ರಾಮಾಯಣ ೬೯

📕🌳 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌳📕 ಭಾಗ- ೬೯

*ಯೂಥಪಾನಾಂ ಸಹಸ್ರಾಣಾಂ ಶತೇನ ಪರಿವಾರಿತಃ*

_ರಾವಣನು ತಾನೇ ಉಪ್ಪರಿಗೆಯ ಮೇಲೇರಿ ಸೈನ್ಯವನ್ನು ನೋಡುತ್ತಾ ವಾನರಮುಖ್ಯರನ್ನು ಪರಿಚಯಿಸುವಂತೆ ಸಾರಣನಿಗೆ ಹೇಳುತ್ತಾನೆ. ಆಗ ಸಾರಣನು ಒಬ್ಬೊಬ್ಬ ವಾನರವೀರನ ಬಗೆಗೆ  ವರ್ಣಿಸುತ್ತಾನೆ. ನೀಲನೆಂಬ ಪರಾಕ್ರಮಿಯು ಒಂದು ಲಕ್ಷ ಕಪಿಗಳೊಡನೆ ಕೂಡಿಕೊಂಡು ಯುದ್ಧ ಮಾಡಲು ತವಕಿಸುತ್ತಿದ್ದಾನೆ. ಅಂಗದನಂತೂ ಕೈಗಳನ್ನು ಮೇಲಕ್ಕೆತ್ತಿ ಗಾಳಿಯಲ್ಲಿ ಗುದ್ದುತ್ತಾ ತನ್ನ ರೋಷವನ್ನು ಪ್ರಕಟಿಸುತ್ತಿದ್ದಾನೆ. ಸೇತುವೆ ಕಟ್ಟಿದ ನಳನ ಜೊತೆಗೆ  ಸಾವಿರ ಕೋಟಿ ಎಂಟು ಲಕ್ಷ ಭೀಕರಾಕೃತಿಯ ಉಗ್ರಸ್ವಭಾವದ ಚಂಡಪರಾಕ್ರಮಿಗಳಾದ ಕಪಿವೀರರಿರುವರು. ಅವರಂತೂ ನಾವೇ ಲಂಕೆಯನ್ನು ಸೂರೆಗೊಳ್ಳುವೆವು ಎಂಬ ಉತ್ಸಾಹದಲ್ಲಿ ಗರ್ಜಿಸುತ್ತಿದ್ದಾರೆ. ಬಹುಶಃ ಇವನ ಸೇನೆ ಎಲ್ಲಾ ಕಾಲದ ಬೃಹತ್ ಸೇನೆಯೆಂದು ಹೇಳಬಹುದು. ಇವರೆಲ್ಲರೂ ಚಂದನವನದ ವಾಸಿಗಳಾಗಿದ್ದರು. ಇನ್ನೊಬ್ಬ ಶುಭ್ರ ಬಿಳಿಬಣ್ಣದ ವಾನರ ಶ್ವೇತ. ಅವನು ವೀರನೆಂದು ಮೂರು ಲೋಕಗಳಲ್ಲಿಯೂ ಖ್ಯಾತನಾದವನು. ಮತ್ತೊಬ್ಬ ಕುಮುದ. ಇವನ ವಾಸ ಸಂಕೋಚನ ಪರ್ವತ. ಲಕ್ಷ ಸಂಖ್ಯೆಯ ಸೈನಿಕರು ಅವನೊಡನೆ ಬಂದಿರುವರು. ಅವನ ಬಾಲದಲ್ಲಿ ಕೆಂಪು ಹಳದಿ ಬಿಳಿ ಹೀಗೆ ಬಹಳ ವರ್ಣದ ರೋಮಗಳಿದ್ದವಂತೆ. ಈಗಿನ ಕಾಲದ ಕಲರಿಂಗ್ ಆಗಲೇ ಕಪಿಗಳು ಅನ್ವೇಷಿಸಿದ್ದರೇನೋ! ಇನ್ನೊಬ್ಬ ರಂಭ. ಸಹ್ಯ, ( ಈಗಿನ ಪಶ್ಚಿಮ ಘಟ್ಟ,) ವಿಂಧ್ಯ ( ಮಹಾರಾಷ್ಟ್ರ ವ್ಯಾಪಕ ಪರ್ವತ) ಕೃಷ್ಣಗಿರಿ ( ಹೊಸೂರು ದಾಟಿದ ಮೇಲೆ ಸಿಗುವ ತಮಿಳು ಪ್ರಾಂತ್ಯ) ಸುದರ್ಶನ ಹೀಗೆ ನಾಲ್ಕು ಪರ್ವತಗಳಲ್ಲಿ ಸುತ್ತುತ್ತಾ ಒಂದು ಕೋಟಿ ಮೂವತ್ತು ಲಕ್ಷ ವಾನರರನ್ನು ಕರೆ ತಂದಿದ್ದಾನೆ. ಇನ್ನೊಬ್ಬ ಶರಭ. ಇವನ ಜೊತೆಗೆ *ವಿಹಾರ* ಹೆಸರಿನ ವಾನರಯೋಧರಿದ್ದಾರೆ. ಇವನು ಸಾಲ್ವೇಯ ಪರ್ವತವಾಸಿ. ಮತ್ತೊಬ್ಬ ಪನಸ ಹೆಸರಿನ ವಾನರ ಪಾರಿಯಾತ್ರ ( ಈಗಿನ ಅರಾವಳಿ ) ಪರ್ವತದಲ್ಲಿ ಇರುವವನು. ಅವನ ಸೇನೆ ಐವತ್ತು ಲಕ್ಷ ವಾನರ ವೀರರಿಂದ ಕೂಡಿದೆ. ಈ ಕಡೆ ಮತ್ತೊಬ್ಬ ವೀರ ಪರ್ಣಾಸಾ ನದಿಯ ನೀರನ್ನು ಕುಡಿದು ಕೊಬ್ಬಿರುವನು. ಇವನು ವಿನತ. ಅವನ ಕೆಳಗೆ ಅರವತ್ತು ಲಕ್ಷ ವಾನರರಿದ್ದಾರೆ. ಇನ್ನೊಬ್ಬ ಬಂಗಾರದ ಬಣ್ಣದ ಸೇನಾಪತಿ ಗವಯ. ಅವನ ಬಳಿ ಎಪ್ಪತ್ತು ಲಕ್ಷ ಸೈನಿಕರಿದ್ದಾರೆ. ಹೀಗೆ ಇನ್ನೂ ಬಹಳ ವಾನರ ವೀರರನ್ನು ರಾವಣನಿಗೆ ಪರಿಚಯ ಮಾಡಿಕೊಡುತ್ತಾನೆ. ಅವನು ಅಂದಾಜು ಎರಡು ಮೂರು ಗಂಟೆಗಳ ಕಾಲ ಸೇನೆಯೊಂದಿಗೆ ಸೇರಿ ಇಷ್ಟು ಕಡಿಮೆ ಸಮಯದಲ್ಲಿ ಇಷ್ಟೆಲ್ಲಾ ಮಾಹಿತಿ ಕಲೆಹಾಕಿದ್ದು ನೋಡಿದರೆ ಆಗಿನ ಮಾಹಿತಿ ಸಂಗ್ರಹ ವಿಧಾನ ಈಗಿನ ತಂತ್ರಜ್ಞಾನವನ್ನು ಮೀರಿಸಿತ್ತೇನೋ? ಈಗ ಯಾವ ಉಪಗ್ರಹದ ಚಿತ್ರಗಳೂ ಅಥವಾ ದ್ರೋಣ್ ಕ್ಯಾಮರಾಗಳೂ ಇಷ್ಟು ನಿಖರವಾದ ಮಾಹಿತಿ ಕಲೆಹಾಕಲಾರವು. ಕಪಿಗಳ ಅಗಾಧ ಸಂಖ್ಯೆ ವೈವಿಧ್ಯ ಇವನ್ನೆಲ್ಲಾ ಗಮನಿಸಿದರೆ ವಾಲ್ಮೀಕಿಗಳ ಲೋಕಜ್ಞಾನದ ಅಗಾಧತೆ ಅರಿವಾಗುತ್ತದೆ._


http://shreenidhiabhyankar.blogspot.in/

📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩