ಚಾರುದತ್ತ ೧೩

👳ಚಾರುದತ್ತ  ಬೆಳಕು-೧೩🌞

*उत्कण्ठितस्य हृदयानुगता सखीव सङ्कीर्णदोषरहिता विषयेषु गोष्ठी । क्रीडारसेषु मदनव्यसनेषु कान्ता स्त्रीणां तु कान्तरतिविघ्नकरी सपत्नी ।।*

_ನಾಯಕನು ಪ್ರಿಯೆಯ ಕನವರಿಕೆಯಲ್ಲಿ ವೀಣೆಯನ್ನು ನುಡಿಸುತ್ತಾ ನಿದ್ರೆ ಮಾಡದ ರಾತ್ರಿ ಕಳೆಯುತ್ತಿರುವ ಸುಂದರ ದೃಶ್ಯ. ಅಬ್ಬಾ, ಈ ವೀಣೆ ನಿಜಕ್ಕೂ ಅದ್ಭುತ. ಸಮುದ್ರದಿಂದ ಹುಟ್ಟದಿದ್ದರೂ ಇದೊಂದು ರತ್ನ. ಮನದ ಆಕಾಂಕ್ಷೆಯನ್ನು ಬಯಸುತ್ತಿರುವ ವ್ಯಕ್ತಿಯ ಗೆಳತಿಯಂತೆ ಮನಕ್ಕೆ ಸಮಾಧಾನ ಮಾಡುವ ಗುಣ ಇದರ ಧ್ವನಿ. ಮನಸ್ಸನ್ನು ಅರಿತ ಸಖಿಯಂತೆ ವೀಣಾವಾದನವು ಚಿಂತೆಯನ್ನು ಮರೆಸಿ ಆನಂದದಲ್ಲಿ ತೇಲಿಸುತ್ತದೆ. ವ್ಯಸನಗಳಲ್ಲಿ ಅಥವಾ ವಿಷಯಾಸಕ್ತಿಗಳಲ್ಲಿ ಇದೊಂದು ಸುಂದರ ಸಂಗೀತ ಕಚೇರಿ ಇದ್ದಂತೆ ಅಥವಾ ವಿದ್ವಾಂಸನಿಗೆ ಒಂದು ಒಳ್ಳೆಯ ವಾದಗೋಷ್ಠಿ ಇದ್ದಂತೆ ಆನಂದದಾಯಕ ಈ ವೀಣಾವಾದನ. ಮನ್ಮಥನ ವಿಧವಿಧದ ಕಾಮಕ್ರೀಡೆಗಳಲ್ಲಿ ಆಸಕ್ತರಾದ ಜನರಿಗೆ ಇದು ಮಡದಿಯಿದ್ದಂತೆ. ಪತಿಯೊಡನೆ ಮನದಣಿಯೆ ಪ್ರೇಮದ ವ್ಯವಹಾರ ನಡೆಸುವಂತೆ ಈ ವೀಣೆಯೂ ಮಡದಿಯಂತೆ ಮನದ ಭಾವನೆಗಳನ್ನು ಉತ್ತೇಜಿಸಿ ಸಂತೋಷ ತರುತ್ತದೆ. ಆದರೆ ಇವೆಲ್ಲವೂ ಗಂಡಸರಿಗೆ ಮಾತ್ರ ಅನುಭವವೇದ್ಯ. ಮಡದಿಯರಿಗೆ ಈ ವೀಣೆ ಸವತಿಯಂತೆ. ಕಾಂತನ ಜೊತೆಗೆ ಏಕಾಂತದಲ್ಲಿ ಅಂತರಂಗದ ತರಂಗಗಳನ್ನು ಮೀಟುವುದಕ್ಕೆ ಸದಾ ತಡೆ ಒಡ್ಡುವ ಇದು ಅವರ ಪ್ರೇಮ ವ್ಯವಹಾರಕ್ಕೆ ಬಾಧಕ. ವೀಣಾಸಕ್ತನಾದ ಪುರುಷ ಸದಾ ಅದರಲ್ಲೇ ಮುಳುಗಿದರೆ ಮಡದಿಯ ಮಾತನ್ನು ಕೇಳುವರಾರು? ಅವನೊಡನೆ ತನ್ನ ದುಗುಡಗಳನ್ನು ಹಂಚಿಕೊಳ್ಳಲು ಈ ವೀಣೆ ಅವಕಾಶ ನೀಡದೇ ಹೋದೀತು ಎಂಬ ಆತಂಕ ಸತಿಯರಿಗೆ. ಹೀಗೆ ಪುರುಷರ ಪಾಲಿಗೆ,  ಅದರಲ್ಲೂ ಸಂಗೀತಾಸಕ್ತರ ಪಾಲಿಗೆ ಬಹಳ ಆಕರ್ಷಕವಾದ  ವಾದ್ಯ ವೀಣೆ. ಭಾಸನ ನಾಟಕದಲ್ಲಿ ವೀಣೆಯ ವರ್ಣನೆ ಎರಡು ಮೂರು ಕಡೆ ಇದೆ. ಉದಯನ ವೀಣೆ ಕಲಿಸುವ ಗುರುವಾಗಿ ಬಂದು ವಾಸವದತ್ತೆಯನ್ನು ಅಪಹರಿಸಿ ವಿವಾಹವಾಗುವುದು. ಆ ವೀಣೆಯ ನೆಪದಲ್ಲೇ ಅವನು ಬಂಧಿತನಾಗುವುದು ಕೂಡ. ಉಳಿದ ವಾದ್ಯಗಳ ಹೋಲಿಕೆಯಲ್ಲಿ ವೀಣೆ ಹಾಗೂ ಕೊಳಲಿನ ನಾದ ಮಧುರ ಮಧುರ. ಕವಿ ಅದನ್ನೇ ಇಲ್ಲಿ ಬಗೆಬಗೆಯಾಗಿ ವರ್ಣಿಸಿದ್ದಾನೆ. ಈ ವೀಣಾವಾದನ ಎಲ್ಲಾ ಚಿಂತೆ ಮರೆಸಿ ಸ್ವರ್ಗವನ್ನೇ ತೋರೀತೆಂಬ ಆಶಯ._

✍ ಸಂಗ್ರಹ ಶ್ರೀನಿಧಿ ಅಭ್ಯಂಕರ್

ಎಲ್ಲಾ ಲೇಖನಗಳಿಗಾಗಿ ಭೇಟಿ ನೀಡಿ  

http://shreenidhiabhyankar.blogspot.in/

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩