ವೇದ ಧರ್ಮ ೪೦
📗🌾📙 ವೇದ-ಧರ್ಮ 📗🌾📙 ಭಾಗ-೪೦
_ವ್ಯಾಕರಣ ಅಧ್ಯಯನದ ಪ್ರಯೋಜನಗಳನ್ನು ಹೀಗೆ ಹೇಳುತ್ತಿದ್ದಾರೆ._ *ರಕ್ಷೋಹಾಗಮಲಘ್ವಸಂದೇಹಾಃ ಪ್ರಯೋಜನಮ್*
_ರಕ್ಷಾ= ಮಂತ್ರಗಳ ಹಾಗೂ ಭಾಷೆಯ ಶುದ್ಧತೆಯ ರಕ್ಷಣೆಗೆ ವ್ಯಾಕರಣ ಅವಶ್ಯಕ. ಪ್ರಕೃತಿ ಪ್ರತ್ಯಯ ಅರಿತವನು ಪದಗಳನ್ನು ತಪ್ಪಿಲ್ಲದೆ ಉಚ್ಚರಿಸಬಲ್ಲನು ಅಲ್ಲದೆ ಅರ್ಥವನ್ನು ಸ್ವಲ್ಪ ಮಟ್ಟಿಗೆ ಯೋಚಿಸಬಲ್ಲನು. ವ್ಯಾಕರಣ ಅರಿಯದಿದ್ದರೆ ಆಗುವ ಕೆಲವು ಎಡವಟ್ಟುಗಳನ್ನು ಸಂಸ್ಕೃತಜ್ಞರು ಹೀಗೆ ಗುರುತಿಸಿದ್ದಾರೆ. ಸ್ವಜನ ಅಂದರೆ ನಮ್ಮವರು ಅಥವಾ ಬಂಧುಗಳು ಎಂದರ್ಥ. ಅದರ ಬದಲು ಶ್ವಜನ ಅಂದರೆ ನಾಯಿಗಳು ಎಂದರ್ಥ. ಸಕೃತ್ ಅಂದರೆ ಒಂದು ಬಾರಿ, ಶಕೃತ್ ಅಂದರೆ ಮಲ ಅಥವಾ ಹೂಸು ಎಂಬರ್ಥ. ಇನ್ನೊಂದು ನನ್ನ ಪ್ರತ್ಯಕ್ಷ ಉದಾಹರಣೆ ಹೇಳುವುದಾದರೆ *ಸ್ಮರಣಾದೇವ ತದ್ವಿಷ್ಣೋ:* ಎಂಬಲ್ಲಿ ಪುರೋಹಿತರು ದೇವ ಅಂದರೆ ದೇವರು, ಸ್ಮರಣೆ ಅಂದರೆ ನೆನಪು ಎಂದೆಲ್ಲಾ ಅರ್ಥ ಭಾವಿಸಿದ್ದರು. ಅದು ನಿಜಕ್ಕಾದರೆ ಸ್ಮರಣಾತ್ ಏವ ಅಂದರೆ ಸ್ಮರಣೆಯಿಂದಲೇ ಎಂದಾಗಬೇಕು. ಹೀಗಾಗಿ ವ್ಯಾಕರಣವು ಭಾಷೆಯ ಉಳಿಸುವಿಕೆಯಲ್ಲಿ, ಶುದ್ಧತೆಯಲ್ಲಿ ತುಂಬಾ ಮಹತ್ವವಾದುದು._
_ಊಹಾ ಅಂದರೆ ಕೆಲವು ಕಡೆ ದೇವರ ಕಲ್ಪನೆ. *ಅಗ್ನಯೇ ಜುಷ್ಟಂ ನಿರ್ವಪಾಮಿ* ಎಂಬ ಮಂತ್ರ ಅಗ್ನಿಯಾಗದಲ್ಲಿ ಹೇಳಿದ್ದರೆ, ಸೂರ್ಯನಿಗೆ ಸಂಬಂಧಿಸಿದಾಗ ಸೂರ್ಯಾಯ ಜುಷ್ಟಂ ನಿರ್ವಪಾಮಿ ಎನ್ನಬೇಕು. ವ್ಯಾಕರಣ ಅರಿಯದಿದ್ದರೆ ಅಗ್ನಯೇ ಇದ್ದಂತೆ ಸೂರ್ಯಯೇ ಎನ್ನುವನು. ಹಾಗೆಯೇ ಭದ್ರಂ ಕರ್ಣೇಭಿಃ ಅನ್ನುವಲ್ಲಿ ಕರ್ಣೈಃ ಎಂದಾಗಬೇಕು ಕರ್ಣೇಭಿಃ ತಪ್ಪು ಎಂದೆಲ್ಲಾ ನುಡಿಯುವರು. ಅಲ್ಲಿ ಋಷಿಗಳ ವ್ಯಾಕರಣ ಪ್ರಯೋಗ ಆ ಕಾಲದ ವ್ಯಾಕರಣಕ್ಕೆ ಸಾಧುವಾಗಿದೆ ಎನ್ನುವುದನ್ನು ಅರಿಯಬೇಕು._
_ಆಗಮ. ವೇದಗಳನ್ನು ವೇದಾಂಗಗಳ ಸಹಿತ ಪರಾಮರ್ಶಿಸಿ ಅಧ್ಯಯನ ಮಾಡಲು ವ್ಯಾಕರಣ ಜ್ಞಾನ ಅವಶ್ಯಕ. ಪ್ರಯೋಜಕ ಎನ್ನುವ ಅರ್ಥ. ವೇದಾಂಗಗಳ ಮೂಲಕ ವೇದಗಳ ಅಧ್ಯಯನಕ್ಕೆ ವ್ಯಾಕರಣ ಪ್ರಯೋಜಕ ಎಂದು._
_ಲಘು. ಶಬ್ದರಾಶಿಯನ್ನು ಅದರ ಸಾರವನ್ನು ಅರಿಯಲು ಚಿಕ್ಕ ಉಪಾಯ ಅವಶ್ಯಕ. ಪ್ರಕೃತಿ ಪ್ರತ್ಯಯ ವಿಭಾಗ ಮಾಡಿ ಅಥವಾ ಧಾತುಗಳ ಮೂಲಾರ್ಥ ಅರಿತು ಮಂತ್ರದ ಶಬ್ದಗಳನ್ನು ಅವುಗಳ ಒಳಾರ್ಥವನ್ನು ಅರಿಯಬಹುದು. ಹಿಂದೊಮ್ಮೆ ಬೃಹಸ್ಪತಿಯು ಇಂದ್ರನಿಗೆ ಶಬ್ದ ಪರಿಚಯ ಮಾಡುತ್ತಾ ಸಾವಿರಾರು ವರ್ಷ ಕಳೆದರೂ ಮುಗಿಯಲಿಲ್ಲವಂತೆ. ಹಾಗಾಗಿ ಶಬ್ದಗಳನ್ನು ಒಡೆದು ಅರ್ಥೈಸಿಕೊಳ್ಳುವುದು ಸುಲಭ ಉಪಾಯ._
_ಅಸಂದೇಹ. ಯಾವ ಸ್ವರವಿದ್ದರೆ ಯಾವ ಮಂತ್ರದ ಪದಕ್ಕೆ ಏನರ್ಥ ಹೊಂದುವುದೆಂಬ ಸಂಶಯ ನಿವಾರಣೆಗೆ ವ್ಯಾಕರಣ ಓದಬೇಕು. ಹಿಂದೆ ತ್ವಷ್ಟ್ರು ಪ್ರಜಾಪತಿ ಇಂದ್ರನನ್ನು ಕೊಲ್ಲಲೆಂದು ಯಾಗ ಮಾಡಿದಾಗ ಸರಸ್ವತಿ ಸ್ವರ ವ್ಯತ್ಯಾಸ ಮಾಡಿ ಇಂದ್ರನಿಂದ ಅವನು ಕೊಲ್ಲಲ್ಪಡುವಂತೆ ಮಾಡಿದಳು. ಉದಾತ್ತ ಅನುದಾತ್ತ ಸ್ವರಿತ ಪ್ರಚಯ ದ್ವಿತ್ವ ಮೊದಲಾದ ಸ್ವರಗಳ ಪರಿಚಯಕ್ಕೆ ವ್ಯಾಕರಣ ಓದಬೇಕು._
ಮುಂದುವರಿಯುವುದು......
📗 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ