ರಾಮಾಯಣ ೬೪
📕🌳 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌳📕 ಭಾಗ- ೬೪
*ಅಸಮರ್ಥಂ ವಿಜಾನಾತಿ ಧಿಕ್ ಕ್ಷಮಾಮೀದೃಶೇ ಜನೇ*
_ರಾಮನ ಮಾತು. ಲಕ್ಷ್ಮಣ, ಈ ಸಮುದ್ರರಾಜನು ಕ್ಷಮಾಗುಣದಿಂದ ಕೂಡಿದ ನನ್ನನ್ನು ಅಸಮರ್ಥನೆಂದು, ಕೈಲಾಗದವನೆಂದು ಭಾವಿಸಿದ್ದಾನೆ. ಇಂತಹ ಗುಣಹೀನನ ವಿಷಯದಲ್ಲಿ ತೋರುವ ಕ್ಷಮಾಗುಣಕ್ಕೆ ಧಿಕ್ಕಾರವಿರಲಿ. ನಾವು ಎಷ್ಟೋ ಬಾರಿ ಕ್ಷಮಾಗುಣ ತೋರುತ್ತೇವೆ. ಆದರದು ಎಂದಿಗೂ ನಮ್ಮ ಸಾಮರ್ಥ್ಯವನ್ನು ಅಪಮಾನಿಸಬಾರದು. ಸದ್ಗುಣಗಳು ಇನ್ನೊಬ್ಬ ಸದ್ಗುಣಿಗೆ ಮಾತ್ರ ಗೋಚರಿಸುವವೇ ಹೊರತು ದುರ್ಜನರಿಗಲ್ಲ. ಹಾಗಾಗಿಯೇ ಹಿರಿಯರ ಮಾತು *ಶಾಠ್ಯಂ ಸದಾ ದುರ್ಜನೇ* ದುರ್ಜನರಲ್ಲಿ ತೋರುವ ಕ್ಷಮೆ ವ್ಯರ್ಥ. ಅವರಲ್ಲಿ ಪ್ರತೀಕಾರವನ್ನೇ ಆಚರಿಸಬೇಕು._
*ಅದ್ಯಾಕ್ಷೋಭ್ಯಮಪಿ ಕ್ರುದ್ಧಃ ಕ್ಷೋಭಯಿಷ್ಯಾಮಿ ಸಾಗರಮ್ ವೇಲಾಸು ಕೃತಮರ್ಯಾದಂ ಸಹಸ್ರೋರ್ಮಿಸಮಾಕುಲಮ್*
_ಇಂದು ಎಂದಿಗೂ ಕ್ಷೋಭೆಗೊಳ್ಳದಿರುವ ಈ ಸಮುದ್ರವನ್ನು ಕ್ಷೋಭೆಗೊಳಿಸಿ ತಲ್ಲಣಿಸುವಂತೆ ಮಾಡುವೆನು. ಇದು ಎಂದಿಗೂ ತನ್ನ ದಡ ಮೀರಿ ಹರಿಯದೆಂದು ಜನರು ಭಾವಿಸುತ್ತಾರೆ. ಆದರಿಂದು ಸಾವಿರಾರು ಅಲೆಗಳೊಡನೆ ಸಕಲ ದಡಗಳಲ್ಲಿ ಹರಿಯುವಂತೆ ಮಾಡುತ್ತೇನೆ. ಸಮುದ್ರ ಎಂದಿಗೂ ಶಾಂತವಾಗಿರುತ್ತದೆ. ಆದರೆ ಯಾವಾಗ ಅದು ರಾಮನ ಶಾಂತಿ ಕೆಡಿಸಿದೆಯೋ ತಾಳ್ಮೆ ಪರೀಕ್ಷಿಸಿದೆಯೋ ಆಗ ತಾನೇ ಸ್ವತಃ ಕ್ಷೋಭೆಗೊಳಪಡುತ್ತದೆ. ಮಹಾತ್ಮರ ಸಹನೆಯನ್ನು ಎಂದಿಗೂ ಪರೀಕ್ಷಿಸಲು ಹೋಗಬಾರದು. ನಮ್ಮ ಮಾತನ್ನು ಕೇಳಿಯೂ ಸುಮ್ಮನಿರುವರೆಂದರೆ ಅದು ಅವರ ಸಹನೆ ಹೊರತು ದೌರ್ಬಲ್ಯ ಅಲ್ಲ. ದಡ ಮೀರದ ಅಬ್ಧಿ ಇಂದು ದಡದಡನೆ ಸಿಕ್ಕಸಿಕ್ಕಲ್ಲಿ ಓಡಬೇಕಾಗುತ್ತದೆ. ಬಾಣಗಳಿಂದ ಇದನ್ನು ತತ್ತರಿಸುವಂತೆ ಮಾಡುವೆನು ಎನ್ನುತ್ತಾ ರಾಮನು ಬಾಣ ಬಿಟ್ಟು ಸಾಗರವನ್ನು ಕದಡಿದನು._
*ಸೌಮಿತ್ರಿರುತ್ಪತ್ಯ ಸಮುಚ್ಛ್ವಸಂತಂ ಮಾ ಮೇತಿ ಚೋಕ್ತ್ವಾ ಧನುರಾಲಲಂಬೇ*
_ರಾಮನ ಕೋಪದ ಕಾರ್ಯವನ್ನು ನೋಡಿ ಹೆದರಿದ ಲಕ್ಷ್ಮಣನು ಅವನನ್ನು ತಡೆಯಲು ಪ್ರಯತ್ನಿಸಿದನು. ಸ್ವಾಭಾವಿಕವಾಗಿ ಲಕ್ಷ್ಮಣನು ಕೋಪಿಷ್ಠ. ಆದರೀಗ ರಾಮನ ಕೋಪ ನೋಡಿ ಅವನೇ ಹೆದರಿ ಅಣ್ಣ ಬೇಡ ಕೋಪಗೊಳ್ಳದಿರು. ನೀನು ಕೋಪಗೊಳ್ಳದೆಯೂ ಕಾರ್ಯ ಸಿದ್ಧಿಸುವುದು ಎನ್ನುತ್ತಾ ಧನುಸ್ಸನ್ನು ಹಿಡಿದನು. ಲಕ್ಷ್ಮಣ ರಾಮರ ನಡುವೆ ಇದ್ದ ಪ್ರೀತಿ ಸಲುಗೆ ಇಲ್ಲಿ ಸ್ಪಷ್ಟವಾಗುತ್ತದೆ. ಕೆಲವು ಕಥೆಗಾರರೆನ್ನುವಂತೆ ಅವರು ಒಟ್ಟಿಗಿದ್ದರೂ ಮನದಿಂದ ಬೇರಾಗಿದ್ದರೆನ್ನುವುದಕ್ಕೆ ಇದು ಸರಿಯಾದ ಉತ್ತರ. ಲಕ್ಷ್ಮಣನ ಕಾರ್ಯ ಇಲ್ಲಿ ನಮಗೂ ಒಂದು ಪಾಠ ನೀಡಿದೆ. ನಮ್ಮ ಆತ್ಮೀಯರು ಯಾರ ಮೇಲಾದರೂ ಸಕಾರಣವಾಗಿಯೇ ಕೋಪಗೊಂಡಿದ್ದರೂ ಅದನ್ನು ತಡೆಯಲು ಪ್ರಯತ್ನಿಸಬೇಕೇ ಹೊರತು ಇನ್ನಷ್ಟು ತುಪ್ಪ ಹಾಕುವುದಲ್ಲ. ರಾಮನ ಕೋಪ ವ್ಯರ್ಥವಾಗದೆಂಬ ಅರಿವಿದ್ದರೂ ರಾಮಾನುಜನು ತಡೆಯಲು ಯತ್ನಿಸಿದನು. ಇದು ಮನುಜರಿಗೊಂದು ಉತ್ತಮ ಸಂದೇಶ._
*ಅದೃಶ್ಯಾನಿ ಚ ಭೂತಾನಿ ಮುಮುಚುರ್ಭೈರವಸ್ವನಮ್*
_ರಾಮನು ಬ್ರಹ್ಮಾಸ್ತ್ರ ಪ್ರಯೋಗಿಸಿದಾಗ ಎಲ್ಲೆಡೆ ಅಲ್ಲೋಲಕಲ್ಲೋಲವಾಯಿತು. ಅದೃಶ್ಯವಾಗಿದ್ದ ಭೂತಗಳು ವಿಕಾರಧ್ವನಿಯಿಂದ ಕೂಗಿದವು. ಕೆಲವು ಜೀವಿಗಳು ಕಣ್ಣಿಗೆ ಕಾಣದಂತೆಯೂ ಇರುವವೆಂದು ವಾಲ್ಮೀಕಿಗಳ ಈ ಮಾತು ತೋರಿಸಿಕೊಡುತ್ತದೆ. ನಾವು ವಿಜ್ಞಾನವೆಂಬ ನಾಳಿನ ಹುಸಿಯನ್ನು ಬೆನ್ನತ್ತಿ ದೃಶ್ಯವಾದದ್ದು ಮಾತ್ರ ಸತ್ಯ, ಉಳಿದವೆಲ್ಲ ಅಸತ್ಯ ಎಂದು ಒಪ್ಪಿಕೊಳ್ಳುತ್ತಿದ್ದೇವೆ. ಆದರೆ ಮಹರ್ಷಿಗಳ ಕಾಣ್ಕೆ ನಮ್ಮ ದೃಷ್ಟಿಯನ್ನು ಮೀರಿರುವ ಕಾರಣ ಅದೃಶ್ಯ ಜೀವಿಗಳು ಸತ್ಯವಾಗಿಯೇ ಇರುವವು. ನಮಗೆ ಗುರುತಿಸಲು ಸಾಧ್ಯವಾಗುತ್ತಿಲ್ಲ ಅಷ್ಟೇ._
http://shreenidhiabhyankar.blogspot.in/
📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ