ವೇದ ಧರ್ಮ ೩೯
📗🌾📙 ವೇದ-ಧರ್ಮ 📗🌾📙 ಭಾಗ-೩೯
*ಕಲ್ಪ*
*ಸುವ್ಯಕ್ತಸ್ಸುಸ್ವರೋ ಧೈರ್ಯಂ ತಚ್ಚಿತ್ತತ್ವಂ ಚತುರ್ಗುಣಾಃ ಏತದ್ಯುಕ್ತಃ ಪಠೇದ್ವೇದಂ ಸ ವೇದಫಲಮಶ್ನುತೇ*
_ವೇದೋಚ್ಚಾರಣದ ಕೊನೆಯ ನಿಯಮವೊಂದು ಹೇಳಿ ಕಲ್ಪಕ್ಕೆ ಪದವಿಡುವೆ. ಗಟ್ಟಿಯಾಗಿ ಮಂತ್ರಗಳನ್ನು ಹೇಳಬೇಕು. ಮುರುಮುರು ಎಂದು ತಮಗೆ ಮಾತ್ರ ಕೇಳುವಂತೆ ಅಥವಾ ಅಸ್ಪಷ್ಟವಾಗಿ ಅರ್ಧ ನುಂಗಿ ಹೇಳಿದರೆ ಪಾಪಭಾಜನನಾಗುವುದು ಖಂಡಿತ. ಎರಡನೆಯದಾಗಿ ಶ್ರುತಿ ಬದ್ಧವಾಗಿ ಒಳ್ಳೆಯ ಸ್ವರದಿಂದ ಹೇಳಬೇಕು. ಕರ್ಕಶವಾದ ವೇದಘೋಷ ಇನ್ನಷ್ಟು ತೊಂದರೆ ತಂದೊಡ್ಡೀತು. ಆದಷ್ಟು ಸ್ವರಮಾಧುರ್ಯವು ಅವಶ್ಯಕ. ಇನ್ನು ಧೈರ್ಯದಿಂದ ಉಚ್ಚರಿಸಬೇಕು. ಸರಿಯಾಗಿ ಕಲಿತಿದ್ದಾಗ ಸಹಜವಾಗಿ ಧೈರ್ಯ ಇದ್ದೇ ಇರುತ್ತದೆ. ತಪ್ಪು ತಪ್ಪು ಕಲಿತು ಹೇಳುವುದು ತಪ್ಪೇ ಸರಿ. ನಾಲ್ಕನೆಯ ಗುಣ ಅದರಲ್ಲೇ ಮನವಿಡುವುದು. ಇದು ಅಪರೂಪದ ಸ್ವಭಾವ. ಮಂತ್ರಗಳ ಉಚ್ಚಾರ ಕಾಲದಲ್ಲಿ ಅರ್ಥವನ್ನು ಮಾಡಿಕೊಳ್ಳಲು ಪ್ರಯತ್ನಿಸುತ್ತಾ ಭಗವಂತನ ಸ್ತುತಿ ಎಂಬ ಅನುಸಂಧಾನ ಸಹಿತ ಹೇಳಬೇಕೇ ಹೊರತು ದುಡ್ಡು ಸಿಗುವುದೆಂದು ಅಥವಾ ತನ್ನೆಡೆಗೆ ಗಮನ ಬೀರಲೆಂದಾಗಲಿ ಹೇಳುವುದು ತರವಲ್ಲ. ಮನಸ್ಸಿದ್ದರೆ ಉಚ್ಚಾರಣೆಯೂ ಸರಿಯೇ ಆಗುತ್ತದೆ. ಹೀಗೆ ವೇದಮಂತ್ರಗಳನ್ನು ನುಡಿದಾಗ ಫಲ ಸಿಕ್ಕೇ ಸಿಗುವುದು. ಬರಿದೆ ಓಂ ಕಾರದ ಧ್ಯಾನವೇ ರೋಗಗಳನ್ನು ನಿವಾರಿಸುವಲ್ಲಿ ಸಮರ್ಥವಾಗಿರುವಾಗ ಓಂ ಕಾರದ ಬೇರೆ ಬೇರೆ ರೂಪದ ವೇದ ಫಲ ನೀಡದೇ!_
_ಶ್ರೌತ ಹಾಗೂ ಸ್ಮಾರ್ತ ಕರ್ಮಗಳ ನಿರೂಪಣೆಯೇ ಕಲ್ಪಸೂತ್ರಗಳು. ವೇದ ಮಂತ್ರಗಳೇ ಪ್ರಧಾನವಾದ ವೇದಗಳಲ್ಲಿ ಹೇಳಲ್ಪಟ್ಟ ಸೋಮಯಾಗ, ದರ್ಶ ಪೌರ್ಣಮಾಸ ಇಷ್ಟಿ ಆಪ್ತೋರ್ಯ ಮುಂತಾದ ಯಾಗಗಳ ನಿರೂಪಣೆ ಇಲ್ಲಿ ಸಿಗುತ್ತದೆ. ಇದರ ಜೊತೆಗೆ ಸ್ಮೃತಿಗಳಲ್ಲಿ ಹೇಳಿರುವ ಕರ್ಮಗಳನ್ನೂ ನಿರೂಪಿಸುತ್ತಾರೆ. ವೇದಾಧ್ಯಯನ ಕಡಿಮೆಯಾದ ಕಾರಣ ಈಗ ಸ್ಮೃತ್ಯುಕ್ತ ಕರ್ಮಗಳೇ ಮೇಲುಗೈ ಹೊಂದಿವೆ. *ಸರ್ವಶಾಖಾಪ್ರತ್ಯಯಮೇಕಂ ಕರ್ಮ* ಎಂಬುದು ಜೈಮಿನಿ ಋಷಿಯ ಮಾತು. ಕರ್ಮಗಳು ಒಂದಾದರೂ ಆಚರಣೆಯಲ್ಲಿ ಭೇದ ಬಂದು ಶಾಖೆಗಳು ಸೂತ್ರಗಳು ಭಿನ್ನವಾಗಿವೆ ಅಷ್ಟೇ. ಹೇಗೆ ಊಟ ಮಾಡುವುದು ಒಂದೇ ಆದರೂ ಮಾಡುವ ವಿಧಾನ ನೂರಾರು.ಅದರಂತೆ ಇಲ್ಲೂ ಕೂಡ. ಆಪಸ್ತಂಭ, ಬೋಧಾಯನ, ಸತ್ಯಾಷಾಢ, ಆಶ್ವಲಾಯನ, ಮಾನವ, ಹಿರಣ್ಯಕೇಶೀಯ, ಕಾತ್ಯಾಯನ ಮೊದಲಾದ ಸೂತ್ರಗಳು ಋಷಿ ಪ್ರಣೀತವಾದವು ಕಲ್ಪಗಳಿಗೆ ಉದಾಹರಣೆ. ಕಲ್ಪದಲ್ಲಿ ಹೇಳುವ ಕರ್ಮಗಳ ಬಗೆಗೆ ವಿಚಾರ ಮಾಡುವುದಾದರೆ ಅದೇ ಸಾವಿರಾರು ಪುಟವಾದೀತು. ಹಾಗಾಗಿ ಮುಂದುವರಿಯುವೆ._
*ವ್ಯಾಕರಣ*
_ಸರಿಯಾದ ಶಬ್ದಪ್ರಯೋಗ ಹಾಗೂ ಶಬ್ದದ ಅರ್ಥಜ್ಞಾನ ಅರಿಯಲು ವ್ಯಾಕರಣ ಅತ್ಯವಶ್ಯಕ. ವ್ಯಾಕರಣ ಅತ್ಯಂತ ಪುರಾತನವಾದುದು. ದೇವತೆಗಳು ಮೊದಲಿಗೆ ಪ್ರಕೃತಿ ಪ್ರತ್ಯಯ ವಿಭಾಗಗಳಿಂದ ರಹಿತವಾದ ವಾಕ್ಕಿಗೆ ವ್ಯಾಕರಣ ರಚಿಸುವಂತೆ ಇಂದ್ರನ ಬಳಿ ಕೇಳಿಕೊಂಡಾಗ ಅವರ ಅಪೇಕ್ಷೆಯಂತೆ ಇಂದ್ರನು ರಚಿಸಿದನು. ತೈತ್ತಿರೀಯ ಸಂಹಿತೆಯಲ್ಲಿ ಈ ವಿಷಯವಿದೆ._
*ತಾಮಿಂದ್ರೋ ಮಧ್ಯತೋವಕ್ರಮ್ಯ ವ್ಯಾಕರೋತ್ತಸ್ಮಾದಿಯಂ ವ್ಯಾಕೃತಾ ವಾಗುದ್ಯತೇ* ಇತ್ಯಾದಿ. ಅನೇಕ ವ್ಯಾಕರಣಕಾರರಿದ್ದರೂ ಮಹೇಶ್ವರನ ವರಪ್ರಸಾದದಿಂದ ಉಂಟಾದ ಪಾಣಿನಿಯ ವ್ಯಾಕರಣವೇ ಪ್ರಸಿದ್ಧವಾದುದು. ಕೆಲವು ಶಿವದ್ವೇಷಿಗಳು ಇದನ್ನು ಹೀಗಳೆಯಬಹುದಷ್ಟೇ ಹೊರತು ಸಂಸ್ಕೃತ ಬಲ್ಲವರೆಲ್ಲರ ಅಚ್ಚುಮೆಚ್ಚಿನದೆನ್ನುವಲ್ಲಿ ಎರಡು ಮಾತಿಲ್ಲ. ಪತಂಜಲಿಯ ಭಾಷ್ಯ ಇದಕ್ಕಿರುವುದರಿಂದ ಅರಿಯುವುದು ಸುಲಭವಾಗಿದೆ._
http://shreenidhiabhyankar.blogspot.in/
ಮುಂದುವರಿಯುವುದು......
📗 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ