ಮಹಾಭಾರತ ೧೬
🔥📕 ಮಹಾಭಾರತದ ವಿಶೇಷ ಶ್ಲೋಕ ಹಾಗೂ ಮಾಹಿತಿಗಳು📕🔥 ಭಾಗ ೧೬
*ಉತ್ಕೃಮ್ಯ ಸರ್ವಾಣಿ ವಸೂನಿ ತತ್ರ ಸಾಂಗ್ರಾಮಿಕಾನ್ಯಾವಿವಿಶುರ್ನೃವೀರಾಃ*
_ದ್ರುಪದನ ಅರಮನೆಯಲ್ಲಿ ಪುಷ್ಕಲ ಭೋಜನಮಾಡಿದ ಪಾಂಡವರು ಮುಂದುವರಿದು ಬೇರಾವ ವಸ್ತುಗಳ ಕಡೆ ಹೆಚ್ಚು ಗಮನ ಕೊಡದೆ ಯುದ್ಧ ಸಾಮಗ್ರಿಗಳಿದ್ದಲ್ಲಿ ಶೀಘ್ರವಾಗಿ ಹೋದರು.ಇದನ್ನು ಕಂಡ ದ್ರುಪದಾದಿಗಳು ಹರ್ಷಿಸಿದರು. ದ್ರುಪದನ ವರ್ಣ ಗುರುತಿಸುವ ಪರೀಕ್ಷೆ ಯಶಸ್ವಿಯಾಗಿತ್ತು.ಪಾಂಡವರೂ ಅವನನ್ನು ವಂಚಿಸಲು ಸ್ವಲ್ಪವೂ ಬಯಸದೆ ತಮ್ಮ ಆಸಕ್ತಿಯನ್ನು ಸಹಜವಾಗಿ ತೋರ್ಪಡಿಸಿದರು. ಇದು ಕಷ್ಟದಲ್ಲಿರುವಾಗಲೂ ತಮ್ಮತನ ಬಿಟ್ಟುಕೊಡದ ಸದಭಿಮಾನಕ್ಕೆ ಉತ್ತಮ ಉದಾಹರಣೆ._
*ಕಾಮಯಾ ಬ್ರೂಹಿ ಸತ್ಯಂ ತ್ವಂ ಸತ್ಯಂ ರಾಜಸು ಶೋಭತೆ ಇಷ್ಟಾಪೂರ್ತೇನ ಚ ತಥಾ ವಕ್ತವ್ಯಮನೃತಂ ನ ತು*
_ದ್ರುಪದನ ಮಾತು, ಎಲೈ ನೀನು ನಾಲ್ಕು ವರ್ಣದವರಲ್ಲಿ ಯಾರೆಂದು ಸತ್ಯವನ್ನೇ ನುಡಿ. ಮನಃಪೂರ್ವಕವಾಗಿ ಸತ್ಯ ಹೇಳು. ರಾಜರ ವರ್ತನೆಯಲ್ಲಿ ಇಷ್ಟಾಪೂರ್ತವಾಗುವುದಕ್ಕಿಂತ ಹೆಚ್ಚು ಸತ್ಯಮಾತಿಗೆ ಬೆಲೆ ಇದೆ. ಇಷ್ಟಾಪೂರ್ತವೆಂದರೆ ಯಾಗಗಳ ಅಚರಣೆ ಹಾಗೂ ಕೆರೆ ಬಾವಿ ಇತ್ಯಾದಿ ಲೋಕೋಪಕಾರಿ ಕರ್ಮಗಳ ಆಚರಣೆ. ಸುಳ್ಳನ್ನು ಎಂದಿಗೂ ಆಡಬಾರದು. ಸತ್ಯದ ಬಗ್ಗೆ ಆಗಿನ ಜನರಲ್ಲಿ ಎಷ್ಟು ಜಾಗೃತಿ ಗೌರವ ಇದ್ದವೆಂದು ಇದರಿಂದ ಅರಿಯಬಹುದು. ಲೋಕೋಪಯೋಗಿ ಕಾರ್ಯಗಳಿಗಿಂತಲೂ ಸತ್ಯ ಮಾತನಾಡುವುದು ಹೆಚ್ಚು ಮಹತ್ವದ್ದಾಗಿತ್ತು. ಅದರಲ್ಲೂ ಅಧಿಕಾರದಲ್ಲಿರುವವರು ಉಳಿದವರಿಗೆ ಮಾದರಿಯಾಗಿರುತ್ತಾರೆ. ಅವರೇ ಅನೃತವಾಡಿದರೆ ಹೇಗೆ ಸಹ್ಯವಾದೀತು! ಹಾಗಾಗಿ ಏನುಪಕಾರ ಮಾಡಿದಿ ಅನ್ನುವ ಮಾತಿಗಿಂತ ಎಷ್ಟು ಸತ್ಯ ನುಡಿದಿ ಅನ್ನುವುದೇ ಮುಖ್ಯವಾಗಿತ್ತು. ನಾವು ಈಗ ಸತ್ಯವನ್ನು ಕಸವನ್ನಾಗಿಸಿ ಸುಳ್ಳಿನ ಸೌಧದಲ್ಲಿ ವಿಹರಿಸುತ್ತಿದ್ದೇವೆ. ಸುಳ್ಳಾಡಿಯೂ ಭಾರೀ ಸಮಾಜಸೇವೆ ಮಾಡಿದೆವೆಂದು ಮೆರೆಯುತ್ತೇವೆ. ಸತ್ಯದ ದಾರಿ ಹಿಡಿಯೋಣವೇ!_
*ಪದ್ಮಿನೀವ ಸುತೇಯಂ ತೇ ಹ್ರದಾದನ್ಯಂ ಹ್ರದಂ ಗತಾ*
_ವ್ಯಾಸರ ಅಲಂಕಾರಿಕ ಶೈಲಿ ಇಲ್ಲಿದೆ. ಧರ್ಮಜನ ಮಾತು. ದುಃಖಿಸದಿರು ರಾಜನೇ, ನಾವೆಲ್ಲರೂ ಕ್ಷತ್ರಿಯರು, ಈ ನಿನ್ನ ಮಗಳು ತಾವರೆ ಬಳ್ಳಿಯಂತೆ ಒಂದು ಕೊಳದಿಂದ ಮತ್ತೊಂದು ಕೊಳಕ್ಕೆ ಪಯಣ ಬೆಳೆಸಿದ್ದಾಳಷ್ಟೇ. ಇಲ್ಲಿ ದ್ರೌಪದಿಯ ಸೌಂದರ್ಯವೂ ವ್ಯಕ್ತವಾಯಿತು. ದ್ರುಪದನ ಆತಂಕವೂ ದೂರವಾಯಿತು. ಅಪ್ಪನ ಮನೆಯಲ್ಲಿ ಎಷ್ಟು ಸುಖಿಯಾಗಿದ್ದಳೋ ಅಷ್ಟೇ ಸುಖ ಪತಿಗಳ ಬಳಿಯೂ ಹೊಂದುವಳು ಎನ್ನುವ ಅರ್ಥದಲ್ಲಿ ಕೊಳ ಶಬ್ದವನ್ನು ಬಳಸಿದ್ದು._
🍂📕 ಸಂಗ್ರಹ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ