ವೇದ ಧರ್ಮ ೪೨
📗🌾📙 ವೇದ-ಧರ್ಮ 📗🌾📙 ಭಾಗ-೪೨
*ಛಂದಸ್ಸು*
*ಯೋ ಹವಾ ಅವಿದಿತಾರ್ಷೇಯಚ್ಛಂದೋದೈವತ ಬ್ರಾಹ್ಮಣೇನ ಮಂತ್ರೇಣ ಯಾಜಯತಿ ವಾಧ್ಯಾಪಯತಿ ವಾ ಸ್ಥಾಣುಂ ವರ್ಛತಿ ಗರ್ತಂ ವಾ ಪತತಿ ಪ್ರ ವಾ ಮೀಯತೇ ಪಾಪೀಯಾನ್ ಭವತಿ*
_ಛಂದಸ್ಸು ಮತ್ತು ಋಷಿ, ದೇವತೆ ಇವುಗಳ ಜ್ಞಾನವಿಲ್ಲದೆ ಯಾಗ ಮಾಡಿಸುತ್ತಾನೆಯೋ ಅವನು ಎಲ್ಲಾ ರೀತಿಯಿಂದಲೂ ನಷ್ಟ ಹೊಂದುವನು. ಹಾಗಾಗಿ ಮಂತ್ರಗಳು ಯಾವ ಛಂದಸ್ಸಿನಲ್ಲಿವೆ ಎನ್ನುವುದನ್ನು ಅವಶ್ಯವಾಗಿ ತಿಳಿದಿರಬೇಕು. ಋಗ್ವೇದದಲ್ಲಿ ಪ್ರತಿಯೊಂದು ಋಕ್ಕಿಗೂ ಛಂದಸ್ಸು ಹೇಳಿಯೇ ಮುಂದುವರೆಯುತ್ತಾರೆ. ಯಜುರ್ಮಂತ್ರಗಳು ಎಲ್ಲವೂ ಛಂದೋಬದ್ಧವಲ್ಲ. ಹಾಗಾಗಿ ಅದರ ಪ್ರಯೋಗವೂ ಕಾಣುವುದಿಲ್ಲ. ತಿಳಿಯುವುದರಲ್ಲಿ ತಪ್ಪೇನಿಲ್ಲ. ಆಯಾ ವರ್ಣಗಳು ಬೇರೆ ಬೇರೆ ಛಂದಸ್ಸುಗಳ ಮೂಲಕ ಅಗ್ನಿಯ ಆರಾಧನೆ ಮಾಡಿ ಸಾಕ್ಷಾತ್ಕಾರ ಪಡೆಯಬಹುದೆಂದು ವೇದವೇ ಹೇಳುವುದು. ವೇದದ ಅರ್ಥ ಅರಿಯಲು ಮಂತ್ರದ ಛಂದಸ್ಸಿನ ಜ್ಞಾನ ಅವಶ್ಯಕ.ಆಗ ಮಾತ್ರ ಗುರು ಲಘುಗಳ ವಿಂಗಡಣೆ ತಿಳಿದು ಪದ ವಿಭಾಗ ಸರಿಯಾಗಿ ತಿಳಿಯುತ್ತದೆ._
_*ಇತಿಹಾಸ ಪುರಾಣಾಭ್ಯಾಂ ವೇದಂ ಸಮುಪಬೃಂಹಯೇತ್* *ಪುರಾಣ ನ್ಯಾಯ ಮೀಮಾಂಸಾ ಧರ್ಮಶಾಸ್ತ್ರಾಂಗಮಿಶ್ರಿತಾಃ ವೇದಾಃ ಸ್ಥಾನಾನಿ ವಿದ್ಯಾನಾಂ ಧರ್ಮಸ್ಯ ಚ ಚತುರ್ದಶ* ಎಂಬಂತೆ ವೇದಾರ್ಥಕ್ಕಾಗಿ ರಾಮಾಯಣ ಮಹಾಭಾರತ ಎಂಬ ಇತಿಹಾಸವೂ, ವ್ಯಾಸರ ಹದಿನೆಂಟು ಪುರಾಣಗಳೂ ನ್ಯಾಯ ಮುಂತಾದ ಶಾಸ್ತ್ರಗಳ ಪರಿಚಯ ಹಾಗೂ ಅಧ್ಯಯನ ಅವಶ್ಯಕ. ಏನೂ ಓದದೇ ಅರ್ಥ ಹೇಳುವುದೆಂದರೆ ಶಿಲ್ಪ ಶಾಸ್ತ್ರ ಗೊತ್ತಿಲ್ಲದವನು ಕಲ್ಲು ಕೆತ್ತಿದಂತೆ ಸರಿ. ಕೆಲವರು ಪ್ರಶ್ನೆ ಮಾಡುತ್ತಾರೆ- ಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ ವೇದ ಹೇಳಿ,ನಾವೂ ವೇದ ಓದಿ ತಿಳಿದುಕೊಳ್ಳುತ್ತೇವೆ, ಸುಲಭ ಮಾರ್ಗ ತಿಳಿಸಿಕೊಡಿ ಇತ್ಯಾದಿ. ರಸಾಯನಶಾಸ್ತ್ರ ಅಥವಾ ಭೌತಶಾಸ್ತ್ರ ಅಥವಾ ಗಣಿತದ ಪ್ರಕ್ರಿಯೆಗಳು ಹೇಗೆ ಒಂದೆರಡು ದಿನ ಕೂತು ಓದಿ ಅರಗಿಸಿಕೊಳ್ಳಲು ಸಾಧ್ಯವಿಲ್ಲವೋ, ಅಥವಾ ಅದರದರ ಪರಿಭಾಷೆಯಲ್ಲೇ ಅದನ್ನು ಹೇಗೆ ಶಿಸ್ತುಬದ್ಧವಾಗಿ ಅಧ್ಯಯನ ನಡೆಸಬೇಕೋ ಅದರಂತೆ ವೇದಗಳ ಅಧ್ಯಯನವೂ ಕೂಡ.ಯಾವ ಜ್ಞಾನ ಪಡೆಯುವುದೂ ಕಷ್ಟವೇ ಹೌದು. ಅದಕ್ಕಾಗಿ ಸುಲಭ ಮಾರ್ಗ ಎಂದರೆ ಜ್ಞಾನ ಬಂದಂತೆ ನಟಿಸುವುದು ಹೊರತು ಸತ್ಯವನ್ನು ಅರಿಯುವುದಲ್ಲ. ಇನ್ನು ವೇದಗಳು ಬ್ರಾಹ್ಮಣರಿಗೆ ಮಾತ್ರ ಸೀಮಿತವಲ್ಲ. ಅದು ಒಂದು ಜ್ಞಾನವಷ್ಟೇ. ಯಾರು ಬೇಕಾದರೂ ಓದಿ ಅರ್ಥೈಸಿಕೊಂಡು ಆಚರಣೆಗೆ ತರಬಹುದು._
http://shreenidhiabhyankar.blogspot.in/
ಮುಂದುವರಿಯುವುದು......
📗 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ