ಪ್ರತಿಜ್ಞಾ ಯೌಗಂಧರಾಯಣ ೪
🔥 ಪ್ರತಿಜ್ಞಾ ಯೌಗಂಧರಾಯಣ 🔥೪
*परचक्रैरनाक्रान्ता धर्मसँकरवर्जिता । भूर्मिर्भर्तारमापन्नं रक्षिता परिरक्षति ।।*
_ಯೌಗಂಧರಾಯಣನ ಮಾತು. ಹಂಸಕನೆಂಬ ಸೇವಕ ವತ್ಸರಾಜನ ಬಂಧನದ ಕಥೆಯನ್ನು ವರ್ಣಿಸುತ್ತಿದ್ದಾನೆ. ಶತ್ರುಗಳಿಂದ ಬಂಧಿತನಾದ ಉದಯನನ ವಿಪುಲವಾದ ಕೇಶರಾಶಿಯನ್ನು ಸೈನಿಕನೊಬ್ಬ ಕತ್ತರಿಸಲೆಂದು ಮುಂದೆ ಬಂದಾಗ ಎಡವಿ ಬಿದ್ದನು ಎಂದಾಗ ಮಂತ್ರಿಯ ಪ್ರತಿಕ್ರಿಯೆ. ಈ ವತ್ಸದೇಶವು ಎಂದಿಗೂ ಶತ್ರುಗಳ ಆಕ್ರಮಣಕ್ಕೆ ಅವರ ದುರಾಚಾರಕ್ಕೆ ಒಳಗಾದದ್ದಿಲ್ಲ. ಈ ದೇಶದಲ್ಲಿ ಎಂದಿಗೂ ವರ್ಣ-ಧರ್ಮಗಳ ಸಾಂಕರ್ಯ ಎಂದಿಗೂ ಜರುಗಿಲ್ಲ. ರಾಜನ ಆಡಳಿತವು ವರ್ಣಾಶ್ರಮಧರ್ಮದ ಪಾಲನೆಯನ್ನು ವ್ಯವಸ್ಥಿತವಾಗಿರಿಸಿದೆ. ಅವರವರ ಕರ್ಮಗಳಲ್ಲಿ ಆಯಾ ಜನತೆ ಸುಖವನ್ನು ಕಾಣುತ್ತಿದ್ದಾರೆ. ತಮ್ಮ ವೃತ್ತಿ ಶ್ರೇಷ್ಠ, ತಮ್ಮ ವರ್ಣ ಕನಿಷ್ಠ ಎಂಬ ಭಾವನೆ ಯಾರಲ್ಲೂ ಇಲ್ಲ. ಹಾಗಾಗಿ ಈ ವ್ಯವಸ್ಥೆ ಮಿಶ್ರಿತವಾಗಿಲ್ಲ. ಈ ಭೂಮಿ ಎಂದಿಗೂ ಒಡೆಯನಿಲ್ಲದಂತೆ ಅಂದರೆ ಅರಾಜಕತೆಯಿಂದ ಬಳಲಲಿಲ್ಲ. ರಾಜನ ಆಡಳಿತ ಬಹುಕಾಲದಿಂದ ಸುಗಮವಾಗಿದೆ. ಹೀಗೆ ರಕ್ಷಿಸಲ್ಪಟ್ಟ ಭೂಮಿ ರಾಜನನ್ನು ರಕ್ಷಿಸದಿದ್ದೀತೆ? ಧರ್ಮದಂತೆ ಯಾವುದನ್ನು ನಾವು ರಕ್ಷಿಸಿದರೂ ಅದು ನಮ್ಮನ್ನು ಪೊರೆಯುತ್ತದೆ. ಉಪಕಾರಕ್ಕೆ ಪ್ರತ್ಯುಪಕಾರ ಮಾಡುವುದು ಪ್ರಕೃತಿಯ ಸಹಜ ಗುಣ. ಗಿಡವೊಂದಕ್ಕೆ ನೇವರಿಸಿದಾಗ, ನಾಯಿಯೊಂದಕ್ಕೆ ಪ್ರೀತಿ ತೋರಿದಾಗಲೆಲ್ಲ ಅವುಗಳೂ ತಮ್ಮದೇ ಭಾಷೆಯಲ್ಲಿ ಪ್ರತಿಕ್ರಿಯೆ ನೀಡುತ್ತವೆ. ಹಾಗೆಯೇ ಭೂಮಿ ಜಡವಾದರೂ ಇಷ್ಟು ಕಾಲ ಸಲಹಿದ ರೀತಿಗೆ ಕೃತಜ್ಞತೆ ತೋರಿತೇನೋ ಎಂಬಂತೆ ಶತ್ರು ಸೈನಿಕನನ್ನು ಬೀಳಿಸಿತು ಎಂಬ ಭಾವ ಮಂತ್ರಿಯದು. ಪ್ರಾಮಾಣಿಕವಾಗಿ ಮಾಡುವ ಯಾವ ಕಾರ್ಯಗಳಿಗೂ ಇಂದಲ್ಲಾ ನಾಳೆ ಪ್ರತಿಫಲ ದೊರೆಯುವುದು ನಿಶ್ಚಿತ ಎಂಬ ಕವಿಯ ಭಾವ ಚೆನ್ನಾಗಿ ಅಭಿವ್ಯಕ್ತವಾಗಿದೆ._
http://shreenidhiabhyankar.blogspot.in/
📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ