ರಾಮಾಯಣ ೬೬
📕🌳 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌳📕 ಭಾಗ- ೬೬
*ದಶಯೋಜನವಿಸ್ತಾರಂ ಶತಯೋಜನಮಾಯತಮ್ ನಲಶ್ಚಕ್ರೇ ಮಹಾಸೇತುಂ ಮಧ್ಯೇ ನದನದೀಪತೇಃ*
_ವಿಶ್ವಕರ್ಮನ ಮಗನಾದ ನಳನ ನೇತೃತ್ವದಲ್ಲಿ ಸೇತುಬಂಧ ಆರಂಭವಾಯಿತು. ಆ ಸೇತು ಹತ್ತು ಯೋಜನ ಅಗಲವೂ ನೂರು ಯೋಜನ ಉದ್ದವೂ ಆಗಿ ಕಟ್ಟಲ್ಪಡುತ್ತಿತ್ತು._
*ದಂಡಾನನ್ಯೇ ಪ್ರಗೃಹ್ಣಂತಿ ವಿಚಿನ್ವಂತಿ ತಥಾ ಪರೇ*
_ಕೆಲವರು ಕೋಲು ಹಿಡಿದು ಅಳತೆ ಮಾಡುತ್ತಿದ್ದರು. ಇನ್ನು ಕೆಲವರು ಯಾರು ಸೋಮಾರಿತನ ಮಾಡದಂತೆ ದಂಡದಿಂದ ಗದರಿಸುತ್ತಿದ್ದರು. ಇನ್ನು ಕೆಲವು ನಾಯಕರು ಮೈಗಳ್ಳರನ್ನು ಹುಡುಕಿ ಅವರಿಂದ ಕೆಲಸ ತೆಗೆಸುತ್ತಿದ್ದರು. ಆ ವಾನರರ ಕೆಲಸದ ಬದ್ಧತೆ ಮನುಷ್ಯರನ್ನೇ ನಾಚಿಸುವಂತಿತ್ತು. ಹಾಗಾಗಿಯೇ ಮೊದಲ ದಿನ ಹದಿನಾಲ್ಕು ಯೋಜನ ದೂರವೂ, ಎರಡನೇ ದಿನ ಇಪ್ಪತ್ತು ಯೋಜನ ದೂರವೂ, ಮೂರನೆಯ ದಿನ ಇಪ್ಪತ್ತೊಂದು ಯೋಜನ ದೂರವೂ, ನಾಲ್ಕನೇ ದಿನ ಇಪ್ಪತ್ತೆರಡು ಯೋಜನ ದೂರವೂ, ಐದನೆಯ ದಿನ ಇಪ್ಪತ್ತಮೂರು ಯೋಜನ ದೂರವೂ ಕಟ್ಟಿ ಮುಗಿಸಿದರು. *ಆರಂಭಗುರ್ವೀ ಕ್ಷಯಿಣೀ ಕ್ರಮೇಣ* ಅನ್ನುವುದು ನಮ್ಮ ಕಾರ್ಯದ ನಿಯಮ. ಆದರೆ ಕಪಿಗಳು ಆರಂಭದಲ್ಲಿ ನಿಧಾನಕ್ಕೆ ಪ್ರಾರಂಭಿಸಿ ನಂತರ ವೃದ್ಧಿಸಿಕೊಂಡು ಐದೇ ದಿನಗಳಲ್ಲಿ ಸಾಧಿಸಿ ತೋರಿಸಿದರು. ಇದು ಕಾರ್ಯದ ಯೋಜನೆಗೆ ಒಂದು ಒಳ್ಳೆಯ ನಿದರ್ಶನ._
*ಶುಶುಭೇ ಸುಭಗಃ ಶ್ರೀಮಾನ್ ಸ್ವಾತೀಪಥ ಇವಾಂಬರೇ*
_ಆ ಸೇತುವು ಆಕಾಶದ ಸ್ವಾತೀಪಥದಂತೆ ತೋರಿತು. ಸೂರ್ಯಾದಿ ಗ್ರಹಗಳಿಗೆ ಆಕಾಶಮಾರ್ಗದಲ್ಲಿ ಆರೋಹಣ ಅವರೋಹಣ ಸ್ಥಾನಗಳಿವೆ. ವಿಮಾನ ಏರಲು ಒಂದೆಡೆ ಅವಕಾಶ ಇದ್ದರೆ ಇಳಿಯಲು ಬೇರೆಯೇ ಕಡೆ ಅವಕಾಶ ಇರುತ್ತದೆ. ಜಾರದ್ಗವ ಐರಾವತ ವೈಶ್ವಾನರ ಎಂದು ಅವುಗಳಲ್ಲಿ ಮೂರು ಪ್ರಕಾರಗಳು. ಜಾರದ್ಗವಕ್ಕೆ ಮಧ್ಯಮಾರ್ಗವೆಂದೂ, ಐರಾವತಕ್ಕೆ ಉತ್ತರ ಮಾರ್ಗವೆಂದೂ, ವೈಶ್ವಾನರಕ್ಕೆ ದಕ್ಷಿಣ ಮಾರ್ಗವೆಂದೂ ಹೆಸರು. ಇವುಗಳಲ್ಲಿ ಒಂದೊಂದು ಮಾರ್ಗಕ್ಕೂ ಮೂರು ಮೂರು ವೀಥಿಗಳಿವೆ. ಹಸ್ತ ಚಿತ್ರಾ ಸ್ವಾತೀ ನಕ್ಷತ್ರಗಳ ಮಾರ್ಗಕ್ಕೆ ಗೋವೀಥಿ ಎಂಬ ಹೆಸರಿದೆ. ಸ್ವಾತೀಪಥವೆಂದರೆ ಈ ಗೋವೀಥಿಯೇ ಆಗಿದೆ. ಇದು ಗ್ರಹಗಳ ಮಧ್ಯಮಾರ್ಗದಲ್ಲಿ ಮಧ್ಯಮ ವೀಥಿಯಾಗುತ್ತದೆ. ಸ್ವಾತೀನಕ್ಷತ್ರದ ಸುತ್ತಲೂ ಬೆಳಕು ಚೆಲ್ಲುವ ಕಾರಣ ಅದು ಹೊಳೆಯುತ್ತದೆ. ಈಗಿನ *ಮಿಲ್ಕಿ ವೇ* ಅದೇ ಇರಬಹುದು. ಅದರಂತೆ ಸೇತುವೂ ವಿಶಾಲವಾಗಿ ಹೊಳೆಯುತ್ತಿತ್ತು ಎನ್ನಬಹುದು. ಗ್ರಹಗಳ ಬದಲು ರಾಮಾದಿಗಳು ಅದರಲ್ಲಿ ಹೋಗುವಂತೆ ಕವಿಯ ಕಲ್ಪನೆ ಇರಬಹುದು._
http://shreenidhiabhyankar.blogspot.in/
📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ