🌹ಶಾಕುಂತಲದ ಸುಂದರ ಸುಮ🌹

*पातुं न प्रथमं व्यवस्यति जलं युष्मास्वपीतेषु या नादत्ते प्रियमण्डनापि भवतां स्नेहेन या पल्लवम् । आद्ये व: कुसुमप्रसूतिसमये यस्या भवत्युत्सव: सेयं याति शकुन्तला पतिगृहं सर्वैरनुज्ञायताम् ।।*

_ಶಕುಂತಲೆಯ ಗಮನವನ್ನು ಕಣ್ವರು ಆಶ್ರಮದ ತರುಲತೆಗಳಿಗೆ ತಿಳಿಸುತ್ತಿದ್ದಾರೆ. ಓ ತಪೋವನವೃಕ್ಷಗಳೇ, ತರುಲತೆಗಳೇ, ನಿಮಗೆ ನೀರು ಉಣಿಸುವ ಮೊದಲು ಯಾರು ಸ್ವತಃ ನೀರು ಕುಡಿಯುತ್ತಿದ್ದಿಲ್ಲವೋ , ಯಾರಿಗೆ ಅಲಂಕಾರ ಮಾಡಿಕೊಳ್ಳುವ ಪ್ರೀತಿಯಿದ್ದರೂ ನಿಮ್ಮ ಮೇಲಿನ ಸ್ನೇಹದಿಂದ ಯಾರು ಚಿಗುರೆಲೆಗಳನ್ನೂ ಕಿತ್ತುಕೊಳ್ಳುತ್ತಿರಲಿಲ್ಲವೋ,ನಿಮಗೆ ಮೊದಲನೆಯ ಸಲ ಹೂ ಬಿಟ್ಟಾಗ ಯಾರಿಗೆ ಹಬ್ಬವೆನಿಸುತ್ತಿತ್ತೋ  ಆ ಶಕುಂತಲೆ ನಿಮ್ಮನ್ನಗಲಿ ಪತಿಯ ಮನೆಗೆ ಹೊರಟಿದ್ದಾಳೆ.ದಯವಿಟ್ಟು ಅವಳಿಗೆ ಅನುಮತಿ ಕೊಡಿ.ಎಷ್ಟು ಸುಂದರ ಕಾವ್ಯ.ಪ್ರಕೃತಿಯ ಆರಾಧನೆ ನಮ್ಮ ಕ್ರಿಯೆಗಳಲ್ಲಿರಬೇಕು  ಹೊರತು ಭಾಷಣ ಬರಹಗಳಲ್ಲಿ ಅಲ್ಲ.ಕಣ್ವರ ಮಾತು ಅದನ್ನೇ ತಿಳಿಸುತ್ತದೆ.ಶಕುಂತಲೆ ಪ್ರತಿ ದಿನವೂ ಗಿಡಗಳಿಗೆ ನೀರುಣಿಸಿಯೇ ತಾನು ನೀರು ಕುಡಿಯುತ್ತಿದ್ದಳು.ಅಷ್ಟು ಮಮತೆ ಅವುಗಳಲ್ಲಿ. ಬಗೆಬಗೆಯ ಚಿಗುರು ಹಾಗೂ ಪುಷ್ಪಗಳನ್ನು ಅಲಂಕರಿಸಿಕೊಳ್ಳುವ ಇಚ್ಛೆ ಇದ್ದರೂ ಗಿಡಗಳು ಎಲ್ಲಿ ದು:ಖಿಸುತ್ತವೆಯೋ ಅವುಗಳ ಸೌಂದರ್ಯ ಎಲ್ಲಿ ಮಾಸಿಹೋಗುವುದೋ ಎಂಬ ಆತಂಕದಿಂದ ಚಿಗುರೆಲೆಗಳನ್ನು ಕೀಳದೇ ಹಾಗೇ ಬಿಟ್ಟು ಸುಖಿಸುತ್ತಿದ್ದಳು ಲಲನೆ.ಇನ್ನು ಸ್ತ್ರೀಯರ ಮಾತೃಭಾವದ ಪ್ರತೀಕ ಮೂರನೆಯ ಕ್ರಿಯೆ.ಗಿಡಗಳು ಅಥವಾ ಮರಗಳು ಹೊಸತಾಗಿ ಹೂ ಹಣ್ಣು ಬಿಟ್ಟಾಗ ಅತ್ಯಂತ ಸಂಭ್ರಮಪಡುತ್ತಿದ್ದ  ನಿಮ್ಮ ಕಷ್ಟ ಸುಖಗಳಿಗೆ ಸ್ಪಂದಿಸುತ್ತಿದ್ದ ಮಗಳು ಹೊರಟು ನಿಂತಿದ್ದಾಳೆ.ಅವಳ ಅಗಲಿಕೆ ನಿಮಗೆ ಬೇಸರ ತರುವುದಾದರೂ ಅಗಲಿಕೆ ಅನಿವಾರ್ಯ. ಬೇಸರಿಸದೇ ನಿಮ್ಮ ಮಗಳನ್ನು ಕಳುಹಿಸಿಕೊಡಿ ಎಂಬ ಮಧುರ ವಿಜ್ಞಾಪನೆ ಕಣ್ವರ ಮಾತಿನಲ್ಲಿದೆ.ಇದು ಶ್ರೇಷ್ಠ ನಾಲ್ಕು ಶ್ಲೋಕಗಳಲ್ಲಿ ಎರಡನೆಯದು. ಶಕುಂತಲೆಗೂ ಆಶ್ರಮದ ತರುಲತೆಗಳಿಗೂ ಬೆಳೆದಿದ್ದ ಸ್ನೇಹ ವಾತ್ಸಲ್ಯವನ್ನು ಹೃದಯಂಗಮವಾಗಿ ವರ್ಣಿಸಿದೆ.ಪುಷ್ಪೋತ್ಪತ್ತಿ ಸಮಯ ಅವಳ ಉತ್ಸವಕಾಲ.ಫಲ ಬಿಡುವ ಕಾಲದ ಹರ್ಷ ಬಣ್ಣಿಸಲಸದಳ.ಸಮಾಸೋಕ್ತ್ಯಲಂಕಾರ.ಪ್ರಕೃತಿಯ ಪ್ರತಿ ನಡೆಗಳನ್ನು ನೋಡಿ ಆನಂದಿಸಿದಾಗ ನಮಗೆ ದು:ಖ ಬರಲು ಸಾಧ್ಯವೇ? ಅವುಗಳಲ್ಲಿ ನಮ್ಮ ಜನರಂತೆ ಮಮಕಾರ ಬೆಳೆಸಿಕೊಂಡಾಗ ಅದು ಭಗವಂತನ ಒಂದು ವಿಧದ ಪೂಜೆಯ ವಿಧವೇ ಆಗುವುದು.ಅವಧೂತನು ಪ್ರಕೃತಿಯ ಒಂದೊಂದು ಅಂಶದಿಂದ ಒಂದೊಂದು ಪಾಠ ಕಲಿತನಂತೆ.ಪೂಜೆಗೆಂದು ಹೂವು ಕೀಳುವ ಮೊದಲು ಗಿಡದ ಅನುಮತಿಯನ್ನು ಕೇಳುತ್ತೆವೆಯೇ ನಾವು.ಅದಕ್ಕೆ ಉಗುರು ತಾಗಿಸದೇ ರೆಂಬೆ ಬಗ್ಗಿಸದೇ ನಿಧಾನವಾಗಿ ಕೆಲವು ಹೂವುಗಳನ್ನು ಅಥವಾ ಚಿಗುರುಗಳನ್ನು ತೆಗೆದರೆ ನಮಗೂ ಗಿಡಕ್ಕೂ ಸಮಾಧಾನವಾದೀತು.ಹಣ್ಣಿರಲಿ ಹೂವಿರಲಿ ಗಿಡ ಅಥವಾ ಮರ ಪೂರ್ಣ ಖಾಲಿ ಮಾಡದೇ ಕೆಲವಷ್ಟನ್ನು ಪಕ್ಷಿ ಕ್ರಿಮಿಕೀಟಗಳಿಗೂ ಉಳಿಸಿದರೆ ಅವೂ ಕೃತಾರ್ಥರಾಗುತ್ತವೆ.ಕೀಳುವುದ ಬಿಟ್ಟು ನೋಡುವುದರಿಂದ ಹೆಚ್ಚು ಆನಂದ ಪಡೆಯೋಣ.ಅದಕ್ಕಾಗಿ ಕೆಲವು ಗಿಡಗಳನ್ನಾದರೂ ಮನೆಸುತ್ತ ಬೆಳೆಸಿ ಪ್ರಕೃತಿಯಲ್ಲಿ ಒಂದಾಗೋಣ.ಸಮಾಸೋಕ್ತ್ಯಲಂಕಾರ._

📜ಸಂಗ್ರಹ ✍ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩