ರಾಮಾಯಣ ೬೨
📕🌳 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌳📕 ಭಾಗ- ೬೨
*ಅಹತ್ವಾ ರಾವಣಂ ಸಂಖ್ಯೇ ಸಪುತ್ರಬಲಬಾಂಧವಮ್ ಅಯೋಧ್ಯಾಂ ನ ಪ್ರವೇಕ್ಷ್ಯಾಮಿ ತ್ರಿಭಿಸ್ತೈರ್ಭ್ರಾತೃಭಿಃ ಶಪೆ*
_ರಾಮನ ಪ್ರತಿಜ್ಞಾ ವಾಕ್ಯ. ವಿಭೀಷಣನ ಬಳಿ ಹೇಳುವಂತಹದು. ರಣದಲ್ಲಿ ರಾವಣನನ್ನು ಕೊಲ್ಲದೆ, ಬಂಧುಸಹಿತ ಅವನನ್ನು ಇಲ್ಲವಾಗಿಸದೆ, ನಾನು ಅಯೋಧ್ಯೆಯ ಬಳಿ ಹೋಗುವುದಿಲ್ಲ. ನನ್ನ ಮೂವರು ತಮ್ಮಂದಿರ ಮೇಲಾಣೆ. ಕಾರ್ಯವಾಗದೆ ನಾನು ಹೋಗಲಾರೆ. ರಾವಣನನ್ನು ಕೊಂದು ನಿನ್ನನ್ನು ರಾಜನನ್ನಾಗಿ ಮಾಡುವೆನು. ಹಿಂದೆಯೂ ಅಣೆ ಪ್ರಮಾಣ ಮಾಡುವ ಪದ್ಧತಿ ಇತ್ತೆನ್ನುವುದಕ್ಕೆ ಇದು ಸಾಕ್ಷಿ. ರಾಮನ ಮಾತು ಇಲ್ಲಿ ರಾಜಕೀಯವಾಗಿ ಮಹತ್ವದ್ದು. ವಿಭೀಷಣ ಈಗೇನೋ ಪೂರ್ಣ ಶರಣಾಗಿದ್ದಾನೆ. ಮುಂದೆ ರಾವಣ ಸತ್ತಾಗ ರಾಜ್ಯಾಕಾಂಕ್ಷೆ ಬರದೆಂದು ಹೇಗೆ ಹೇಳುವುದು? ಹಾಗಾಗಿ ಈಗಲೇ ಆಶ್ವಾಸನೆ ಕೊಟ್ಟರೆ ಅವನ ಮನಕ್ಕೂ ರಾಮನ ಮೇಲೊಂದು ವಿಶ್ವಾಸ ಮೂಡಿಸುವ ಪ್ರಯತ್ನ. ಅಥವಾ ಅಣ್ಣನ ಮೇಲಿನ ಪ್ರೀತಿಯು ಅವನನ್ನು ಯುದ್ಧಕ್ಕೆ ಪೂರ್ಣ ತೊಡಗಿಸುವಲ್ಲಿ ತೊಡಕಾದಾಗ ರಾಜ್ಯಾಕಾಂಕ್ಷೆ ಎಂಬುದು ಅದನ್ನು ನಿವಾರಿಸೀತು ಎಂಬ ಮುಂದಾಲೋಚನೆ ರಾಮನದ್ದು. ಶತ್ರುಗಳನ್ನು ನಮ್ಮವರನ್ನಾಗಿಸಲು ಕೆಲವನ್ನು ಕೊಡಬೇಕಾಗುತ್ತದೆ ಅದೇ ರಾಜಕಾರಣ._
*ಸುಗ್ರೀವಃ ಪಂಡಿತೋ ನಿತ್ಯಂ ಭವಾನ್ ಮಂತ್ರವಿಚಕ್ಷಣಃ ಉಭಾಭ್ಯಾಂ ಸಂಪ್ರದಾಯಾರ್ಥಂ ರೋಚತೇ ಯತ್ತದುಚ್ಯತಾಮ್*
_ರಾಮನು ಲಕ್ಷ್ಮಣ ಸುಗ್ರೀವರನ್ನು ಕುರಿತಾಡುವ ಮಾತು. ವಿಭೀಷಣನ ಸಲಹೆಯನ್ನು ಸಮುದ್ರರಾಜನನ್ನು ಪ್ರಾರ್ಥನೆ ಮಾಡುವ ಕುರಿತು ಅರುಹಿದಾಗ ರಾಮ ಹೇಳುವುದು ಹೀಗೆ. ಸುಗ್ರೀವನು ರಾಜನೀತಿಯಲ್ಲಿ ಪಂಡಿತ. ನೀನು ಲಕ್ಷ್ಮಣ ಮಂತ್ರಾಲೋಚನೆಯಲ್ಲಿ ವಿಚಕ್ಷಣ. ನೀವಿಬ್ಬರೂ ವಿವೇಚಿಸಿ ಯುಕ್ತವನ್ನು ಹೇಳಿ. ರಾಮನು ತಾನು ಸ್ಚತಃ ಮಹಾಜ್ಞಾನಿಯಾದರೂ ಉಳಿದವರಿಗೆ ಕೊಡುವ ಗೌರವ ನಮಗೆಲ್ಲ ಮಾರ್ಗದರ್ಶಕ. ಉಳಿದವರ ಜ್ಞಾನಕ್ಕೂ ಗೌರವ ನೀಡಿ, ಅವರ ಸಲಹೆಯನ್ನು ಮನ್ನಿಸುವ ಅವನ ವಿನಯಶೀಲತೆ ಎಷ್ಟು ಆದರ್ಶಪ್ರಾಯ. ನಾವು ಅಲ್ಪ ತಿಳಿದಿದ್ದಾಗಲೇ ಎಲ್ಲವೂ ಗೊತ್ತಿರುವಂತೆ ಮಾಡುತ್ತೇವೆ. ಹೆಚ್ಚು ಓದಿದ ಮೇಲೆ ಉಳಿದವರನ್ನು ತಿರಸ್ಕರಿಸುತ್ತೇವೆ. ರಾಮನ ಈ ಗುಣ ನಾವೂ ಅನುಸರಿಸೋಣವೇ!_
📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ