🌹ಶಾಕುಂತಲದ ಒಂದು ಸುಂದರ ಶ್ಲೋಕ🌹

*मुहुरङ्गुलिसंवृताधरोष्ठं प्रतिषेधाक्षरविक्लवाभिरामम् । मुखमसंविवर्ति पक्ष्मलाक्ष्या: कथमप्युन्नमितं न चुम्बितं तु ।।*

_ದುಷ್ಯಂತ ಶಕುಂತಲೆಯರು ಪರಸ್ಪರ ಒಂದೆಡೆ ಸೇರಿದ್ದಾರೆ.ಅವರ ಸರಸ ಸಲ್ಲಾಪಗಳು ನಡೆಯುತ್ತಿದ್ದಾಗ ವಿಘ್ನ ತರಲೆಂಬಂತೆ ಗೌತಮಿ ಎಂಬ ತಪಸ್ವಿನಿ ಬಂದು ಶಕುಂತಲೆಯ ದೇಹಬಾಧೆಯ ನಿವಾರಣೆಗೆಂದು ತಪೋಜಲವನ್ನು ಪ್ರೋಕ್ಷಿಸಿದ್ದಾಳೆ. ಹಾಗೆಯೇ ಶಕುಂತಲೆಯನ್ನು ಅಲ್ಲಿಂದ ಕರೆದುಕೊಂಡು ಹೋಗುವಳು ಗೌತಮಿ. ಆಗ ರಾಜನಾಡುವ ಸುಂದರ ಮಾತು. ಶಕುಂತಲೆ ಮತ್ತೆ ಮತ್ತೆ ತನ್ನ ಬೆರಳುಗಳಿಂದ ಕೆಳದುಟಿಯನ್ನು ಮುಚ್ಚಿಕೊಳ್ಳುತ್ತಿದ್ದಳು ಚುಂಬನ ಬೇಡವೆನ್ನುವ ಭಾವದಿ. ಹಾಗೆಯೇ ಬೇಡ ಬೇಡ ಎನ್ನುವ ಗಾಬರಿಯ ಮಾತನ್ನಾಡುತ್ತಾ ಸುಂದರವಾದ ರೆಪ್ಪೆಗಳಿಂದ ಕೂಡಿದ ಅತ್ತಿತ್ತ ವೇಗವಾಗಿ ಸಂಚರಿಸುತ್ತಿರುವ ,ಗಾಬರಿಯಿಂದ ಇನ್ನಷ್ಟು ಮನೋಹರವಾದ ಅವಳ ಕಮಲದಂತಹ ಕಣ್ಣುಗಳಿರುವ ಮುಖವನ್ನು ನನ್ನ ಕೈಗಳಿಂದ ಎತ್ತಿಹಿಡಿದೆನಷ್ಟೇ ಚುಂಬಿಸಲಿಲ್ಲ. ದುಷ್ಯಂತನು ಚುಂಬನದ ಬಯಕೆಯನ್ನು ವ್ಯಕ್ತಪಡಿಸಿದಾಗ ಶಕುಂತಲೆ ಬೇಡ ಬೇಡವೆಂದು ತುಟಿಗಳಿಗೆ ತನ್ನ ಬೆರಳುಗಳನ್ನು ಅಡ್ಡ ಇಟ್ಟು ನಿರಾಕರಿಸಿದಳು.ಆ ನಿರಾಕರಣೆಯಲ್ಲಿ ಬಯಕೆಯೂ ಅಡಗಿದೆ. ಗಾಬರಿಯಿಂದ ಕೂಡಿದ ಕಣ್ಣುಗಳು ಅತ್ತಿತ್ತ ಗಮನಿಸುತ್ತಿವೆ. ನಾಚಿ ನೀರಾಗಿದ್ದಾಳೆ ಶಕುಂತಲೆ. ಕೈಗೆ ಬಂದಿದ್ದು ಬಾಯಿಗೆ ಬಂದಿಲ್ಲವಲ್ಲಾ ಎಂಬ ನಿರಾಶೆಯ ಭಾವವು ಮನೋಹರವಾಗಿ ಬಿಂಬಿತವಾಗಿದೆ. ಸಮಯ ಸಂದರ್ಭ ಅನುಕೂಲವಾಗಿದ್ದರೂ ಶಕುಂತಲೆ ನಿರಾಕರಣೆಯಲ್ಲಿ ಸೂಕ್ಷ್ಮ ಸಮ್ಮತಿಯನ್ನು ಕೊಟ್ಟರೂ ಗೌತಮಿಯ ಪ್ರವೇಶದಿಂದ ಆಸೆ ತಡೆಯಲ್ಪಟ್ಟಿತು ಎನ್ನುವ ಭಾವ. ಸ್ವಭಾವೋಕ್ತಿ ಅಲಂಕಾರ. ಪ್ರಾಪ್ತವಾದಂತೆ ಕಂಡುಬಂದದ್ದು ಜಾರಿ ಹೋಯಿತಲ್ಲ ಎನ್ನುವುದು ನಿರಾಸೆಯ ಮೂಲ._

📜ಸಂಗ್ರಹ ✍ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩