ವೇದ ಧರ್ಮ ೪೧
📗🌾📙 ವೇದ-ಧರ್ಮ 📗🌾📙 ಭಾಗ-೪೧
*ನಿರುಕ್ತ*
_*ಅರ್ಥಾವಬೋಧೇ ನಿರಪೇಕ್ಷತಯಾ ಪದಜಾತಂ ಯತ್ರೋಕ್ತಂ ತನ್ನಿರುಕ್ತಮ್* ಎಂಬಂತೆ ವೇದದ ಅರ್ಥವನ್ನು ಅರಿಯಲು ಇನ್ನೊಂದರ ಅಪೇಕ್ಷೆ ಇಲ್ಲದೆ ಪದಗಳನ್ನು ಯಾವ ಗ್ರಂಥ ಹೇಳುವುದೋ ಅದೇ ನಿರುಕ್ತ. ಉ- ಹಸು ಎಂಬ ಅರ್ಥ ಬರುವ ಗೌಃ ಗ್ಮಾ ಜ್ಮಾ ಕ್ಷ್ಮಾ ಎಂದೆಲ್ಲಾ ಹೇಳಿ ದೇವಪತ್ನ್ಯಃ ವರೆಗೆ ಪರ್ಯಾಯ ಪದ ಹೇಳಲಾಗಿದೆ. ಹೀಗೆ ಬೇರೆ ವಸ್ತು ವಿಷಯ ದೇವತೆಗಳಿಗೆ ಬೇರೆ ಬೇರೆ ಕಡೆ ಬರುವ ಹೆಸರುಗಳನ್ನು ಕ್ರಮವಾಗಿ ವಿವರಿಸಲಾಗಿದೆ. ಇದರಲ್ಲಿ ಮೂರು ಕಾಂಡಗಳಿವೆ. ನೈಘಂಟುಕಕಾಂಡ, ನೈಗಮ ಕಾಂಡ, ದೈವತ ಕಾಂಡ ಎಂದು. ಮೊದಲನೆಯ ಕಾಂಡದಲ್ಲಿ ವೇದೊಕ್ತ ಪದಗಳ ಪರ್ಯಾಯಗಳನ್ನು, ಎರಡನೆಯದರಲ್ಲಿ ವೇದದ ಉಲ್ಲೇಖಗಳ ಕಥೆಗಳ ವಿವರಣೆಯನ್ನೂ, ಮೂರನೆಯ ಕಾಂಡದಲ್ಲಿ ದೇವತೆಗಳ ಗಣ ಅವರ ಸ್ಥಾನಗಳನ್ನು ತಿಳಿಸಲಾಗಿದೆ. ಒಟ್ಟು ಮೂರು ದೇವತಾಗಣಗಳು ಕ್ರಮವಾಗಿ ಭೂಮಿ ಆಕಾಶ ಹಾಗೂ ದ್ಯುಲೋಕವನ್ನು ವ್ಯಾಪಿಸಿವೆ. ಇದಲ್ಲದೆ ಪರಿಶಿಷ್ಟ ಕಾಂಡವೂ ಇದೆ. ಇದರಲ್ಲಿ ನಿಪಾತಗಳು, ಅವುಗಳ ಲಕ್ಷಣ, ವೇದದ ಪ್ರಕಾರ ಅವುಗಳ ಅರ್ಥ ಇತ್ಯಾದಿಗಳನ್ನು ಉದಾಹರಣೆ ಸಹಿತ ವಿವರಿಸಲಾಗಿದೆ. ಹಾಗಿದ್ದೂ ವೇದಾರ್ಥ ಅರಿಯಲು ಪ್ರಯತ್ನಿಸಿದಾಗ ನಿರುಕ್ತದ ಕೆಲವು ವಚನ ಸಂಕುಚಿತ ಎನಿಸುತ್ತದೆ. ಹಾಗಾಗಿಯೇ ಕೆಲವರು ಇದನ್ನು ಖಂಡಿಸಿದ್ದಾರೆ. ಇದಕ್ಕೆ ಕಾರಣ ನಿರುಕ್ತವಲ್ಲ, ಸಂಸ್ಕೃತ ಭಾಷೆಯ ವೈಶಿಷ್ಟ್ಯ. ವಿದ್ವತ್ ಸಂಪಾದಿಸುತ್ತಾ ಹೋದಂತೆ ಸಂಸ್ಕೃತ ಭಾಷೆಯಲ್ಲಿ ಪದಗಳು ಬಿಡಿ ಅಕ್ಷರಗಳಿಗೂ ನಾನಾ ಅರ್ಥಗಳನ್ನು ಗುರುತಿಸಬಹುದು. ವೇದದ ವಿಷಯದಲ್ಲಿ ಭಿನ್ನ ಅಭಿಪ್ರಾಯಗಳು ತಲೆದೋರಲು ಇದೂ ಒಂದು ಕಾರಣ. ಆದರೆ ನಿರುಕ್ತದ ಅಧ್ಯಯನ ಮೊದಲ ಹಂತದಲ್ಲಿ ಅತ್ಯವಶ್ಯ. ನ ಎನ್ನುವ ಅಕ್ಷರಕ್ಕೆ ಸಾಮಾನ್ಯವಾಗಿ ನಿಷೇಧ ಎನ್ನುವ ಅರ್ಥ ಇದೆ. ಆದರೆ ವೇದದಲ್ಲಿ ಇದೇ ಅಕ್ಷರಕ್ಕೆ ಸದೃಶ ಎನ್ನುವ ಅರ್ಥ ಕಂಡುಬರುತ್ತದೆ. ಎಲ್ಲಾ ಶಬ್ದಗಳಿಗೂ ನಿರ್ವಚನ ಹೇಳುವುದರಿಂದ ಇದು ನಿರುಕ್ತವೆಂದೆನಿಸಿದೆ._
*ಜ್ಯೌತಿಷ*
_ವೇದಾಂಗ ಜ್ಯೌತಿಷದ ರಚನೆಕಾರರು ಲಗಧ ಹೆಸರಿನ ಮುನಿಗಳು. ವರಾಹಮಿಹಿರ ಭಾಸ್ಕರಾಚಾರ್ಯ ಆರ್ಯಭಟ ಮುಂತಾದವರು ಈ ಕ್ಷೇತ್ರವನ್ನು ಮತ್ತಷ್ಟು ಬೆಳೆಸಿದರು. ಮುಖ್ಯವಾಗಿ ಜ್ಯೌತಿಷವು ಕಾಲದ ಮಹತ್ವವನ್ನು ಅದರ ಪೂರ್ಣತೆಯನ್ನು ತಿಳಿಸಿಕೊಡುತ್ತದೆ. ಇದರಲ್ಲಿ ಗಣಿತ ಭಾಗವು ಆಧುನಿಕ ವಿಜ್ಞಾನವನ್ನೂ ಮೀರಿ ಬೆಳೆದಿದೆ. ಫಲಭಾಗದ ಅಲ್ಪಾಧ್ಯಯನವು ಅದರ ಪ್ರಾಮಾಣಿಕತೆಯನ್ನು ಸಂಶಯಿಸುವಂತೆ ಮಾಡಿದೆ ಅಷ್ಟೇ. ವೇದೋಕ್ತ ಕರ್ಮಗಳ ಆಚರಣೆಗೆ ನಿರ್ದಿಷ್ಟವಾದ ಮುಹೂರ್ತಗಳನ್ನು ಗುರುತಿಸಿದೆ ಈ ಶಾಸ್ತ್ರ. ಸುಮ್ಮನೆ ಮಾಡಿದಾಗ ಅಲ್ಪ ಸ್ವಲ್ಪ ಫಲ ಸಿಗಬಹುದಾದರೂ ಆಯಾ ಕಾಲದಲ್ಲಿ ಮಾಡಿದಾಗ ಹೆಚ್ಚು ಫಲ ಸಿಗುತ್ತದೆ. ಹೇಗೆಂದರೆ ಮಳೆಗಾಲದಲ್ಲಿ ಬಾವಿ ತೋಡಿದರೂ ಬೇಸಿಗೆಯಲ್ಲಿ ತೋಡಿದರೂ ನೀರು ಸಿಗುತ್ತದೆ. ಆದರೆ ನೀರಿನ ಸಮತಲವನ್ನು ಗುರುತಿಸಲು ಶಾಶ್ವತವಾಗಿ ನೀರು ಪಡೆಯಲು ಬೇಸಿಗೆಯೇ ಶ್ರೇಷ್ಠವಾದುದು.ಅದರಂತೆ ಜ್ಯೋತಿಷ್ಯ ರೀತ್ಯಾ ನೈಮಿತ್ತಿಕ ( ವಿಶೇಷ ಕಾರಣ ಇಟ್ಟುಕೊಂಡು ಮಾಡುವ ಕರ್ಮಗಳು) ಕರ್ಮಗಳ ಆಚರಣೆ ಒಳ್ಳೆಯ ಮುಹೂರ್ತದಲ್ಲಿ ಮಾಡಿದರೆ ಸರಿಯಾದ ಫಲ ಸಿಗುವುದು._
http://shreenidhiabhyankar.blogspot.in/
ಮುಂದುವರಿಯುವುದು......
📗 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ