ಕಿರಾತಾರ್ಜುನೀಯ

🌸 ಕಿರಾತಾರ್ಜುನೀಯದ ಒಂದು ಸಾಯಕ 🌸

*इयमिष्टगुणाय रोचतां रुचिरार्था भवतेपि भारती | ननु वक्तृविशेषनिस्पृहा गुणगृह्या वचने विपश्चितः ||*

_ಭೀಮ ಧರ್ಮಜನಿಗೆ  ನುಡಿಯುವ ಮಾತು. ಕೃಷ್ಣೆಯ ಮಾತು ನಮಗೆಲ್ಲರಿಗೂ ಇಷ್ಟವಾಗಿದೆ. ಹೀಗಿರಲು ಅವಳ ಸತ್ಯವಾದ ಮಾತು ಗುಣವನ್ನು ಮಾತ್ರ ಇಷ್ಟಪಡುವ ನಿನಗೂ ರುಚಿಸಬಹುದು. ಏಕೆ ಹೀಗೆ ಹೇಳುವೆನೆಂದರೆ ಲೋಕದಲ್ಲಿ ಒಂದು ಮಾತಿದೆ. *ಸ್ತ್ರೀಬಾಲಯೋರ್ವಚನಂ ನಹಿ ಗ್ರಾಹ್ಯಂ* ಎಂದು. ಸ್ತ್ರೀಯರು ಮತ್ತು ಮಕ್ಕಳು ಹೆಚ್ಚು ಪರಿಣಾಮ ಯೋಚಿಸದೇ ಮಾತನಾಡುವರು, ಹಾಗಾಗಿ ಅವರ ಮಾತು ಅಸ್ವೀಕೃತವಾದುದು ಎಂದು. ಆದರಿಲ್ಲಿ ನೀನು ಅರಿಯದವನಲ್ಲ. ನೀನು ವಿದ್ವಾಂಸನು. ಮಾತು ಯಾರು ಆಡಿದರೆನ್ನುವುದಕ್ಕಿಂತ ಮಾತಿನಲ್ಲಿ ಏನು ಅಡಗಿದೆ ಸಾರ ಅನ್ನುವುದರ ಬಗ್ಗೆ ಯೋಚಿಸುವವನು. ಆಡುವವನ ಬಗೆಗೆ ಯೋಚಿಸದೆ ಆಡಿದುದರ ಬಗೆಗೆ ಯೋಚಿಸುವವನು. ನಿನಗೆ ವಕ್ತೃವಿನಲ್ಲಿ ಸ್ಪೃಹೆ ಇಲ್ಲ. ಗುಣದಲ್ಲಿ ಮಾತ್ರ ಸ್ಪೃಹೆ. ಹಾಗಾಗಿ ಗುಣೈಕಪಕ್ಷಪಾತಿಯಾದ ಅಥವಾ ಗುಣವನ್ನು ಮಾತ್ರ ಸ್ವೀಕರಿಸುವ ನಿನಗೆ ದ್ರೌಪದಿಯ ಸಾರವತ್ತಾದ ಮಾತುಗಳು ಆನಂದ ತರಬಲ್ಲವು. *ಯುಕ್ತಿಯುಕ್ತಮುಪಾದೇಯಂ‌ ಬಾಲಾದಪಿ ಸ್ತ್ರಿಯಾ ಅಪಿ, ವೃದ್ಧಸ್ಯೈವ ವಚಶ್ಚೇನ್ನಿಸ್ಸಾರಂ‌ ತದುಪೇಕ್ಷಣೀಯಂ* ಎಂಬ ಮಾತೂ ಇದೆ. ಸತ್ಯವಾದ ಸಾಂದರ್ಭಿಕವಾದ ಪ್ರಯೋಜನ ಉಳ್ಳ ಮಾತು ಬಾಲನಾಗಲೀ ಸ್ತ್ರೀ ಆಗಲಿ ಯಾರು ನುಡಿದರೂ ಅದನ್ನು ಆಲಿಸಬೇಕು. ವೃದ್ಧನೇ ನಿಸ್ಸಾರವಾದ ಮಾತು ಒದರಿದರೆ ಅದನ್ನು ತ್ಯಾಗ ಮಾಡಬೇಕು ಎಂಬ ಮಾತು ಇಲ್ಲಿಗೆ ಅನ್ವಯಿಸುತ್ತದೆ. ಬಾಲಾದಪಿ ಸುಭಾಷಿತಮ್ ಎಂಬುದೂ ಇದನ್ನೇ ಹೇಳುತ್ತದೆ. ನಾವೂ ಯಾರ ಮಾತನ್ನಾದರೂ ಆಲಿಸುವಾಗ ಇವ ನಮ್ಮವ ಇವ ಅಲ್ಲ, ಇವಳು ಸ್ತ್ರೀ, ಇದು ಚಿಕ್ಕ ಮಗು, ಇವ ಶತ್ರು, ಇವ ಮಿತ್ರ ಎಂದೆಲ್ಲಾ ಯೋಚಿಸದೇ ಮಾತಿನಲ್ಲಿ ಸಾರ ಎಷ್ಟಿದೆ ಸತ್ಯ ಎಷ್ಟಿದೆ ಅನ್ನುವ ಸಂಗತಿ‌ ಗಮನಿಸೋಣ. ಆಲಿಸುವಿಕೆ ವ್ಯಕ್ತಿ ನಿಷ್ಠವಾಗದೇ ವಸ್ತು ನಿಷ್ಠವಾಗಿರಲಿ. ಹಂಸಕ್ಷೀರ ನ್ಯಾಯದಂತೆ ಸಾರ ಮಾತ್ರ ಗ್ರಹಿಸೋಣ. ಯಾರ ಮಾತನ್ನೂ ಚಿಕ್ಕದೆಂದು ತಿರಸ್ಕರಿಸದೇ, ಅರ್ಥವಾಗದಿದ್ದರೂ ಹಿರಿಯರು ಹೇಳಿದರೆನ್ನುವ ಕಾರಣದಿಂದ ಪುರಸ್ಕರಿಸದೇ ವಿಮರ್ಶಿಸಿ ಬೇಕಾದ್ದನ್ನು ಪಡೆಯೋಣ.ಧರ್ಮಜನಂತೆ ಗುಣಗ್ರಾಹಿಯಾಗೋಣ._

📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩