ಮಹಾಭಾರತ ೧೯
🔥📕 ಮಹಾಭಾರತದ ವಿಶೇಷ ಶ್ಲೋಕ ಹಾಗೂ ಮಾಹಿತಿಗಳು📕🔥 ಭಾಗ ೧೯
_ದ್ರುಪದನಿಗೂ ಧರ್ಮಜನಿಗೂ ಹೀಗೆ ಸಂವಾದ ನಡೆಯುತ್ತಿದ್ದಾಗ ವ್ಯಾಸರು ಸಭೆಗೆ ಪ್ರವೇಶಿಸಿ ಅವನನ್ನು ಸಮಾಧಾನಿಸಿ ಅನೇಕ ಪತಿಯರಿರುವುದು ಹೇಗೆ ಧರ್ಮವೆಂಬುದರ ಬಗ್ಗೆ ಈ ಕಥೆ ಹೇಳಿದರು._
*ಪುರಾ ವೈ ನೈಮಿಷಾರಣ್ಯೇ ದೇವಾಃ ಸತ್ರಮುಪಾಸತೇ ತತ್ರ ವೈವಸ್ವತೋ ರಾಜನ್ಶಾಮಿತ್ರಮಕರೋತ್ತದಾ*
_ಹಿಂದೆ ನೈಮಿಷಾರಣ್ಯದಲ್ಲಿ ದೇವತೆಗಳು ಯಜ್ಞ ಮಾಡುತ್ತಿದ್ದಾಗ ಅದರಲ್ಲಿ ವಿವಸ್ವತನ ಅಂದರೆ ಸೂರ್ಯನ ಮಗನಾದ ಯಮನು ಪಶುವಧೆಯ ಕಾರ್ಯ ಮಾಡುತ್ತಿದ್ದನು. ಯಮನು ಆ ಕಾರ್ಯದಲ್ಲಿ ದೀಕ್ಷಿತನಾದ ಕಾರಣ ಲೋಕದಲ್ಲಿ ಯಾರೂ ಮರಣ ಹೊಂದದೇ ಪ್ರಜೆಗಳೆಲ್ಲ ದೀರ್ಘಾಯುಷಿಗಳಾದರು. ಆಗ ಹೆದರಿದ ಇಂದ್ರಾದಿಗಳು ಬ್ರಹ್ಮನ ಬಳಿ ಹೋಗಿ ಹೀಗೆಂದರು- ಒಡೆಯನೇ, ಮನುಷ್ಯರ ವೃದ್ಧಿಯಿಂದ ನಮಗೆ ಹೆದರಿಕೆ ಆಗಿದೆ. ನಮಗೆ ನೆಮ್ಮದಿ ಕರುಣಿಸಲು ನೀನೇ ಸಮರ್ಥನಾಗಿರುವೆ.ಆಗ ಬ್ರಹ್ಮನೆಂದನು- ನೀವೆಲ್ಲರೂ ಅಮರರು. ಮನುಷ್ಯರಿಂದ ಯಾವ ತರಹದ ಭಯವೂ ನಿಮಗಿಲ್ಲ, ಚಿಂತಿಸುವಿರೇಕೆ? ಆಗ ದೇವತೆಗಳು ಮಾನವರೂ ಸಾವಿಲ್ಲದೆ ಅಮರರಾಗಿರುವ ಕಥೆಯನ್ನು ನಿವೇದಿಸುತ್ತಾರೆ. ಅದಕ್ಕೆ ಪ್ರತಿಯಾಗಿ ಬ್ರಹ್ಮನು ಹೀಗೆನ್ನುವನು- ಸತ್ರಹೇತುವಿನಿಂದ ವೈವಸ್ವತನು ತತ್ಪರನಾಗಿದ್ದಾನೆ. ಅವನ ಎಲ್ಲಾ ಕಾರ್ಯಗಳು ಮುಗಿದ ನಂತರ ಮೊದಲಿನಂತೆ ಪ್ರಾಣಹರಣವನ್ನು ಮಾಡುವನು. ನಿಮ್ಮೆಲ್ಲರ ಶಕ್ತಿಯು ಯಮನಲ್ಲಿದೆ. ಆ ಶಕ್ತಿಯೇ ಮಾನವರ ಅಂತ್ಯವನ್ನು ತರುವುದು. ಆಗ ಮಾನವರ ಶಕ್ತಿಯೆಲ್ಲಾ ಉಡುಗಿಹೋಗುವುದು._
*ಸಮಾಸೀನಾಸ್ತೇ ಸಮೇತಾ ಮಹಾಬಲಾ ಭಾಗೀರಥ್ಯಾಂ ದದೃಶುಃ ಪುಂಡರೀಕಮ್*
_ಬ್ರಹ್ಮನ ಮಾತಿನಂತೆ ದೇವತೆಗಳೆಲ್ಲರೂ ಆ ಯಾಗ ನಡೆಯುತ್ತಿದ್ದ ಪ್ರದೇಶಕ್ಕೆ ಹೋದರು. ಅಲ್ಲಿ ದೇವಗಂಗೆಯಲ್ಲಿ ಅರಳಿರುವ ಒಂದು ಬಿಳಿಯ ತಾವರೆ ಹೂವನ್ನು ಕಂಡರು.( ಬಹುಶಃ ಬಾಣನು ತನ್ನ ಕಾದಂಬರಿಯಲ್ಲಿ ಇದನ್ನೇ ಕಥೆಯನ್ನಾಗಿಸಿದ್ದಾನೆ. ತಾವರೆಯನ್ನು ನಾಯಕನನ್ನಾಗಿಸಿದ ಅವನ ಕವಿ ಕಲ್ಪನೆ ಅದ್ಭುತ. ಅವನ ನಾಯಕನೂ ಕಮಲದಿಂದಲೇ ಹೊರಬಂದು ಪುಂಡರೀಕ ಎಂದೇ ಕರೆಸಲ್ಪಡುವನು.)_
ಮುಂದುವರಿಯುವುದು
http://shreenidhiabhyankar.blogspot.in/
🍂📕 ಸಂಗ್ರಹ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ