🌺ಅವಿಮಾರಕದ ಸುಂದರ ಕುಸುಮ🌺

*क्षमया जय विप्रेन्द्रान् दयया जय संश्रितान् । तत्वबुध्या जयात्मानं तेजसा जय पार्थिवान् ।।*

_ಅವಿಮಾರಕನು ಮಾವ ಕುಂತಿಭೋಜನಿಗೆ ನಮಸ್ಕರಿಸುತ್ತಿದ್ದಾನೆ. ಅವನ ಆಶೀರ್ವಾದದ ಮಾತಿದು.ಬ್ರಾಹ್ಮಣ ಶ್ರೇಷ್ಠರನ್ನು ಕ್ಷಮಾಗುಣದಿಂದ ಜಯಿಸು.ಕ್ಷಮಿಸುವ ಗುಣದಿಂದಲೇ ಬ್ರಾಹ್ಮಣರು ಪ್ರಸಿದ್ಧರು.ಶಮೀಕನೆಂಬ ಶ್ರೇಷ್ಠ ಋಷಿ ತನ್ನ ತಪಸ್ಸಿನ ಕಾಲದಲ್ಲಿ ರಾಜನು ಸತ್ತ ಸರ್ಪವನ್ನು ಮೈಗೆ ಹಾಕಿದರೂ ಕ್ಷಮಿಸಿದನಂತೆ. ನಿಜವಾದ ಬ್ರಹ್ಮ ಚಿಂತನೆ ಇರುವ ನರನಿಗೆ ಸರ್ವಂ ಬ್ರಹ್ಮಾತ್ಮಕಂ ಎಂಬ ಉಪನಿಷತ್ತಿನ ವಾಕ್ಯದಂತೆ ಎಲ್ಲೂ ತಪ್ಪು ಕಂಡುಬರಲಾರದು.ಹಾಗಾಗಿ ಅವನು ಕೋಪಗೊಳ್ಳದೆ ಕ್ಷಮಿಸುವ ಗುಣ ಅಳವಡಿಸಿಕೊಂಡಿರುತ್ತಾನೆ. ನೀನು ಬ್ರಾಹ್ಮಣರಂತೆ ಕ್ಷಮಾಶೀಲನಾಗಿ ಅವರಿಗಿಂತಲೂ ಔನ್ನತ್ಯವನ್ನು ಹೊಂದು ಎಂಬ ಭಾವ.ನಿನ್ನನ್ನು ನಂಬಿಕೊಂಡಿರುವ ಜನರನ್ನು ಕರುಣೆಯಿಂದ ಗೆಲ್ಲು.ಸೇವಕರಿರಲಿ, ಸೈನಿಕರಿರಲಿ,ಸಾಮಾನ್ಯರಿರಲಿ,ಸಾಧುಗಳಿರಲಿ ಅವರೆಲ್ಲರಲ್ಲಿ  ದಯೆ ತೋರಿ ವಿಶ್ವಾಸವನ್ನು ಸಂಪಾದಿಸು.ಅಹಂಕಾರದಿಂದ ಅಥವಾ ದರ್ಪದಿಂದ,ಪರಾಕ್ರಮದಿಂದ ಕೆಲವು ಕಾಲ ಗೆಲ್ಲಬಹುದು ಆದರೆ ದಯೆಯಿಂದ ಯಾವಾಗಲೂ ಗೆಲ್ಲಬಹುದು.ಇದನ್ನೇ ಬಸವಣ್ಣನವರ ವಚನ ಹೇಳುವುದು ದಯವೇ ಧರ್ಮದ ಮೂಲವಯ್ಯ ಎಂಬುದಾಗಿ.ಧರ್ಮದ ಮೂಲವೇ ದಯೆ.ಹಾಗಾಗಿ ಪ್ರತಿಯೊಂದು ಜೀವಿಗಳಲ್ಲಿ ದಯೆ ತೋರು. ಇನ್ನು ನಿನ್ನನ್ನು ನೀನು ತತ್ವಬುದ್ಧಿಯಿಂದ ಜಯಿಸು.ಸರಿ ತಪ್ಪುಗಳ,ಧರ್ಮ ಅಧರ್ಮಗಳ,ನ್ಯಾಯ ಅನ್ಯಾಯಗಳ ವಿವೇಚನೆಯೇ ತತ್ವ.ಅದನ್ನು ಅರಿತಾಗ ನಿನ್ನ ನಿಜಸ್ವರೂಪ ಅರಿತು ನಿನ್ನನ್ನು ನೀನು ನಿಯಂತ್ರಣದಲ್ಲಿಡಲು ಸಹಕಾರಿ ಆಗುವುದು.ಹಾಗಾಗಿ ತತ್ವವನ್ನು ತಿಳಿ.ದೇವನ ತತ್ವವೂ ಅದೇ ಆಗಿದೆ.*ಅಹಿಂಸಾ ಸಮತಾ ತುಷ್ಟಿ: ತಪೋ ದಾನಂ ಮತ್ತ ಏವ ಪೃಥಗ್ವಿಧಾ:* ಎಂಬಂತೆ ಇವೆಲ್ಲ ದೇವನ ತತ್ವವೂ ಹೌದು. ಇನ್ನು ಕೊನೆಯದಾಗಿ ಕ್ಷತ್ರಿಯ ಅಸವನ ಇವರ ಸಾಮಂತರು ಹಾಗೂ ಶತ್ರುಗಳ ಮೇಲಿನ ನಿಯಂತ್ರಣ ಅತ್ಯಂತ ಅವಶ್ಯಕ. ನಿನ್ನ ಪರಾಕ್ರಮದಿಂದ ಶತ್ರುಗಳನ್ನು ಅಥವಾ ಸೊಲ್ಲೆತ್ತುವ ರಾಜರನ್ನು ಗೆದ್ದು ಆಡಳಿತವನ್ನು ಸುಲಭವಾಗಿಸಿಕೊ.ಶತ್ರು ರಹಿತವಾದ ರಾಜ್ಯ ಅಭಿವೃದ್ಧಿ ಹೊಂದುವ ಬಗೆ ಸುಲಭ.ಹಾಗಾಗಿ ಅದರೆಡೆಗೂ ಗಮನ ಹರಿಸು.ಎಷ್ಟು ಒಳ್ಳೆಯ ಸಂದೇಶ. ನಾವೂ ಜೀವನದಲ್ಲಿ ಕ್ಷಮಾಗುಣವನ್ನು ಹೆಚ್ಚಿಸಿಕೊಂಡು,ದಯೆಯನ್ನು ತೋರುತ್ತಾ, ನಮ್ಮನ್ನು ನಾವು ಅರಿತುಕೊಂಡು,ಸಾಧನೆಯಿಂದ ಅಂತರಂಗ ಬಹಿರಂಗದ ಶತ್ರುಗಳನ್ನು ಸದೆಬಡಿದರೆ ಜೀವನ ಸುಲಲಿತ ಅಲ್ಲವೇ ._

📜ಸಂಗ್ರಹ ✍ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩