ಮಹಾಭಾರತ ೧೮

🔥📕 ಮಹಾಭಾರತದ ವಿಶೇಷ ಶ್ಲೋಕ ಹಾಗೂ ಮಾಹಿತಿಗಳು📕🔥 ಭಾಗ ೧೮

*ನ ಚಾಪ್ಯಾಚರಿತಃ ಪೂರ್ವೈರಯಂ ಧರ್ಮೋ‌ ಮಹಾತ್ಮಭಿಃ ನ ಚ ಧರ್ಮೋಪ್ಯನೇಕಸ್ಥಶ್ಚರಿತವ್ಯಃ ಸನಾತನಃ*

_ವ್ಯಾಸರು ದ್ರುಪದನ ಆಸ್ಥಾನಕ್ಕೆ ಅಕಸ್ಮಾತ್ತಾಗಿ ಬಂದಿದ್ದಾರೆ. ದ್ರೌಪದಿಯ ಪರಿಣಯದ ಬಗ್ಗೆ ಅವರಲ್ಲಿ ಕೇಳುವುದೆಂದು ಎಲ್ಲರೂ ನಿರ್ಣಯಿಸಿದರು. ವ್ಯಾಸರು ಧರ್ಮದ ಬಗ್ಗೆ ನಿಮ್ಮ ಅಭಿಪ್ರಾಯ ಏನೆಂದು ಹೇಳಿ ಎಂದಾಗ ದ್ರುಪದನ ಮಾತು- ಮಹಾತ್ಮರಾರೂ ಈ ನಡೆಯನ್ನು ಅನುಸರಿಸಲಿಲ್ಲ. ಅನೇಕರು ಆಚರಿಸಿದ್ದರೂ ನಾವು ಆಚರಿಸಬೇಕಾದ ಧರ್ಮ ಇದಲ್ಲ. ರಾಜನ ಮಾತು ಎಷ್ಟು ಸತ್ಯ ಇದೆ. ನಮ್ಮ ಹಿರಿಯರು ಅಥವಾ ಪರಂಪರೆಯವರು ಮಾಡಿದರೆಂದು ಮೂಢನಂಬಿಕೆಗಳನ್ನು ಹಾಗೆಯೇ ಆಚರಿಸಬೇಕೆಂದು ಯಾವ ಶಾಸ್ತ್ರವೂ ಹೇಳುವುದಿಲ್ಲ. *ಗತಾನುಗತಿಕೋ ಲೋಕೋ* ಎಂಬ ಶ್ಲೋಕ ಇದಕ್ಕೆ ಒಳ್ಳೆಯ ಉದಾಹರಣೆ.ಯಾರೋ ಒಬ್ಬರು ತನ್ನ ತಂಬಿಗೆ ಕಳೆದುಹೋಗಬಾರದೆಂದು ಮರಳಿನ ಲಿಂಗ ನಿರ್ಮಿಸಿದರೆ ಎಲ್ಲರೂ ಅನುಸರಿಸಿ ಅವನ ತಂಬಿಗೆಯೇ ಭೂಗತವಾಗಿ ಹೋಯಿತು. ನಮ್ಮಲ್ಲೂ ಇಂತಹ ಅನೇಕ ಆಚರಣೆಗಳು ಹುದುಗಿವೆ. ಯೋಗ್ಯತೆ ನೋಡಿ ಆದರಿಸುವುದು ಅಥವಾ ಅನಾದರಿಸುವುದು ಬಿಟ್ಟು ಅಯೋಗ್ಯರಿಗೂ ಸನ್ಮಾನ ಮಾಡುತ್ತೇವೆ. ಒಬ್ಬರು ಕಬ್ಬಿಣದ ಕುಂಡದಲ್ಲಿ ಹೋಮ ಮಾಡಿದರೆಂದು ಶಾಸ್ತ್ರ ವಿರುದ್ಧ ವಾದರೂ ಎಲ್ಲರೂ ಅದನ್ನೇ ಅನುಸರಿಸುತ್ತಾರೆ. ಒಬ್ಬರು ಯಾರೋ ಮಾಡಿದರೆಂದು ಅಥವಾ ಊರವರೆಲ್ಲರು ಮಾಡಿದರೆಂದು ಮಾಡುವ ಕಾರ್ಯಗಳು ಧರ್ಮ ಸಮ್ಮತವೇ, ಮಹಾತ್ಮರ ನಡೆಯಲ್ಲಿ ಕಂಡಿದೆಯೇ ಇತ್ಯಾದಿ ವಿಚಾರ ಮಾಡಿ ಮುಂದಡಿ ಇಡಬೇಕು. ಜ್ಞಾನಿಗಳೆಲ್ಲ ಮಹಾತ್ಮರಲ್ಲ ಅಥವಾ ಮಹಾತ್ಮರೆಲ್ಲ ದೊಡ್ಡ ಜ್ಞಾನಿಗಳಾಗಿರಬೇಕಿಲ್ಲ. ನಡೆ- ನುಡಿ ಅನುಸರಿಸುವಾಗ ಶಾಸ್ತ್ರದ ಪರದೆ ಸರಿಸಿ ನೋಡಿ ಪ್ರವೃತ್ತಿ ಮಾಡಬೇಕು._

*ಶ್ರೂಯತೇ ಹಿ ಪುರಾಣೇಪಿ ಜಟಿಲಾ ನಾಮ ಗೌತಮೀ*

_ಧರ್ಮಜನು ಈ ಸಂದರ್ಭದಲ್ಲಿ ಜಟಿಲೆ ಎಂಬುವಳನ್ನು ಉದಾಹರಿಸುತ್ತಾನೆ. ಗೌತಮ ಗೋತ್ರದವಳಾದ ಜಟಿಲೆ ಎಂಬವಳು ಹಿಂದೆ ಏಳು ಮಂದಿ ಋಷಿಗಳನ್ನು ವರಿಸಿದಳೆಂಬುದು ಪುರಾಣದಲ್ಲಿ ಕಂಡುಬರುತ್ತದೆ. ಹಾಗಾಗಿ ಒಬ್ಬಳು ಅನೇಕರನ್ನು ವರಿಸುವುದು ಅಧರ್ಮವಲ್ಲ. ಮಹಾಭಾರತದ ನಂತರ ಪುರಾಣ ರಚಿತವಾಗಿದ್ದರೆ ಧರ್ಮಜ ಹೇಗೆ ಓದಿಯಾನು ಎಂದರೆ ಹಿಂದಿನ ವ್ಯಾಸರ ರಚನೆ ಇತ್ತು ಎನ್ನಬಹುದು. ಅಥವಾ ಈಗಿನಂತೆ ಪುಸ್ತಕ ರೂಪದಲ್ಲಿ ಇರದೆ ಜಾನಪದ ಕಥೆಗಳಂತೆ ಪ್ರಾಚೀನರ ಇತಿಹಾಸ ಹಾಗೂ ಸಂಸ್ಕೃತಿ ಬಾಯಿಂದ ಬಾಯಿಗೆ ಅನೂಚಾನವಾಗಿ ಹರಿದುಬರುತ್ತಿತ್ತು ಎನ್ನಬಹುದು._  

*ಗುರೋಶ್ಚ ವಚನಂ ಪ್ರಾಹುರ್ಧರ್ಮಂ ಧರ್ಮಜ್ಞಸತ್ತಮ ಗುರೂಣಾಂ ಚೈವ ಸರ್ವೇಷಾಂ ಜನಿತ್ರೀ ಪರಮೋ ಗುರುಃ*

_ಧರ್ಮಜನ ಈ ಮಾತು ಸಾರ್ವಕಾಲಿಕ, ಸಾರ್ವದೇಶಿಕ. ಧರ್ಮಜ್ಞರಲ್ಲಿ ಶ್ರೇಷ್ಠನೇ, ಗುರುವಿನ ಮಾತೇ ಧರ್ಮವೆಂದು ಹೇಳುತ್ತಾರೆ. ಗುರುಗಳಲ್ಲೆಲ್ಲ ತಾಯಿಯೇ ಪರಮಗುರು. *ತಂದೆ ತಾಯಿ* ಯರಿಗೆ ಎಷ್ಟು ಗೌರವ ನೀಡಬೇಕು ಅವರ ಮಾತನ್ನು ಏಕೆ ಆದರಿಸಬೇಕು ಎಂದರೆ ಅದಕ್ಕೆ ಇದೇ ಉತ್ತರ. ಹಾಗೆಯೇ ಗುರುವಿನ ಮಹತ್ವವನ್ನೂ ಇದು ಸಾರುತ್ತದೆ. ಒಬ್ಬರನ್ನು ಗುರುಗಳೆಂದು ಅಂಗೀಕರಿಸಿದ ಮೇಲೆ ಅವರ ಮಾತೇ ಧರ್ಮವಾಗುತ್ತದೆ. ನಿಜವಾದ ಅಥವಾ ಯೋಗ್ಯನಾದ ಗುರು ಎಂದಿಗೂ ಅಧರ್ಮ ಬೋಧಿಸಲಾರ. ನಮ್ಮ ಆಯ್ಕೆ ಅರ್ಜುನನಂತಿರಬೇಕೇ ಹೊರತು ದುರ್ಯೋಧನನಂತಲ್ಲ. ಗುರುಗಳ ಮಾತೂ ತಪ್ಪೆನಿಸಿದಾಗ ಅಥವಾ ಸಂಶಯಕ್ಕೆ ಎಡೆ ಮಾಡಿದಾಗ ಅಮ್ಮನ ಮಾತನ್ನು ಆದರಿಸಬೇಕು. ಎಂತಹ ಅರ್ಥಪೂರ್ಣ ಸಂದೇಶ ವ್ಯಾಸರದು._

http://shreenidhiabhyankar.blogspot.in/

🍂📕 ಸಂಗ್ರಹ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩