ರಾಮಾಯಣ ೬೭
📕🌳 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌳📕 ಭಾಗ- ೬೭
*ಮೂರ್ಧ್ನಿ ಸ್ಥಾಸ್ನಾಮ್ಯಹಂ ಯುಕ್ತೋ ಲಕ್ಷ್ಮಣೇನ ಸಮನ್ವಿತಃ*
_ಕಪಿಸೇನೆ ಸಮುದ್ರ ದಾಟಿದೆ. ರಾಮನು ಎಲ್ಲರಿಗೆ ನಿರ್ದೇಶನ ನೀಡುತ್ತಿದ್ದಾನೆ. ನಾಯಕನೆಂದಿಗೂ ತಾನು ಮುಂದೆ ನಿಂತು ಸೈನ್ಯವನ್ನು ಮುನ್ನಡೆಸಬೇಕು. ತಾನು ಮರೆಯಲ್ಲಿ ನಿಂತರೆ ಸೈನಿಕರಿಗೆ ಸ್ಫೂರ್ತಿ ಸಿಗಲಾರದು. ಇಲ್ಲಿ ರಾಮ ಲಕ್ಷ್ಮಣನೊಡಗೂಡಿ ತಾನೇ ಸೈನ್ಯವನ್ನು ಮುನ್ನಡೆಸುತ್ತಿದ್ದಾನೆ. ಅಂಗದನೂ ನೀಲನೂ ವ್ಯೂಹದ ಹೃದಯಭಾಗದಲ್ಲಿ, ಋಷಭನು ದಕ್ಷಿಣದಲ್ಲಿ ( ಬಲಗಡೆ) ಗಂಧಮಾದನನು ಎಡಗಡೆ, ಜಾಂಬವಂತ ಸುಷೇಣ ವೇಗದರ್ಶಿ ಈ ಮೂವರೂ ಮಧ್ಯಭಾಗದಲ್ಲಿ ನಿಂತು ಹೋರಾಡಲಿ. ಸುಗ್ರೀವನು ವ್ಯೂಹದ ಹಿಂದೆ ನಿಂತು ರಕ್ಷಿಸುತ್ತಿರಲಿ ಎಂದು ಹೇಳಿದನು ರಾಮ.ಇಲ್ಲಿ ತಾನೊಬ್ಬ ದೊಡ್ಡ ವೀರ ತನಗೆ ಸಮಾನರು ಯಾರಿಲ್ಲ ಯುದ್ಧ ವಿಷಯದ ಅಪಾರ ಅನುಭವ ತನಗಿದೆ ಮುಂತಾದ ಯಾವ ಅಹಂ ಕೂಡ ಇಲ್ಲದೆ ರಾಮನು ಒಬ್ಬೊಬ್ಬರನ್ನು ಒಂದೊಂದು ವಿಶೇಷಣಗಳಿಂದ ಸಂಬೋಧಿಸುವುದು ಪರರಿಗೆ ನೀಡುವ ಗೌರವವನ್ನು ತೋರಿಸುತ್ತದೆ. ಗೌರವ ಕೊಟ್ಟು ಗೌರವ ಪಡೆ ಎನ್ನುವ ಆದರ್ಶ ರಾಮನ ಕೃತಿಯಲ್ಲಿದೆ. ನಾಯಕನಾಗಿ ಸುಮ್ಮನೆ ನಿಲ್ಲದೆ ಕಾಲಕಾಲಕ್ಕೆ ಮಾರ್ಗದರ್ಶನ ಮಾಡುತ್ತಾ ಸೈನ್ಯದ ಮುಂದೆ ನಿಂತು ಮುನ್ನಡೆಸುವ ಪರಿ ನಾಯಕರಾಗುವರಿಗೆಲ್ಲಾ ಆದರ್ಶ ಪಾಠ._
*ಸೀತಾಂ ವಾಸ್ಮೈ ಪ್ರಯಚ್ಛಾಶು ಯುದ್ಧಂ ವಾಪಿ ಪ್ರದೀಯತಾಮ್*
_ಕಪಿಗಳ ಕೈಯಲ್ಲಿ ಪೆಟ್ಟು ತಿಂದು ರಾಮನಿಂದ ಜೀವ ಉಳಿಸಿಕೊಂಡ ಶುಕನು ರಾವಣನಿಗೆ ನುಡಿಯುವ ಮಾತು. ರಾವಣ ಈ ಬೃಹತ್ ಕಪಿ ಸೈನ್ಯ ಅಲ್ಪಕಾಲದಲ್ಲೇ ಲಂಕೆಯನ್ನು ಆಕ್ರಮಿಸಲಿದೆ. ಕೂಡಲೇ ಎಚ್ಚೆತ್ತುಕೊ, ಸೀತೆಯನ್ನಾದರೂ ಒಪ್ಪಿಸು ಅಥವಾ ಯುದ್ಧವನ್ನಾದರೂ ಹೂಡು. ರಾಜತಾಂತ್ರಿಕ ವರ್ಗದವರು ಎಂದಿಗೂ ವಿಳಂಬ ನೀತಿಯನ್ನು ಅನುಸರಿಸಬಾರದು. ಶತ್ರುವು ದಾಳಿ ಮಾಡಿ ನಷ್ಟವಾಗುವ ಮುನ್ನ ಎಚ್ಚೆತ್ತುಕೊಂಡು ಮುಂದಿನ ನಡೆ ಅನುಸರಿಸಬೇಕು. ಇಲ್ಲಿ ಶುಕನ ಎಚ್ಚರಿಕೆ ತುಂಬಾ ಸಾಧುವಾಗಿದೆ. ರಾವಣನಾದರೋ ಅವನಿಗೇ ಬೈದು ಇನ್ನೂ ಆಲೋಚನೆಯಲ್ಲಿ ಬಿದ್ದನು._
*ಮಮ ಚಾಪಮಯೀಂ ವೀಣಾಂ ಶರಕೋಣೈಃ ಪ್ರವಾದಿತಾಮ್*
_ವಾಲ್ಮೀಕಿಗಳ ಅಲಂಕಾರಿಕ ಶೈಲಿ ಇಲ್ಲಿ ತುಂಬಾ ಸುಂದರವಾಗಿದೆ. ರಾವಣನ ಮಾತಿದು- ನನ್ನ ಚಾಪವೆಂಬ ವೀಣೆಯನ್ನು ಅಸ್ತ್ರಗಳೆಂಬ ಕೋಲುಗಳಿಂದ ಸಂಗ್ರಾಮದಲ್ಲಿ ನುಡಿಸುವೆನು. ಇಲ್ಲಿ ಧನುಸ್ಸು ವೀಣೆ. ನುಡಿಸುವ ಬೆರಳುಗಳ ಬದಲು ಬಾಣಗಳು. ಮಧುರ ಸ್ವರದ ಬದಲು ಶತ್ರುಗಳ ಆರ್ತನಾದದ ಭಯಾನಕ ಸ್ವರ._
http://shreenidhiabhyankar.blogspot.in/
📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ