ಮಹಾಭಾರತ ೧೪
🔥📕 ಮಹಾಭಾರತದ ವಿಶೇಷ ಶ್ಲೋಕ ಹಾಗೂ ಮಾಹಿತಿಗಳು📕🔥 ಭಾಗ ೧೪
*ಭದ್ರಂ ವೋಸ್ತು ನಿಹಿತಂ ಯದ್ಗುಹಾಯಾಂ*
_ದ್ರೌಪದಿಯನ್ನು ವರಿಸಿದ ವೀರರಿಗೆ ಶುಭ ಹಾರೈಸುವ ಕೃಷ್ಣನ ಮಾತುಗಳಿವು. ವೇದದ ವಾಕ್ಯವೂ ಇದೇ ತರಹದ್ದು. ಮಹಾನಾರಾಯಣೋಪನಿಷತ್ತಿನ ಈ ಮಂತ್ರ ನೋಡಿ_
*ಪರೇಣ ನಾಕಂ ನಿಹಿತಂ ಗುಹಾಯಾಂವಿಭ್ರಾಜದೇತದ್ಯತಯೋ ವಿಶಂತಿ*
_ನಿಮಗೆ ಶುಭವಾಗಲಿ, ಆ ಮಂಗಳ ಇದುವರೆಗೆ ಗೂಢವಾಗಿತ್ತು, ಉರಿಯುವ ಬೆಂಕಿಯಂತೆ ಬೆಳಗಿ, ಯಾರೂ ನಿಮ್ಮನ್ನು ಗುರುತಿಸದಿರಲಿ. ಇಂತಹ ಹಾರೈಕೆಗಾಗಿಯೇ ಕೃಷ್ಣ ತನ್ನ ಶಿಬಿರದಿಂದ ಓಡೋಡಿ ಬಂದಿದ್ದ. ಪಾಂಡವರ ಧರ್ಮಬುದ್ಧಿ ಭಗವಂತನನ್ನೇ ಅವರಲ್ಲಿಗೆ ಎಳೆದು ತಂದಿತ್ತು. ಧರ್ಮಾಚರಣೆಯ ಮಹತ್ವ ಈ ಸಂದರ್ಭದಲ್ಲಿ ಸ್ಪಷ್ಟವಾಗಿ ಕಾಣುತ್ತದೆ
*ಯೇ ಚಾನ್ನಮಿಚ್ಛಂತಿ ದದಸ್ವ ತೇಭ್ಯಃ ಪರಿಶ್ರಿತಾ ಯೇ ಪರಿತೋ ಮನುಷ್ಯಾಃ*
_ಭಿಕ್ಷೆ ಬೇಡಿ ಬಂದ ನಾಲ್ವರು ಧರ್ಮಜನಿಗೆ ಅರ್ಪಿಸಿದರು. ಅವನು ಅಮ್ಮನಿಗೆ ನೀಡಿದ. ಕುಂತಿ ಆಗ ತಾನೇ ಮನೆಗೆ ಬಂದ ಸೊಸೆಗೆ ನೀಡಿ ಈ ಮಾತನ್ನಾಡುವಳು. ಪರಸ್ಪರ ಅವರ ಪ್ರೀತಿ ಹೇಗೆ ವ್ಯಕ್ತವಾಗುವುದೆಂದು ಇಲ್ಲಿ ಗಮನಿಸಬಹುದು. ಒಬ್ಬರು ಮತ್ತೊಬ್ಬರನ್ನು ಆದರಿಸುವುದು ಸ್ವಲ್ಪವೂ ಸಂಶಯ ಅಥವಾ ಬಯಕೆ ಇಲ್ಲದ ನಿಷ್ಕಲ್ಮಶ ಪ್ರೀತಿ ಅವರ ವ್ಯವಹಾರದ ಸಹಜ ಗುಣ. ಅಮ್ಮಾ , ಮೊದಲ ಭಾಗ ದೇವತೆಗಳಿಗೆ ಬಲಿ ನೀಡು, ಎರಡನೆಯದಾಗಿ ಬ್ರಾಹ್ಮಣರಿಗೆ ಭಿಕ್ಷೆ ನೀಡು, ಮೂರನೆಯದಾಗಿ ಅನ್ನಾಪೇಕ್ಷಿಗಳಾಗಿ ನಮ್ಮ ಸುತ್ತಲೂ ನೆರೆದವರಿಗೆ ನೀಡು, ನಾಲ್ಕನೆಯ ಭಾಗವನ್ನು ಎರಡು ಮಾಡಿ ನಾಲ್ವರಿಗೂ ನನಗೂ ಹಂಚು ಎನ್ನುತ್ತಾಳೆ ಆ ಮಹಾಮಾತೆ. ತಾವೇ ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿರುವ ಸಂದರ್ಭದಲ್ಲೂ ಲೋಕ ಕ್ಷೇಮ ಬಯಸುವ ಕುಂತಿಯ ಮನೋಭಾವ ನಮಗೆ ಎಂದಾದರೂ ಒಂದು ತುತ್ತು ತಿನ್ನುವಾಗಲಾದರೂ ನೆನಪಾದೀತೇ! ಇನ್ನುಳಿದ ಅರ್ಧವನ್ನು ಭೀಮನಿಗೆ ನೀಡು. ಇವನು ಬಹುಭೋಜಿ. ಪರಾಕ್ರಮಿಯೂ ಎನ್ನುವಳು. ದ್ರೌಪದಿ ಅತ್ತೆಯ ಮಾತಿನಂತೆ ಆಗಲೆಂದು ಸ್ವಲ್ಪವೂ ಹಿಂಜರಿಯದೆ ಹಾಗೆಯೇ ಹಂಚುವಳು. ಅವರ ಒಗ್ಗಟ್ಟು ನಮಗೊಂದು ಪಾಠವಲ್ಲವೇ! ಆ ಅಮ್ಮನ ಮಾತು ಅವರಿಗೆಲ್ಲ ವೇದವಾಕ್ಯ. ಅಮ್ಮನನ್ನು ಆದರಿಸುವ ರೀತಿ ಇದೇ. ಇದಿಲ್ಲದೆ ಏನು ಮಾಡಿದರೇನು ಫಲ! ದಾಸರೆಂದಂತೆ ಹೆತ್ತ ತಾಯಿ ತಂದೆಯರ ಚಿತ್ತವ ನೋಯಿಸಿ ನಿತ್ಯ ದಾನವ ಮಾಡಿ ಫಲವೇನು?_
🍂📕 ಸಂಗ್ರಹ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ