ಕಿರಾತಾರ್ಜುನೀಯ
🌸 ಕಿರಾತಾರ್ಜುನೀಯದ ಒಂದು ಸಾಯಕ 🌸
*प्रभव: खलु कोशदण्डयो: कृतपञ्चाँगविनिर्णयो नय: । स विधेयपदेषु दक्षतां नियतिं लोक इवानुरुध्यते ।।*
_ಭೀಮ ತನ್ನ ಮಾತನ್ನು ಮುಂದುವರೆಸುತ್ತಿದ್ದಾನೆ. ಧರ್ಮಜ, ಲೋಕದಲ್ಲಿ ಯಾವ ರಾಜನಾದರೂ ಪಂಚಾಗಗಳನ್ನು ಅನುಸರಿಸಿದರೆ ಮೇಲುಗೈ ಪಡೆಯುತ್ತಾನೆ. ರಾಜನೀತಿಯ ಪಂಚಾಗಗಳು ಹೀಗಿವೆ- ರಾಜ್ಯದಲ್ಲಿ ತನಗೆ ಸಹಾಯ ಮಾಡುವ ನಂಬಿಕಸ್ಥರು ಯಾರಿರುವರೆಂಬ ಸೂಕ್ಷ್ಮ ಅವಲೋಕನ, ಜಯಕ್ಕೆ ಕಾರಣವಾಗುವ ನಾನಾ ಸಾಮಗ್ರಿಗಳ ಸಂಗ್ರಹ, ದೇಶ- ಕಾಲಗಳ ಸರಿಯಾದ ವಿಮರ್ಶೆ ಇಂತಿಂತಹ ಕಾಲದಲ್ಲಿ ಹೀಗೀಗೆ ಮಾಡಬೇಕು ಇವರ ಎದುರು ಹೀಗೆ ವರ್ತಿಸಬೇಕೆಂಬ ವಿವೇಚನೆ, ತನಗೆ ಕೇಡು ಬಯಸಿದವನಿಗೆ ಪ್ರತೀಕಾರ ತೆಗೆದುಕೊಳ್ಳುವುದು ಹಾಗೂ ಎಲ್ಲಾದರೂ ಎಂತಾದರೂ ಆಪತ್ತು ಬರುವುದೆಂದಾದರೆ ಅದನ್ನು ದೂರಮಾಡಿಕೊಳ್ಳುವುದು, ಕೊನೆಯದಾಗಿ ಮಾಡುವ ಕಾರ್ಯದಲ್ಲಿ ಪೂರ್ಣ ಯಶಸ್ಸು ಪಡೆಯುವುದು ಹೀಗೆ ಐದು ಅಂಗಗಳನ್ನು ಆಶ್ರಯಿಸಿ ರಾಜನು ಮುನ್ನಡೆದಾಗ ಸಂಪತ್ತು ಬೆಂಬಲ ಎಂದಿಗೂ ಕಡಿಮೆ ಆಗಲಾರದು. ಅವನು ಜನಬೆಂಬಲದಿಂದಲೂ ಐಶ್ವರ್ಯದಿಂದೂ ಸಮೃದ್ಧಿ ಹೊಂದಿರುತ್ತಾನೆ. ಆದರೆ ಈ ನೀತಿಗಳನ್ನು ಸಮಯಾನುಸಾರವಾಗಿ ಪ್ರಯೋಗಿಸುವ ದಕ್ಷನು ಯಶಸ್ಸು ಪಡೆಯುತ್ತಾನೆಯೇ ಹೊರತು ನಿರುತ್ಸಾಹಿಯೋ ನಿಧಾನ ಪ್ರವೃತ್ತಿ ಯವನೋ ಮಾಡಿದರೆ ಅಲ್ಲ. ಅಂತಹವರ ಉಪಾಯಗಳು ವ್ಯರ್ಥವಾಗುವವು. ಹಾಗಾಗಿ ನೀನು ಶತ್ರುಮರ್ದನಕ್ಕೆ ಬೇಗ ಯೋಚನೆ ಮಾಡು. ಇನ್ನೊಂದು ಅರ್ಥ - ಲೋಕದಲ್ಲಿ ಪಂಚಾಂಗ ನೋಡಿಯೇ ಉತ್ತಮ ಜ್ಯೋತಿಷಿಯು ಹಣ ಹಾಗೂ ಅಧಿಕಾರದ ಅಥವಾ ಉದ್ಯೋಗದ ಬಗ್ಗೆ ಸರಿಯಾದ ಫಲವನ್ನು ಹೇಳುವನು. ತಿಥಿ, ವಾರ, ನಕ್ಷತ್ರ, ಯೋಗ,ಕರಣ ಗಳ ವಿಮರ್ಶೆಯಿಂದ ಮುಂದೆ ಹೀಗೆ ಆಗುವನು ಎಂಬ ಭವಿಷ್ಯ ನುಡಿಯುವನು. ಇಂತಹ ಸರಿಯಾದ ವಿಮರ್ಶೆಯು ಮುಂದಿನ ಜೀವನದಲ್ಲಿ ಘಟಿಸಿಯೇ ತೀರುವುದು. ಅದೇ ಅರೆಬರೆ ಓದಿದ ಅಥವಾ ಸರಿಯಾಗಿ ವಿಮರ್ಶಿಸದ ಅಥವಾ ಧನದಾಹಿ ಜ್ಯೋತಿಷಿಯು ಎಂದಿಗೂ ಸರಿ ನುಡಿಯಲಾರ. ಒಂದೊಮ್ಮೆ ಅಲ್ಪಸ್ವಲ್ಪ ಸರಿಯಾದರೂ ಅದು ಅವನಿಗೆ ನಿಲುಕಿದ್ದಲ್ಲ ಹೊರತು ವಿಧಿನಿರ್ಣಯ ಮಾಡಿದ್ದು. ಹೀಗೆ ಕವಿ ಒಂದೇ ಕಡೆ ಎರಡು ಮನೋಜ್ಞ ಅರ್ಥ ಹೇಳಿದ್ದಾನೆ._
📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ