ರಾಮಾಯಣ ೧೨೫

📕🌳 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌳📕 ಭಾಗ-೧೨೫

*ನಾನ್ಯೋ ವಿಕ್ರಮಮಪರ್ಯಾಪ್ತಸ್ತ್ವಮೇಷಾಂ ಪರಮಃ ಸಖಾ ತ್ವತ್ಪರಾಕ್ರಮಕಾಲೋಯಂ ನಾನ್ಯಂ ಪಶ್ಯಾಮಿ ಕಂಚನ*

__ಜಾಂಬವನು ನಮಸ್ಕರಿಸಿದ ಹನುಮನನ್ನು ಕಂಡು ಹರುಷಗೊಂಡು ಹೀಗೆ ಹೇಳುವನು- ಈ ವಾನರ ಸೈನ್ಯಕ್ಕೆ ನೀನೇ ಈಗ ರಕ್ಷಕ. ವಿಕ್ರಮದಲ್ಲಿ ನಿನಗಾರಿಲ್ಲ ಸಾಟಿ, ಈಗ ನೀನೇ ಆಪದ್ಭಾಂಧವ. ನಿನ್ನ ಪರಾಕ್ರಮ ತೋರಲು ಇದು ಸಕಾಲ. ಇದಕ್ಕೆ ಯೋಗ್ಯರಾದ ಬೇರಾರನ್ನೂ ನಾನಿಲ್ಲಿ ಕಾಣೆ.ಜಾಂಬವನಿಗೆ ಆ ಸೈನ್ಯದಲ್ಲಿ ಗೊತ್ತಿರುವಷ್ಟು ಬಹುಶಃ ಬೇರಾರಿಗೂ ಗೊತ್ತಿರಲಿಲ್ಲ. ವಯೋಸಹಜವಾಗಿ ಅವನು ಬಳಲಿದ್ದನೇ ಹೊರತು ಮಾನಸಿಕವಾಗಿ ಅಲ್ಲ. ಹಿಂದೆ ಸಾಗರ ಹಾರುವ ಸಂದರ್ಭದಲ್ಲೂ ಹನುಮನನ್ನು ಉತ್ತೇಜಿಸಿ ಕಾರ್ಯ ಮಾಡಿಸಿದ್ದು ಇವನೇ. ಈಗಲೂ ಔಷಧಿಗಳನ್ನು ತಂದು ಸೇನೆಯನ್ನು ಉಜ್ಜೀವನಗೊಳಿಸಲು ಪ್ರಚೋದಿಸುತ್ತಿರುವವನು ಇವನೇ. ಜಾಂಬವಂತನಂತಹ ಹಿರಿಯರು ನಮ್ಮ ನಡುವೆ ಇದ್ದರೆ ಬಹುಶಃ ನಮ್ಮ ಪ್ರತಿಭೆ ಸರಿಯಾದ ಸಮಯದಲ್ಲಿ ಸರಿಯಾದ ರೀತಿಯಲ್ಲಿ ಹೊರಹೊಮ್ಮೀತು. ಹನುಮನ ಅಸಾಮಾನ್ಯ ಪರಾಕ್ರಮದ ಬಗ್ಗೆ ಅವನು ಮಾಡಬಲ್ಲ ಕಾರ್ಯಗಳ ಬಗೆಗೆ ಚೆನ್ನಾಗಿ ಅರಿವಿದ್ದುದು ಬಹುಶಃ ಅವನಿಗೆ ಒಬ್ಬನಿಗೇ ಇರಬೇಕು._

*ತಸ್ಯ ವಾನರಶಾರ್ದೂಲ ಚತಸ್ರೋ ಮೂರ್ಧ್ನಿ ಸಂಭವಾಃ ದ್ರಕ್ಷ್ಯಸ್ಯೋಷಧಯೋ ದೀಪ್ತಾ ದೀಪಯಂತ್ಯೋ ದಿಶೋ ದಶ. ಮೃತಸಂಜೀವನೀಂ ಚೈವ ವಿಶಲ್ಯಕರಣೀಮಪಿ ಸಾವರ್ಣ್ಯಕರಣೀಂ ಚೈವ ಸಂಧಾನಕರಣೀಂ ತಥಾ*

_ಹೇ ವಾನರೋತ್ತಮ, ಹಿಮಗಿರಿಗೆ ತೆರಳಿ ಅಲ್ಲಿ ಕಾಂಚನಮಯವಾದ ಅತ್ಯುನ್ನತವಾದ ಋಷಭ ಹಾಗೂ ಕೈಲಾಸವೆಂಬ ಗಿರಿಶಿಖರಗಳು ಕಾಣಿಸುತ್ತವೆ. ಅವೆರಡು ಶಿಖರಗಳ ನಡುವೆ ಓಷಧಿ ಪರ್ವತವು ಕಾಣುತ್ತದೆ. ಅದು ಸರ್ವಮೂಲಿಕೆಗಳಿಂದ ವಿರಾಜಿಸುತ್ತಿದೆ. ಅಲ್ಲಿ ನಾಲ್ಕು ಬಗೆಯ ದಿವ್ಯಮೂಲಿಕೆಗಳು ಬೆಳಗುತ್ತಿವೆ. ಮೃತಸಂಜೀವನಿ, ವಿಶಲ್ಯಕರಣಿ, ಸಾವರ್ಣ್ಯಕರಣಿ ಹಾಗೂ ಸಂಧಾನಕರಣಿ. ಮೊದಲನೆಯ ಮೂಲಿಕೆ ಹೆಸರಿನಂತೆ ಸತ್ತವರನ್ನು ಬದುಕಿಸುವಂತಹದ್ದು. ಎರಡನೆಯದ್ದು ಆಯುಧದಿಂದ ಉಂಟಾದ ಗಾಯವನ್ನು ಗುಣಪಡಿಸುವ ಮೂಲಿಕೆ. ಮೂರನೆಯದ್ದು ಸಾವರ್ಣ್ಯ ಅಂದರೆ ಚರ್ಮದ ವರ್ಣ ಮೊದಲಿನಂತೆ ಆಗಲು ಸಹಕರಿಸುವ ಮೂಲಿಕೆ. ಈಗಿನ ಪ್ಲಾಸ್ಟಿಕ್ ಸರ್ಜರಿಯ ಮೂಲ ಚಿಕಿತ್ಸೆ. ಕತ್ತರಿಸಿದ ತುಂಡಾದ ಬೆಂಡಾದ ಗಾಯಗಳ ಗುರುತು ಮಾಸುವಲ್ಲಿ ಇದರ ಉಪಯೋಗ ಹೆಚ್ಚು. ಸಂಧಾನಕರಣಿಯು ತುಂಡಾದ ಅಂಗಗಳನ್ನು ಹಾಗೂ ಚರ್ಮವನ್ನೂ ಮೊದಲಿನಂತೆ ಜೋಡಿಸುವ ಮೂಲಿಕೆ. ಇವುಗಳಲ್ಲಿ ಕೆಲವು ಮೂಲಿಕೆಗಳು ನಮ್ಮ ಸುತ್ತಮುತ್ತಲೂ ಇರಬಹುದು. ನಮ್ಮ ಮನೆಯ ಗೋವು ಕ್ರೂರಿಗಳಿಂದ ಕಾಲು ತುಂಡರಿಸಿಕೊಂಡಿದ್ದಾಗ ಊರಿನ ನಾಟಿ ವೈದ್ಯರೋರ್ವರು ದಿನವೂ ಸೊಪ್ಪು ಕಟ್ಟಿ ಸುಮಾರು ಒಂದು ತಿಂಗಳಲ್ಲಿ ಅದರ ಕಾಲಿನ ಮೂಳೆಯನ್ನು ಜೋಡಿಸಿದ್ದರು. ಅನಂತರ ಕಾಲು ಸ್ವಲ್ಪ ಕುಂಟಾಗಿದ್ದರೂ ಅದು ತುಂಬಾ ಆರೋಗ್ಯದಿಂದ ಮತ್ತೆ ಐದು ವರ್ಷ ಹಾಲು ಕೊಡುತ್ತಿತ್ತು. ಜಾಂಬವಂತನಿಗೆ ಇವೆಲ್ಲವೂ ತಿಳಿದಿರಬೇಕೆಂದರೆ ಬಹುಶಃ ಅವನು ವೈದ್ಯಶಾಸ್ತ್ರದಲ್ಲಿ ತಿಳುವಳಿಕೆ ಹೊಂದಿ, ಆ ಪ್ರದೇಶಗಳಲ್ಲಿ ಓಡಾಡಿದವನಾಗಿದ್ದಿರಬೇಕು. ಇಲ್ಲದಿದ್ದರೆ ಇಷ್ಟು ಸ್ಪಷ್ಟವಾಗಿ ಹೇಳಲು ಶಕ್ಯವಿಲ್ಲ. ಹನುಮ, ಬೇಗ ಇವುಗಳನ್ನು ತಂದು ವಾನರರನ್ನು ಬದುಕಿಸು ಎಂದು ಹುರಿದುಂಬಿಸುವನು ಜಾಂಬವ. ಉಳಿದ ಕಡೆ ಈ ಮೂಲಿಕೆಗಳು ಇರುವ ಸಾಧ್ಯತೆ ಕಡಿಮೆ ಎಂದೋ ಅಥವಾ ನಶಿಸಿಹೋಗಿರುವ ಸಾಧ್ಯತೆ ಇರಬಹುದೆಂದೋ, ಅಥವಾ ಅಪಾರ ಪ್ರಮಾಣದಲ್ಲಿ ಇಲ್ಲವೆಂದೋ ಜಾಂಬವನು ಹೀಗೆ ಹೇಳುತ್ತಾನೆ. ಇಲ್ಲದಿದ್ದರೆ ಲಂಕೆಯಿಂದ ಹಿಮಾಲಯಕ್ಕೆ ಹೋಗುವುದು ಬಹಳ ದೂರದ ಪ್ರಯಾಣ. ಹನುಮನಿಗೆ ಕ್ಷಣವಾದರೂ ಪರಿಶ್ರಮ ಅಪಾರ ಬಯಸುತ್ತದೆ._

ಸಂಗ್ರಹ: ಶ್ರೀನಿಧಿ ಅಭ್ಯಂಕರ್

ಎಲ್ಲಾ ಲೇಖನಗಳಿಗೆ ಅವಲೋಕಿಸಿ
http://shreenidhiabhyankar.blogspot.in/

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩