ಕಿರಾತಾರ್ಜುನೀಯ
🌸 ಕಿರಾತಾರ್ಜುನೀಯದ ಒಂದು ಸಾಯಕ 🌸
*विपदोsभिभवन्त्यविक्रमं रहयत्यापदुपेतमायति: । नियता लघुता निरायतेरगरीयान्न पदं नृपश्रिय: ।।*
_ಭೀಮನು ತನ್ನ ಮಾತನ್ನು ಮುಂದುವರಿಸುತ್ತಾ ಇದ್ದಾನೆ. ಅಣ್ಣ, ಆಪತ್ತುಗಳು ಎಂದಿಗೂ ಪೌರುಷಹೀನನನ್ನು ಆಶ್ರಯಿಸುತ್ತವೆ. ಪೌರುಷ ಅಂದರೆ ಧೈರ್ಯ ಅಥವಾ ಸತತ ಪ್ರಯತ್ನ ಅಥವಾ ನಂಬಿಕೆ. ಇವುಗಳಿದ್ದರೆ ಅಂತಹ ವ್ಯಕ್ತಿ ಎದೆಗುಂದದೆ ಆಪತ್ತುಗಳನ್ನು ಎದುರಿಸಿ ನಿಲ್ಲುತ್ತಾನೆ. ಪೌರುಷ ಇಲ್ಲದವರು ಬಂದ ಆಪತ್ತಿನ ಬಗೆಗೇ ಕೊರಗುತ್ತಾ ಸುಮ್ಮನಿದ್ದುಬಿಡುವರು. ಅದನ್ನು ದಾಟಲು ಪ್ರಯತ್ನ ಮಾಡಲಾರರು. ಅಂತಹ ವ್ಯಕ್ತಿಗಳಿಗೆ ಮುಂದಿನ ಶುಭಕಾಲವೂ ಬರಲಾರದು. ಚಕ್ರದ ಅಲುಗಿನಂತೆ ನಮ್ಮ ಪ್ರಯತ್ನ ನಿರಂತರವಾಗಿದ್ದಾಗ ಒಮ್ಮೆ ಸುಖ ಒಮ್ಮೆ ದುಃಖ ಬರಬಹುದು. ಆದರೆ ಪ್ರಯತ್ನವೇ ಇಲ್ಲದವನಿಗೆ ಮುಂದಿನ ಸುಖದ ಜೀವನ ಹೇಗೆ ತಾನೇ ಒದಗೀತು. ಮೋಸ ಮಾಡಿ ಅಥವಾ ಸಾಲ ಮಾಡಿ ಬದುಕುವವನೂ ಅಂತಹ ಕೃತ್ಯಕ್ಕಾಗಿ ಪ್ರಯತ್ನಿಸಿದರೆ ಬದುಕಬಹುದೇ ಹೊರತು ಸುಮ್ಮನೆ ಕನಸು ಕಾಣುತ್ತಿದ್ದರಲ್ಲ. ಭಾವಿ ಯಶಸ್ಸನ್ನು ಕಳೆದುಕೊಳ್ಳುವನು ತನ್ನ ನಿರಾಸಕ್ತಿಯಿಂದ. ಹಾಗಾಗಿ ಆಸಕ್ತಿ ಎನ್ನುವುದು ಜೀವನ ನಡೆಸುವ ಇಂಧನ. ನಿರುದ್ಯೋಗಿಯಾದವನಿಗೆ ಅಥವಾ ವಿಪತ್ತಲ್ಲೇ ಮುಳುಗಿರುವವನಿಗೆ ನಾಳಿನ ಸೂರ್ಯೋದಯ ನೋಡುವ ವ್ಯವಧಾನವೇ ಇರುವುದಿಲ್ಲ. ಅಂತಹ ವ್ಯಕ್ತಿಯನ್ನು ಅವಮಾನಗಳು, ಸೋಲುಗಳು ಬೆಂಬಿಡದೇ ಕಾಡುತ್ತವೆ. ಕಾಲಿಟ್ಟಲ್ಲೆಲ್ಲ ಭೂಮಿ ಕುಸಿದು ಹೋಗುವುದು. ಪಾಪಿಗೆ ಸಮುದ್ರಕ್ಕೆ ತೆರಳಿದರೂ ಮೊಣಕಾಲುದ್ದ ನೀರು ಎನ್ನುವುದು ಇಂತಹವರ ಬಗೆಗೇ ಸರಿ. ಒಮ್ಮೆ ಲಘುತ್ವ ಅಥವಾ ಕುಬ್ಜರಾದೆವೆಂತಾದರೆ ಅನಂತರ ಮೇಲೆರುವುದು ಬಹಳ ಕಷ್ಟ.ಅಧಿಕಾರ , ಪ್ರತಿಷ್ಠೆ ಮುಂತಾದವನ್ನು ಮತ್ತೆ ಸಂಪಾದಿಸುವುದು ಗಗನಕುಸುಮವೇ ಸರಿ. ರಾಜನಾದವನಿಗಂತೂ ರಾಜ್ಯಶ್ರೀಯನ್ನು ಮತ್ತೆ ಶತ್ರುಗಳಿಂದ ಪಡೆಯುವುದು ಬಹಳ ಶ್ರಮದಾಯಕ ಕಾರ್ಯ. ಹಾಗಾಗಿ ಈಗಿನಿಂದಲೇ ವಿಪತ್ತಿನ ನಿವಾರಣೆಗೆ ನಿರ್ಧರಿಸು. ಕವಿಯ ಆಶಯ ಎಷ್ಟು ಚೆನ್ನಾಗಿದೆ. ನಮಗೂ ಅನೇಕ ಬಾರಿ ಸೋಲುಂಟಾದಾಗ ಮುಗಿದುಹೋಯಿತೆಂದು ಭಾವಿಸಿ ಸುಮ್ಮನಿರುವೆವು. ಹಾಗೆ ಸುಮ್ಮನಿದ್ದರೆ ನಮ್ಮ ಮುಂದಿನ ದಾರಿ ಮತ್ತಷ್ಟು ಕಠಿಣವಾಗುವುದು. ಉತ್ಸಾಹವೆಂಬ ಹಾರೆಯಿಂದ ನಡೆಯಲು ತೊಂದರೆ ಒಡ್ಡುವ ಕಿರಿಕಿರಿಗಳನ್ನು ನಿವಾರಿಸುತ್ತಾ ಸುಗಮವಾಗಿ ಮುಂದಡಿ ಇಡಬೇಕು ಎಂಬುದು._
http://shreenidhiabhyankar.blogspot.in/
📕 ಸಂಗ್ರಹ✍ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ