🌹ಶಾಕುಂತಲದ ಉತ್ತಮ ಶ್ಲೋಕ🌹
*तपति तनुगात्रि मदनस्त्वामनिशं मां पुनर्दहत्येव | ग्लपयति यथा शशाङ्कं न तथा हि कुमुद्वतीं दिवस: ||*


_ದುಷ್ಯಂತ ಶಕುಂತಲೆಯರು ಪರಸ್ಪರ ಹತ್ತಿರವಿದ್ದರೂ ಮೈಲುಗಟ್ಟಲೆ ದೂರದಲ್ಲಿರುವಂತೆ ಚಡಪಡಿಸುತ್ತಿದ್ದಾರೆ. ರಾಜ ಮರೆಯಲ್ಲಿ ಅವಳ ಮಾತಿಗೆ ಕಿವಿ ಕೊಡುತ್ತಿರುವನು.ಶಕುಂತಲೆ ಹೀಗನ್ನುತ್ತಾಳೆ- ನಿನ್ನ ಮನದ ಅಭಿಪ್ರಾಯ ನನಗೆ ತಿಳಿಯದು.ಆದರೆ ನಿರ್ದಯನೇ ಕಾಮನು ನಿನ್ನಲ್ಲಿ ಆಸಕ್ತಿಯುಳ್ಳ ನನ್ನ ಅಂಗಾಂಗಗಳಿಗೆ ಅಹರ್ನಿಶಿ ನೋವನ್ನುಂಟು ಮಾಡುತ್ತಿರುವನು ಎಂದಾಗ ಆಕಸ್ಮಿಕವಾಗಿ ಅವಳನ್ನು ಸಮೀಪಿಸಿ ಎದುರಿಗೆ ನಿಂತು ದುಷ್ಯಂತನಾಡುವ ಮಾತು. ಕೋಮಲಾಂಗಿಯೇ ,ಕಾಮನು ನಿನಗೆ ಬರಿದೆ ಬೇಗೆಯನ್ನು ಮಾತ್ರ ಉಂಟುಮಾಡುತ್ತಿರುವನು.ಆದರೆ ನನ್ನನ್ನು ಸತತವಾಗಿ ಸುಡುತ್ತಿರುವನು .ಅದು ಹೇಗೆಂದರೆ ಹಗಲು ಚಂದ್ರನಿಗೆ ಎಷ್ಟು ದು:ಖವನ್ನುಂಟುಮಾಡುವುದೋ ಅಷ್ಟು ಕಮಲದ ಬಳ್ಳಿಗಲ್ಲ. ಸೂರ್ಯನು ಹಗಲಿನಲ್ಲಿ ತನ್ನ ಶೌರ್ಯವನ್ನು ಪುರುಷನಾದ ಚಂದ್ರನ ಮೇಲೆ ತೋರುವನೇ ಹೊರತು ಹೆಣ್ಣಾದ ಕುಮುದ್ವತಿಯ ಮೇಲಲ್ಲ. ಕಾಮನು ಕೂಡ ಅವನಂತೆಯೇ.ಅವನು ಪುರುಷನಿಗೆ ಕೊಡುವಷ್ಟು ನೋವನ್ನು ಹೆಣ್ಣಾದ ನಿನಗೆ ಕೊಡಲಾರ. ಶಕುಂತಲೆಯು ಸರಳವಾಗಿ ನುಡಿದ ವಿಷಯವನ್ನು ರಾಜ ಕಾವ್ಯಾತ್ಮಕವಾಗಿ ನುಡಿದು ತನ್ನ ಪ್ರೇಮದ ತಾಪವೇ ಹೆಚ್ಚು ಎನ್ನುತ್ತಿರುವನು. ದೃಷ್ಟಾಂತ ಅಲಂಕಾರ. ಲೋಕದಲ್ಲಿಯೂ ಸಾಮಾನ್ಯವಾಗಿ ಸ್ತ್ರೀಯರು ಬಾಧೆಪಡುವರಾದರೂ ಅಲ್ಪಕಾಲದಲ್ಲಿ ಮರೆತುಬಿಡುವರು ಕೆಲವೊಮ್ಮೆ. ಆ ಕ್ಷಣದಲ್ಲಿ ಅವರ ನೋವು ಸಹಿಸಲು ಕಷ್ಟ. ಆದರೆ ಪುರುಷರ ಮನಸ್ಸು ನೋವಿಗೆ ಒಳಪಡುವುದು ಕಷ್ಟ. ಒಳಪಟ್ಟಾಗ ಹೊರಬರುವುದು ಕಷ್ಟ. ಚಲನಚಿತ್ರಗಳು ಇದನ್ನೇ ಪ್ರಧಾನವಾಗಿ ಪ್ರತಿಬಿಂಬಿಸುತ್ತವೆ. ಅದು ಎಷ್ಟು ಸತ್ಯವೋ ಆ ವಿರಹದ ವೇದನೆಯೇ ಹೇಳಬಲ್ಲದು. ಸೂರ್ಯನ ಆಗಮನವು ಕಮಲಕ್ಕೆ ಆನಂದವನ್ನು ಉಂಟುಮಾಡುತ್ತದೆ. ಅನಂತರ ಜೋರು ಬಿಸಿಲಾದರೂ ಅಷ್ಟೇನು ಬಾಡಲಾರದು. ಚಂದ್ರಮನಿಗೆ ಹಾಗಲ್ಲ.ಸೂರ್ಯನ ಇರುವಿಕೆ ಅವನನ್ನು ಮರೆಮಾಚುತ್ತದೆ.ಅವನು ಕಾಣದಾದಾಗ ಚಂದ್ರನ ಅಸ್ತಿತ್ವ ತೋರುವುದು._

📜ಸಂಗ್ರಹ ✍ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩