಕರ್ಮಗಳ ಆಚರಣೆಯಲ್ಲಿ ತುಂಬಾ ಜಾಗರೂಕರಾಗೋಣ._


ಸಂಗ್ರಹ: ಶ್ರೀನಿಧಿ ಅಭ್ಯಂಕರ್

ಎಲ್ಲಾ ಲೇಖನಗಳಿಗೆ ಅವಲೋಕಿಸಿ
http://shreenidhiabhyankar.blogspot.in/

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩