ಮಹಾಭಾರತ ೧೫
🔥📕 ಮಹಾಭಾರತದ ವಿಶೇಷ ಶ್ಲೋಕ ಹಾಗೂ ಮಾಹಿತಿಗಳು📕🔥 ಭಾಗ ೧೫
*ನ ತತ್ರ ವರ್ಣೇಷು ಕೃತಾ ವಿವಕ್ಷಾ ನ ಜೀವಶಿಲ್ಪೇ ನ ಕುಲೇ ನ ಗೋತ್ರೇ*
_ಧರ್ಮಜನ ಮಾತು. ದ್ರುಪದನ ಪುರೋಹಿತನು ದ್ರೌಪದಿಯನ್ನು ವರಿಸಿದವರು ಯಾರೆಂದು ವಿಚಾರಿಸಿ ಬರಲು ಕಳುಹಿಸಿದಾಗ ಬಂದ ಪುರೋಹಿತನ ಬಳಿ ಹೇಳಿದ ಮಾತು. ಅಯ್ಯಾ, ಬ್ರಾಹ್ಮಣ ಯಾರು ವರಿಸಿದರೇನು ಚಿಂತೆ, ಲಕ್ಷ್ಯ ಭೇದಿಸಿದವರೇ ಕೈ ಹಿಡಿದಿರುವರು. ಆ ಪಣದಲ್ಲಿ ಅವನ ವರ್ಣ, ಅವನ ಜೀವನವೃತ್ತಿ, ಅವನ ಕುಲ, ಅವನ ಗೋತ್ರ ಯಾವುದರ ಅಪೇಕ್ಷೆಯೂ ಇಲ್ಲದೆ ಕೇವಲ ಪರಾಕ್ರಮವೊಂದೇ ಪಣವಾಗಿತ್ತು. ಈ ಮಾತು ಕರ್ಣನ ಬಗೆಗಿನ ತಿರಸ್ಕಾರದ ಸುಳ್ಳು ಕಥೆಗೆ ಉತ್ತರ ರೂಪವಾಗಿದೆ. ಕರ್ಣನನ್ನು ಮೇಲೆರಿಸಲು ಹೋಗಿ ದ್ರೌಪದಿ ಅವನ ಕುಲ ಕೇಳಿ ತಿರಸ್ಕರಿಸಿದಳೆಂದು ಹೇಳುವ ಕಥೆಯೆಲ್ಲವೂ ಕಲ್ಪಿತ. ಕರ್ಣ ಎತ್ತಲು ಪ್ರಯತ್ನಿಸಿದ, ಆದರವನಿಗೆ ಅದು ಅಸಾಧ್ಯವಾಯಿತು. ಬಲರಾಮಾದಿಗಳು ಕೃಷ್ಣನ ಮಾತಿನಂತೆ ಪ್ರಯತ್ನಿಸಲಿಲ್ಲ. ಕೊನೆಗೆ ಅರ್ಜುನ ಬ್ರಾಹ್ಮಣ ವೇಷದಲ್ಲಿ ಲಕ್ಷ್ಯ ಭೇದಿಸಿ ಗೃಹಲಕ್ಷ್ಮಿ ಪಡೆದ. ಕುಲ ಗೋತ್ರಗಳ ಬಗೆಗೆ ಮಹಾಭಾರತ ಕಾಲದಲ್ಲಿ ಹೆಚ್ಚು ಗಮನ ಕೊಡದೇ ಸಾಮರ್ಥ್ಯದ ಬಗೆಗೆ ಗೌರವ ನೀಡುತ್ತಿದ್ದರು._
*ಜನ್ಯಾರ್ಥಮನ್ನಂ ದ್ರುಪದೇನ ರಾಜ್ಞಾ ವಿವಾಹಹೇತೋರುಪಸಂಸ್ಕೃತಂ ಚ*
_ಹೀಗೆ ಮಾತುಕತೆ ನಡೆಯುತ್ತಿರುವಾಗ ಇನ್ನೊಬ್ಬ ದ್ರುಪದನ ದೂತ ಔತಣಕ್ಕಾಗಿ ಅವರನ್ನು ಆಹ್ವಾನಿಸುವನು. ಮದುವೆಯ ನಂತರ ಔತಣ ಕೊಡಿಸುವ ಪದ್ಧತಿ ಆ ಕಾಲದಲ್ಲೇ ಪ್ರಸಿದ್ಧವಾಗಿತ್ತು. ಈಗ ಅದು ಮದುವೆ ದಿನ ಹೆಣ್ಣಿನ ಕಡೆ, ಮರುದಿನ ಗಂಡಿನ ಕಡೆ ಎಂಬಂತೆ ಸ್ವಲ್ಪ ವ್ಯತ್ಯಾಸವಾಗಿದೆ ಅಷ್ಟೇ. ಇಲ್ಲಿ ದ್ರುಪದನೇ ಎಲ್ಲಾ ಜನರಿಗಾಗಿ ಹಾಗೂ ದ್ರೌಪದಿಯ ಗಂಡನಿಗಾಗಿ ಔತಣ ಏರ್ಪಡಿಸಿದ್ದಾನೆ._
*ಫಲಾನಿ ಮಾಲ್ಯಾನಿ ... ಸುಸಂಸ್ಕೃತಾನಿ ಚರ್ಮಾಣಿ ವರ್ಮಾಣಿ ತಥಾಸನಾನಿ ಗಾಶ್ಚೈವ .. ರಜ್ಜೂರ್ದ್ರವ್ಯಾಣಿ ಕೃಷೀನಿಮಿತ್ತಮ್ ... ಅನ್ಯೇಷು ಶಿಲ್ಪೇಷು ..*
_ದ್ರುಪದನ ವರ್ಣ ಪರೀಕ್ಷೆಯ ಕ್ರಮ ಚೆನ್ನಾಗಿದೆ. ಈಗ ನಾವು ಯಾರನ್ನಾದರೂ ಜಾತಿಯನ್ನು ಗುರುತಿಸಬೇಕಾದರೆ ಹೆಸರಿನಿಂದ ಅಥವಾ ವೃತ್ತಿಯಿಂದ ಗುರುತಿಸುತ್ತೇವೆ. ದ್ರುಪದನು ಹಾಗಲ್ಲ. ನಾಲ್ಕು ವರ್ಣದವರು ಇಚ್ಛಿಸುವ ಬೇರೆ ಬೇರೆ ವಸ್ತುಗಳನ್ನು ಅಲ್ಲಲ್ಲಿ ಇಟ್ಟನು. ಹಣ್ಣು ಹೂವು ಇತ್ಯಾದಿ ಬ್ರಾಹ್ಮಣರಾದರೆ, ಚರ್ಮದ ವಸ್ತ್ರ ಕವಚ ಆಸನ ಆಯುಧ ಕ್ಷತ್ರಿಯರಾದರೆ, ಗೋವು ಹಗ್ಗ ವ್ಯವಸಾಯ ಸಂಬಂಧಿಸಿದ ವಸ್ತುಗಳು ವೈಶ್ಯರಾದರೆ, ಇನ್ನು ಬೇರೆ ಬೇರೆ ಕುಶಲಕಲೆಗಳಿಗೆ ಸಂಬಂಧಪಟ್ಟ ವಸ್ತುಗಳು ಶೂದ್ರರಾದರೆ ಗುರುತಿಸುವರು, ಆಸಕ್ತಿ ತೋರುವರೆಂಬ ದೃಷ್ಟಿಯಿಂದ. ಇಲ್ಲಿ ವರ್ಣಗಳ ವ್ಯತ್ಯಾಸ ಗುರುತಿಸುವುದು ಬಣ್ಣ ರೂಪ ಅಂತಸ್ತು ಯಾವುದನ್ನು ಅವಲಂಬಿಸಿಯೂ ಅಲ್ಲ. ಅವರವರ ಆಸಕ್ತಿಯ ಕ್ಷೇತ್ರವನ್ನವಲಂಬಿಸಿ. ಹೀಗಾಗಿಯೇ ಕೃಷ್ಣನ ಮಾತು ಗುಣ ಕರ್ಮಗಳನ್ನು ಅವಲಂಬಿಸಿ ವರ್ಣಪದ್ಧತಿ ಇರುವುದೇ ಹೊರತು ರಕ್ತ ರೂಪಗಳನ್ನು ಅವಲಂಬಿಸಿ ಅಲ್ಲ ಎಂಬುದು. ನಾವು ರಕ್ತ ರೂಪವನ್ನು ಅನುಸರಿಸಿ ಜಾತಿ ಪದ್ಧತಿ ಅನುಸರಿಸುತ್ತಿರುವುದು ಎಷ್ಟು ವರ್ಣವ್ಯವಸ್ಥೆಗೆ ವಿರುದ್ಧವಾಗಿದೆ, ಎಷ್ಟು ಮೂರ್ಖ ವ್ಯವಸ್ಥೆಯಾಗಿದೆ ಇದು!_
🍂📕 ಸಂಗ್ರಹ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ