ರಾಮಾಯಣ ೬೫

📕🌳 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌳📕 ಭಾಗ- ೬೫

*ಉತ್ತರೇಣಾವಕಾಶೋಸ್ತಿ ಕಶ್ಚಿತ್ಪುಣ್ಯತಮೋ ಮಮ ದ್ರುಮಕುಲ್ಯ ಇತಿ ಖ್ಯಾತೋ ಲೋಕೇ ಖ್ಯಾತೋ ಯಥಾ ಭವಾನ್*

_ರಾಮನ ಬಾಣಕ್ಕೆ  ಹೆದರಿ ಸಮುದ್ರರಾಜನು ಕಾಣಿಸಿಕೊಂಡನು. ರಾಮನು ತನ್ನ ಬಾಣ ಎಂದಿಗೂ ವ್ಯರ್ಥವಾಗದೆಂದಾಗ ಸಮುದ್ರರಾಜನು ಈ ಮಾತನ್ನು ಆಡುತ್ತಿದ್ದಾನೆ. ರಾಮ, ಇಲ್ಲಿಗೆ ಉತ್ತರ ದಿಕ್ಕಿನಲ್ಲಿ ದ್ರುಮಕುಲ್ಯವೆಂಬ ಹೆಸರಿನ ಪುಣ್ಯತಮವಾದ ಪ್ರದೇಶವೊಂದಿದೆ. ಅದು ನಿನ್ನಂತೆಯೇ ಪ್ರಖ್ಯಾತವಾದುದು. ಅಲ್ಲಿ ಕ್ರೂರಕರ್ಮಿಗಳಾದ ದಸ್ಯುಗಳು ಸೇರಿಕೊಂಡಿದ್ದಾರೆ. ಅವರು *ಆಭೀರ* ಎಂಬ ನೀಚಜಾತಿಯವರು. ಅವರು ನನ್ನೊಳಗೆ ಸೇರಿಕೊಂಡಿದ್ದು ಪಾಪಕರ್ಮಗಳನ್ನು ಆಚರಿಸುತ್ತಿದ್ದಾರೆ. ಹಾಗಾಗಿಯೇ ನೀಚ ಜಾತಿಯವರು. ಇಲ್ಲಿ ಕರ್ಮಕ್ಕನುಗುಣವಾಗಿ ಜಾತಿಯ ಉಲ್ಲೇಖ ಹೊರತು ಹುಟ್ಟಿನಿಂದಲ್ಲ. ಅವರ ಮೇಲೆ ನಿನ್ನ ಶರ ಪ್ರಯೋಗಿಸಿ ನನಗಾಗುವ ತೊಂದರೆ ನಿವಾರಿಸು ಎಂದನು. ಒಡನೆಯೇ ಬಿಟ್ಟ ರಾಮನ ಬಾಣವು ಆ ಪ್ರದೇಶದ ನೀರನ್ನು ಇಂಗಿಸಿತು. ಅನಂತರ ಆ ದ್ರುಮಕುಲ್ಯವು *ಮರುಕಾಂತಾರ* ಮರಳುಗಾಡು ಎಂದೇ ಖ್ಯಾತವಾಯಿತು. ದಸ್ಯುಗಳೆಲ್ಲರೂ ಸುಟ್ಟು ಹೋದರು.ಅಸ್ತ್ರ ತಾಗಿದ ರಭಸಕ್ಕೆ ಭೂಮಿ ಬಿರಿದು ಪಾತಾಳದಿಂದ ನೀರು ಚಿಮ್ಮಿತು. ಹಾಗೆ ಹುಟ್ಟಿದ ಆ ಕೂಪವು ವ್ರಣಕೂಪವೆಂದೇ ಖ್ಯಾತವಾಯಿತು._

*ವರಂ ತಸ್ಮೈ ದದೌ ವಿದ್ವಾನ್ ರವೇಮರವಿಕ್ರಮಃ.... ಬಹುಸ್ನೇಹೋ ಬಹುಕ್ಷೀರಃ ಸುಗಂಧಿರ್ವಿವಿಧೌಷಧಃ*

_ಅನಂತರ ರಾಮನು ಆ ಪ್ರದೇಶಕ್ಕೆ ಈ ವರವನ್ನು ಅನುಗ್ರಹಿಸಿದನು. ಈ ಪ್ರದೇಶ ಸಸ್ಯಸಮೃದ್ಧಿಯಿಂದಲೂ, ಆರೋಗ್ಯಕರವಾದ ವಾಯುವಿನಿಂದೂ, ಫಲಮೂಲಗಳಿಂದಲೂ, ರಸದ್ರವ್ಯಗಳಿಂದಲೂ, ತುಪ್ಪ ಹಾಲು ಸುಗಂಧದ್ರವ್ಯಗಳಿಂದಲೂ ವಿವಿಧಮೂಲಿಕೆಗಳಿಂದಲೂ ಕೂಡಿರಲಿ. ರಾಮನ ವರದಿಂದ ಅದು ವಾಸಯೋಗ್ಯ ಒಳ್ಳೆಯ ಪ್ರದೇಶವಾಯಿತು. ಈ ಪ್ರದೇಶವೇ ಬಹುಶಃ ಈಗಿನ ಅರಬ್ ರಾಷ್ಟ್ರಗಳು ಇರಬಹುದೇನೋ! ಇದು ಸಂಶೋಧನೆಗೆ ಒಳ್ಳೆಯ ವಿಷಯ._

*ಪಿತ್ರಾ ದತ್ತವರಃ ಶ್ರೀಮಾನ್ ಪ್ರತಿಮೋ ವಿಶ್ವಕರ್ಮಣಾ*

_ಕೊನೆಗೆ ಸಮುದ್ರರಾಜನೇ ವಿಶ್ವಕರ್ಮನ ಅಂಶಜಾತನಾದ ನಳನ ಮೂಲಕ ನೀನು ನನ್ನ ಮೇಲೆ ಸೇತುವೆ ನಿರ್ಮಿಸು. ನಿರ್ಮಾಣ ಕಾಲದಲ್ಲಿ ಬಳಸುವ ಯಾವ ವಸ್ತುಗಳೂ ನೀರಲ್ಲಿ ಮುಳುಗಿಹೋಗದಂತೆ, ಕ್ರೂರಜಂತುಗಳು ತೊಂದರೆ ನೀಡದಂತೆ ನಾನು ಸಹಕರಿಸುವೆನು ಎನ್ನುವನು. ಶಿಲ್ಪಶಾಸ್ತ್ರ ದಲ್ಲಿ ಇವನು ತಂದೆಗೆ ಸಮಾನವಾದ ಪಾಂಡಿತ್ಯ ಹೊಂದಿರುವನು. ಅವನ ನಿರ್ಮಾಣದ ಸೇತುವೆ ಮುಳುಗದಂತೆ ನಾನು ಹೊತ್ತುಕೊಳ್ಳುವೆ ಎಂದೂ ನುಡಿದನು. ಗುಲಾಮರ ಪರಂಪರೆಯಿಂದ ಬಂದು ಗುಲಾಮರ ಕೈಯಲ್ಲಿ ಅನೇಕ ಭವನಗಳನ್ನು ನಿರ್ಮಿಸಿ ಅದನ್ನೇ ದೊಡ್ಡದು ಇತಿಹಾಸ ಪ್ರಸಿದ್ಧ ಎಂದೆಲ್ಲಾ ಸಾರುವ ಮೂರ್ಖರಿಗೆ ರಾಮಸೇತುವಿನ ನಿರ್ಮಾಣದ ಈ ಪರಸ್ಪರ ಸಹಕಾರ ಹೇಗೆ ಕಂಡೀತು! ಅಥವಾ ರಾಮಸೇತುವಿನ ಮಹತ್ವವಾದರೂ ಹೇಗೆ ತಿಳಿದೀತು!_

http://shreenidhiabhyankar.blogspot.in/

📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩