ಕಿರಾತಾರ್ಜುನೀಯ

🌸 ಕಿರಾತಾರ್ಜುನೀಯದ ಒಂದು ಸಾಯಕ 🌸

*चतसृष्वपि ते विवेकिनी नृप विद्यासु निरूढिमागता | कथमेत्य मतिविपर्ययं करिणी पँकमिवावसीदति ||*

_ಭೀಮನು ಮತ್ತೆ ಧರ್ಮಜನಿಗೆ ಹೇಳುತ್ತಿದ್ದಾನೆ. ನೃಪನೇ, ನಾಲ್ಕು ವಿದ್ಯೆಗಳನ್ನು ಬಲ್ಲವನು ನೀನು. ಆನ್ವಿಕ್ಷಿಕೀ ಅಂದರೆ ತರ್ಕಶಾಸ್ತ್ರ= ವಸ್ತುಗಳನ್ನು ಪ್ರಮಾಣಬದ್ಧವಾಗಿ ಅರಿಯುವ ಜ್ಞಾನ, ತ್ರಯೀ ಅಂದರೆ ವೇದಗಳು = ವಿಶ್ವದ ಎಲ್ಲಾ ರೀತಿಯ ಜ್ಞಾನದ ಮೂಲಗಳು, ವಾರ್ತಾ ಅಂದರೆ ಮಾಡಬೇಕಾದ ಹಾಗೂ ಮಾಡಬಾರದ ಕರ್ಮಗಳ ಯಥಾರ್ಥ ಜ್ಞಾನ ಹಾಗೂ ದಂಡನೀತಿ ಅಂದರೆ ನೀತಿಶಾಸ್ತ್ರ ಆಡಳಿತದ ಸಂಪೂರ್ಣ ಪರಾಪರಗಳ ಸಂಹಿತೆ. ಈ ನಾಲ್ಕು ನಿನಗೆ ಗೊತ್ತಿಲ್ಲದ ವಿಷಯಗಳಲ್ಲ. ನಾಲ್ಕನ್ನೂ ಎಲ್ಲರಿಗಿಂತ ಹೆಚ್ಚು ಅರಿತವನು ನೀನು. ಹಾಗಿದ್ದೂ ಏಕೆ ಈ ದುಃಖವೆಂಬ ಅಥವಾ ಕಷ್ಟವೆಂಬ ಸಮುದ್ರದಲ್ಲಿ ಮುಳುಗುತ್ತಿರುವೆ. ಕವಿ ಒಳ್ಳೆಯ ಉದಾಹರಣೆ ನೀಡಿದ್ದಾನೆ. ಆನೆಯೊಂದು ಕೆಸರಲ್ಲಿ ಮುಳುಗುತ್ತಿದ್ದಾಗ ತನ್ನ ನಾಲ್ಕು ಕಾಲುಗಳ ಬಲವನ್ನೂ ಪ್ರಯೋಗಿಸಿ ಪಾರಾಗುವುದು. ಹಾಗಿಲ್ಲದಿದ್ದಾಗ ನಾಲ್ಕು ಕಾಲುಗಳಿದ್ದೂ ಮುಳುಗಿದರೆ ಅದರ ಮೂರ್ಖತನವನ್ನು ನಿಂದಿಸಬೇಕಾಗುತ್ತದೆ. ಆನೆಯ ನಾಲ್ಕು ಕಾಲುಗಳಂತೆ ಪ್ರಕೃತ ನಿನ್ನಲ್ಲಿರುವ ನಾಲ್ಕು ಮಹತ್ತರವಾದ ವಿದ್ಯೆಗಳು. ಅವುಗಳನ್ನು ಸಮಯಕ್ಕೆ ಸರಿಯಾಗಿ ವಿನಿಯೋಗಿಸದಿದ್ದಲ್ಲಿ ಇದ್ದು ಏನು ಫಲ! ನೀನು ಕಷ್ಟ ಪಡುತ್ತಿರುವುದು ಹೌದು, ಹಾಗಂತ ಎಷ್ಟು ಕಾಲ ಹೀಗೆ ಇರಬಲ್ಲೆ! ಇದರಿಂದ ಪಾರಾಗುವ ಬಗೆ ಯೋಚಿಸು,ಅದರತ್ತ ಗಮನ ಹರಿಸು. ಭೀಮನ ಮಾತಿನಂತೆ ನಾವೂ ಅನೇಕ ಬಾರಿ ಕಲಿತ ವಿದ್ಯೆ ಮರೆತು ಮೂರ್ಖರಂತೆ ಏನೇನೋ ಮಾಡಿ ಕಷ್ಟ ಪಡುತ್ತೇವೆ. ನಮಗೆ ಗೊತ್ತಿರುವ ವಿದ್ಯೆ ಸರಿಯಾದ ಸಂದರ್ಭದಲ್ಲಿ  ಉಪಯೋಗಿಸಬೇಕು. ಆಗ ಮಾತ್ರ ಕಲಿತದ್ದಕ್ಕೂ ಸಾರ್ಥಕ. ಕಷ್ಟದ ಪರಿಸ್ಥಿತಿಗಳಲ್ಲಿ ಎದೆಗುಂದದೇ ವಿದ್ಯೆಯಿಂದಲೇ ಎದುರಿಸಿ ಸುಖ ಅನುಭವಿಸುವ ಮನೋಭಾವ ನಮ್ಮದಾಗಲಿ._

📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩