🌹ಶಾಕುಂತಲದ ಸುಂದರ ಸುಮ🌹

_अयं स ते तिष्ठति सङ्गमोत्सुको विशङ्कसे भीरु यतोवधीरणाम् | लभेत वा प्रार्थयिता न वा श्रियं श्रिया दुराप: कथमीप्सितो भवेत् ||_

*ಶಕುಂತಲೆ ರಾಜನ ನೆನೆದು ಬಾಧೆ ಪಡುತ್ತಿರುವಳು.ರಾಜನು ಅವಳನ್ನೇ ಹುಡುಕುತ್ತಾ ಬಂದು ಮರೆಯಲ್ಲಿ ನಿಂತು ತನ್ನ ಪ್ರೇಮ ಅವಳಿಗೆ ಒಪ್ಪಿಗೆಯೋ ಎಂದು ಪರೀಕ್ಷಿಸುತ್ತಿರುವನು. ಸಖಿಯರ ಸಲಹೆಯಂತೆ ಪ್ರೇಮಪತ್ರ ಬರೆಯಲು ಮುಂದಾಗಿ ರಾಜನು ತಿರಸ್ಕರಿಸುವನೇನೋ ಎಂದು ಸಂದೇಹಪಡುವಳು.ಆಗ ರಾಜನಾಡುವ ಮಾತು. ಹೆದರುವ ಸ್ವಭಾವದವಳೇ ,ನೀನು ಯಾರಿಂದ ತಿರಸ್ಕಾರವಾಗಬಹುದೆಂದಯ ಸಂಶಯ ಪಡುತ್ತಿರುವೆಯೋ ಆ ನಾನು ನಿನ್ನ ಸಮಾಗಮಕ್ಕೆ ಕಾತರದಿಂದ ಕಾಯುತ್ತಿರುವೆನು‌. ಇದು ಹೇಗೆಂದರೆ ಲಕ್ಷ್ಮಿಯನ್ನು ಬಯಸುವವನು ಅವಳನ್ನು ಪಡೆಯಬಹುದು.ಅಥವಾ ಪಡೆಯದೆಯೂ ಇರಬಹುದು.ಆದರೆ ಲಕ್ಷ್ಮಿಯಿಂದಲೇ ಅಪೇಕ್ಷಿಸಲ್ಪಟ್ಟವನು  ಹೇಗೆ ಲಕ್ಷ್ಮಿಗೆ ದುರ್ಲಭನಾಗುವನು .ಎಂದಿಗೂ ಸಾಧ್ಯವಿಲ್ಲ. ಕವಿಯ ಸೂಕ್ಷ್ಮವಾದ ಅನುಭವ ಇಲ್ಲಿ ವ್ಯಕ್ತವಾಗಿದೆ.ಪ್ರೇಮಿಯು ಬಯಸಿದ ತರುಣಿ ಅವನ ಕೋರಿಕೆಯನ್ನು ಒಪ್ಪಬಹುದು ಅಥವಾ ತಿರಸ್ಕರಿಸಬಹುದು.ಆದರೆ ಸುಂದರಿಯು ಆರಿಸಿದ ಪುರುಷ ಅವಳಿಗೆ ದುರ್ಲಭನಲ್ಲ. ಸ್ವಾಭಾವಿಕವಾಗಿ ಅಂಗೀಕರಿಸುತ್ತಾನೆ.ಪ್ರಕೃತ ದುಷ್ಯಂತನ ಕೋರಿಕೆ ಲೋಕೈಕಸುಂದರಿ ಶಕುಂತಲೆ ಅಂಗೀಕರಿಸುವಳೋ ,ಬಿಡುವಳೋ ಅವಳಿಷ್ಟ.ಆದರೆ ಅವಳೇ ದುಷ್ಯಂತನನ್ನು ಬಯಸಿದಾಗ ಅವನು ಒಪ್ಪದಿರುತ್ತಾನೆಯೇ  ಅವಳ ಪ್ರೇಮಪತ್ರಕ್ಕೆ ಸುಲಭದಲ್ಲಿ ಒಲಿಯುತ್ತಾನೆ ಎಂಬ ಭಾವ. ಮನೆಗೆ,ಮನಕೆ ಸೇರುವ ಹೆಣ್ಣು ಲಕ್ಷ್ಮಿ ಯ ಸಮಾನ ಎಂಬ ಭಾವ ಕವಿಯದ್ದು. ಹಾಗಾಗಿಯೇ ಸಂಪತ್ತಿನ ದೃಷ್ಟಾಂತ. ಲಕ್ಷ್ಮಿ ನಾವು ಬಯಸಿದಾಗ ಸಿಗುವಳೋ ಇಲ್ಲವೋ ಅವಳೇ ಬಂದಾಗ ಬೇಡವೆನ್ನುತ್ತೇವೆಯೇ! ಸಾಮಾನ್ಯ ಪುರುಷರ ಹಾಗೂ ಸಾಮಾನ್ಯ ಜನರ ಮನೋಗತದ ಚಿತ್ರಣ ಇಲ್ಲಿದೆ.ನಾವೂ ಲಕ್ಷ್ಮಿಯ ಹಿಂದೆ ಬೀಳದೆ ಅವಳೇ ನಮ್ಮನ್ನು ಹಿಂಬಾಲಿಸುವ ಸಾಧನೆ ಮಾಡೋಣ.ವರಮಹಾಲಕ್ಷ್ಮೀ ಎಲ್ಲರಿಗೂ ವರನನ್ನೂ/ವರವನ್ನೂ ,ಮಹತ್ತಾದ ಲಕ್ಷ್ಮಿಯನ್ನೂ/ವಧುವನ್ನೂ  ನೀಡಲಿ ಎಂದು ಆಶಿಸೋಣ.ಅರ್ಥಾಂತರ ನ್ಯಾಸಾಲಂಕಾರ.

📜ಸಂಗ್ರಹ ✍ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩