ಮಹಾಭಾರತ ೧೭
🔥📕 ಮಹಾಭಾರತದ ವಿಶೇಷ ಶ್ಲೋಕ ಹಾಗೂ ಮಾಹಿತಿಗಳು📕🔥 ಭಾಗ ೧೭
*ಏಕಸ್ಯ ಬಹ್ವ್ಯೋ ವಿಹಿತಾ ಮಹಿಷ್ಯಃ ಕುರುನಂದನ ನೈಕಸ್ಯಾ ಬಹವಃ ಪುಂಸೋ ವಿಧೀಯಂತೇ ಕದಾಚನ*
_ಧರ್ಮಜನು ದ್ರೌಪದಿಯು ನಮ್ಮೈವರ ಕೈ ಹಿಡಿವಳು ಎಂದಾಗ ದ್ರುಪದನ ಮಾತು- ಎಲ್ಲಾದರೂ ಹೀಗೆ ಉಂಟೇ, ಒಬ್ಬನಿಗೆ ಬಹಳ ಜನ ರಾಣಿಯರು ಕೇಳಿದ್ದೇನೆ. ಆದರೆ ಒಬ್ಬಳಿಗೆ ಬಹಳ ಪುರುಷರು ಎಂದಿಗೂ ಸರಿಯಲ್ಲ. ನೀನು ಸ್ವತಃ ಧರ್ಮ ಅರಿತವನಾಗಿ ಲೋಕನಿಂದ್ಯವಾದ ಕಾರ್ಯ ಅಥವಾ ವೇದವಿರುದ್ಧವಾದ ಕಾರ್ಯ ಏಕೆ ಮಾಡುವೆ? ನಿನಗೇಕೆ ಇಂತಹ ಬುದ್ಧಿಯುಂಟಾಗಿದೆ! ಲೋಕದಲ್ಲಿ ನಿಂದ್ಯವಾದರೂ ಧರ್ಮಕ್ಕೆ ಸಮ್ಮತವಾದರೆ ಅಥವಾ ಹಿರಿಯರ ಆಣತಿಗೆ ಬದ್ಧರಾಗಿ ಮಾಡಿದ್ದಾದರೆ ಅದು ಸ್ವೀಕಾರಾರ್ಹ ಎಂಬ ಸಂದೇಶ ಇಲ್ಲಿದೆ.ದ್ರುಪದನಿಗೆ ಅರ್ಜುನನಿಗೇ ಕೊಡಬೇಕೆಂದು ಆಗ್ರಹ ಇರಲಿಲ್ಲ, ನೀವ್ಯಾರಾದರೂ ಕೈ ಹಿಡಿಯಿರಿ, ಎಲ್ಲರೂ ಬೇಡ ಎಂದಷ್ಟೇ ನುಡಿಯುತ್ತಾನೆ._
*ಸೂಕ್ಷ್ಮೋ ಧರ್ಮೋ ಮಹಾರಾಜ ನಾಸ್ಯ ವಿದ್ಮೋ ಗತಿಂ ವಯಮ್ ಪೂರ್ವ್ಯೇಷಾಮಾನುಪೂರ್ವ್ಯೇಣ ಯಾತಂ ವರ್ತ್ಮಾನುಯಾಮಹೇ*
_ಧರ್ಮಜನ ಉತ್ತಮವಾದ ಮಾತು. ರಾಜನೇ, ಧರ್ಮವು ಅತ್ಯಂತ ಸೂಕ್ಷ್ಮವಾದುದು. ಅದರ ಗತಿ ನಾವರಿಯಲಾರೆವು. ನಮ್ಮ ಪೂರ್ವಿಕರು ಪರಂಪರೆಯಿಂದ ಯಾವ ದಾರಿಯನ್ನು ಅನುಸರಿಸಿದರೋ ಅದನ್ನೇ ನಾವೂ ಅನುಸರಿಸುತ್ತೇವೆ. ಧರ್ಮದ ಗತಿ ಧರ್ಮಜನಿಗೇ ಅರಿಯಲು ಅಸಾಧ್ಯವೆಂದರೆ ನಮ್ಮ ಗತಿ ಏನು! ಧರ್ಮಜನ ಪೂರ್ವಜರು ಜ್ಞಾನಿಗಳು ಮಹಾತ್ಮರಿದ್ದರು,ಆದರೆ ನಮ್ಮ ಪೂರ್ವಜರು ಅಷ್ಟೇ ಜ್ಞಾನಿಗಳಾಗಿದ್ದರೇ! ಪರಂಪರೆಯ ಹೆಸರಲ್ಲಿ ಶಾಸ್ತ್ರ ವಿರುದ್ಧ ಆಚರಿಸುವ ಮಂದಿ ಈ ಶ್ಲೋಕವನ್ನು ಉದಾಹರಿಸಿ ಸಮರ್ಥಿಸಬಹುದು. ಆದರೆ ಧರ್ಮಜನಿಗೂ ನಮಗೂ ಸಾಮ್ಯತೆ ಇದೆಯೇ , ಅವನಷ್ಟು ಜ್ಞಾನ ನಮ್ಮಲ್ಲಿದೆಯೇ ಎಂಬ ಒಳನೋಟ ಸಾಧ್ಯವಾಗಬೇಕು. ಆಗ ಮಾತ್ರ ಧರ್ಮದ ಗತಿ ಎತ್ತ ಎಂಬ ವಿಷಯ ಚಿತ್ತಕ್ಕೆ ಹತ್ತಬಹುದು._
*ನ ಮೇ ವಾಗನೃತಂ ಪ್ರಾಹ ನಾಧರ್ಮೇ ಧೀಯತೇ ಮತಿಃ*
_ಇದೂ ಧರ್ಮಜನ ಮಾತು. ನನ್ನ ತಾಯಿ ಹೀಗೆ ಹೇಳುವಳು- ನನ್ನ ನಾಲಗೆ ಸುಳ್ಳಾಡದು, ಮನವು ಎಂದಿಗೂ ಅಧರ್ಮದಲ್ಲಿ ತೊಡಗದು. ಧರ್ಮನಿಷ್ಠೆ ಎಷ್ಟಿತ್ತು ಅನ್ನುವುದು ಇದರಿಂದ ತಿಳಿಯುತ್ತದೆ. ಸಾಕ್ಷಾತ್ ಕೃಷ್ಣನೇ ಹೇಳಿದರೂ ಸುಳ್ಳಾಡಲು ಹಿಂಜರಿದವ ಈ ಧರ್ಮಜ. ಪರರು ಕೇಡು ಬಯಸಿದ ಕ್ಷಣವೂ ಅವರಿಗೆ ಒಳಿತನ್ನೇ ಬಯಸಿದವನು. ಭೀಮಾರ್ಜುನರ ಪಕ್ಷಪಾತಿಗಳಾಗಿ ಧರ್ಮಜನನ್ನು ನಿಂದಿಸುವವರು ಅವನ ಉದಾತ್ತ ಗುಣಗಳನ್ನು ಗಮನಿಸಬೇಕು. ಸಾಧ್ಯವಾದರೆ ನಾವೂ ಪ್ರೇರಿತರಾಗಿ ಅವನ ದಾರಿ ಅನುಸರಿಸೋಣ._
http://shreenidhiabhyankar.blogspot.in/
🍂📕 ಸಂಗ್ರಹ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ