ರಾಮಾಯಣ ೬೮

📕🌳 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌳📕 ಭಾಗ- ೬೮

*ಅಭೂತಪೂರ್ವಂ ರಾಮೇಣ ಸಾಗರೇ ಸೇತುಬಂಧನಮ್ ಸಾಗರೇ ಸೇತುಬಂಧಂತು ನ ಶ್ರದ್ದದ್ಯಾಂ ಕಥಂಚನ*

_ರಾವಣನು ಅಮಾತ್ಯರೊಡನಾಡುವ ನುಡಿ. ಈ ಸೇತುಬಂಧವು ಹಿಂದೆ ಯಾವತ್ತಿಗೂ ನಡೆಯದ ಅದ್ಭುತವೇ ಸರಿ. ಸಮುದ್ರದಲ್ಲಿ ಸೇತುವನ್ನು ಕಟ್ಟುವ ವಿಷಯ ನಾನು ಎಳ್ಳಷ್ಟೂ ನಂಬಿರಲಿಲ್ಲ. ಆದರಿಂದು ಈ ಘಟನೆಯನ್ನು ಅವರ ಸಾಮರ್ಥ್ಯವನ್ನು ನೆನೆದು ಆಶ್ಚರ್ಯವೆನಿಸುತ್ತಿದೆ. ರಾವಣನು ಹದಿನಾಲ್ಕು ಲೋಕಗಳನ್ನೂ ಸಾಕಷ್ಟು ಬಾರಿ ಸುತ್ತಿದವನು. ಆದರೆ ಇಂತಹ ಪರಮಾದ್ಭುತ ಕಾರ್ಯ ಈವರೆಗೆ ನೋಡಿರಲಿಲ್ಲವೆಂದರೆ ರಾಮಸೇತುವಿನ ಮಹತ್ವ ತಿಳಿಯುತ್ತದೆ. ಮನದಲ್ಲಿ ಕಲ್ಪಿಸಲಿಕ್ಕೂ ಅಸಾಧ್ಯವಾದ ಕಾರ್ಯವನ್ನು ಕಪಿಗಳ ಮೂಲಕ ರಾಮನು ನಡೆಸಿದ್ದನು. ರಾವಣನಿಗೆ ಇದನ್ನು ನೋಡಿಯಾದರೂ ರಾಮನ ಶಕ್ತಿ ತಿಳಿಯಬೇಕಾಗಿತ್ತು. ಆದರೆ ಅವನು ಕಡೆಗೂ ಅರಿಯಲಿಲ್ಲ._

*ತತಸ್ತದ್ವಾನರಂ ಸೈನ್ಯಮಚಿಂತ್ಯಂ ರೋಮಹರ್ಷಣಮ್ ಸಂಖ್ಯಾತು ನಾಧ್ಯಗಚ್ಛೇತಾಂ ತದಾ ತೌ ಶುಕಸಾರಣೌ*

_ರಾವಣನ ಆಜ್ಞೆಯಂತೆ ಶುಕ-ಸಾರಣರೆಂಬ ಮಂತ್ರಿಗಳು ಕಪಿಸೈನ್ಯದ ಪರಿಮಾಣ ಅಳೆಯಲು ಕಪಿವೇಷದಲ್ಲಿ ಬರುವರು. ಆ ಸೇನೆಯಾದರೋ ಮೈ ನವಿರೇಳಿಸುವಂತೆ ಊಹೆಗೂ ನಿಲುಕದಂತೆ ಅಸಂಖ್ಯಾತವಾಗಿತ್ತು. ಅದರ ಪರಿಮಾಣ ಎಷ್ಟೆಂದು ಅವರೀರ್ವರಿಗೂ ಅರಿವಾಗಲಿಲ್ಲ. ಕಪಿ ಸೇನೆ ಎಷ್ಟಿರಬಹುದೆಂದು ಅಂದಾಜಿಸಲೂ ಕಷ್ಟವಿತ್ತು. ಕಣ್ಣು ಹಾಯಿಸಿದಷ್ಟೂ ವ್ಯಾಪಿಸಿತ್ತು ಸಮುದ್ರದಂತೆ ಆ ವಾನರಸೇನೆ._

*ಯಥೋಕ್ತಂ ವಾ ಕೃತಂ ಕಾರ್ಯಂ ಛಂದತಃ ಪ್ರತಿಗಮ್ಯತಾಮ್ ಅಥ ಕಿಂಚಿದದೃಷ್ಟಂ ವಾ ಭೂಯಸ್ತದ್ದೃಷ್ಟುಮರ್ಹತಃ*

_ರಾಮ‌ನ ಹಾಸ್ಯೋಕ್ತಿ ಇಲ್ಲಿ ನೋಡಬಹುದು. ಶುಕ-ಸಾರಣರನ್ನು ವಿಭೀಷಣ ಗುರುತಿಸಿ ರಾಮನ ಬಳಿ ಕರೆತರುತ್ತಾನೆ. ಆಗ ರಾಮನಾಡುವ ಮಾತು- ನಮ್ಮ ಸೇನೆಯನ್ನೆಲ್ಲ ಸರಿಯಾಗಿ ನೋಡಿದಿರಾ? ನಮ್ಮನ್ನು ಪರೀಕ್ಷಿಸಿ ಆಯಿತೇ? ವಹಿಸಿಕೊಂಡ ಕಾರ್ಯ ಮುಗಿದರೆ ತೆರಳಿ, ಉಳಿದಿದ್ದರೆ ಅದನ್ನೂ ನೋಡಿ ತೆರಳಬಹುದು. ಬೇಕಾದರೆ ವಿಭೀಷಣನೇ ಎಲ್ಲವನ್ನೂ ವಿವರಿಸಿ ಹೇಳುವನು. ಶತ್ರುಪಕ್ಷದ ಗೂಢಚಾರರ ಬಳಿ ಹೀಗೆ ತಮಾಷೆ ಮಾಡಿ ಮುಂದೆ ಅವರಿಗೆ ಅಭಯವನ್ನೂ ನೀಡುತ್ತಾನೆ._

*ನ್ಯಸ್ತಶಸ್ತ್ರೌ ಗೃಹೀತೌ ವಾ ನ ದೂತೌ ವಧಮರ್ಹತಃ*

_ಇದು ರಾಮನ ನುಡಿ. ಸೆರೆಸಿಕ್ಕಿ ಪ್ರಾಣ ಹೋಗಬಹುದೆಂದು ಭಾವಿಸಿ ನಡುಗುತ್ತಿದ್ದ ಅವರೀರ್ವರನ್ನು ರಾಮ ಸಮಾಧಾನಿಸುತ್ತಾನೆ. ಹೆದರದಿರಿ, ಆಯುಧ ಇಲ್ಲದವರನ್ನೂ, ದೂತರನ್ನೂ ಕೈಗೆ ಸಿಕ್ಕಿದರೆಂದು ಕೊಲ್ಲುವುದು ಸರಿಯಲ್ಲ. ಅಧರ್ಮಿಗಳಿರಲಿ, ಅನಾಚಾರಿಗಳಿರಲಿ ಈ ಎರಡು ಗುಂಪಿಗೆ ಸೇರಿದಾಗ ಅಂತಹವರನ್ನು ಕೊಲ್ಲಬಾರದು. ಹಾಗಾಗಿ ವಿಭೀಷಣ, ಬಿಟ್ಟು ಬಿಡು ಇವರನ್ನು. ಶರಣಾದವರಿಗೆ ಅಭಯ ನೀಡುವ ರಾಮನ ಗುಣ ಎಲ್ಲಾ ಜನರಿಗೂ ಮಾದರಿ. ಶತ್ರುಗಳನ್ನೂ ಕ್ಷಮಿಸುವ ಗುಣ ಮಾದರಿ._

http://shreenidhiabhyankar.blogspot.in/

📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩