🌺ಅವಿಮಾರಕದ ಒಂದು ಸುಮ🌺

*प्रपतदशनिना यथा गिरीन्द्रो दवदहनेन यथा वनप्रदेश: | युधि ललितमनायुधेन तेन क्षितिपसुतेन तदा हत: स नीच: ||*

_ಸೌವೀರದೇಶದ ರಾಜನ ಮಗನಾದ ವಿಷ್ಣುಸೇನನು ಅವಿಮಾರಕನಾದ ಕಥೆ ಈ ಶ್ಲೋಕದಲ್ಲಿದೆ. ಹಿಂದೆ ಧೂಮಕೇತು ಎಂಬ ರಾಕ್ಷಸ ಸೌವೀರದೇಶದ ಸಮೀಪ ಬಂದಿದ್ದನು.ಎಲ್ಲೆಡೆ ಕೋಲಾಹಲ ಉಂಟುಮಾಡುತ್ತಾ ಜನರನ್ನು ಕೊಲ್ಲುತ್ತಾ ಲೋಕಸುತ್ತುವ ದೃಷ್ಟಿಯಿಂದ ಇಲ್ಲಿಗೆ ಬಂದಿದ್ದನು.ಇಲ್ಲಿಯ ಜನರ ಬವಣೆಯನ್ನು ಕೇಳಿದ ರಾಜನು ರಾಕ್ಷಸನಿಗೆ ಪ್ರತೀಕಾರ ಮಾಡುವ ಉಪಾಯ ತಿಳಿಯದೆ ಚಿಂತೆಗೀಡಾದನು.ಇದನ್ನೆಲ್ಲ ಅರಿತ ಮಗನಾದ ವಿಷ್ಣುಸೇನನು ಚಿಕ್ಕ ಪ್ರಾಯದವನಾದರೂ ಇನ್ನೂ ಬೆಳೆಯುತ್ತಿರುವ ದಟ್ಟವಾದ ಕೂದಲು ಹೊಂದಿದವನೂ ಸಮಾನ ವಯಸ್ಕರ ತರುಣ ಪಡೆಯೊಂದಿಗೆ ತೆರಳಿ ರಾಕ್ಷಸನನ್ನು ಸಮೀಪಿಸಿದನು.ತಾನಾಗಿಯೇ ಆಹಾರ ಒದಗಿತೆಂದು ಸಂತೋಷ ಪಟ್ಟ ರಾಕ್ಷಸನನ್ನು ಏನು ಮಾಡಿದನೆಂಬ ವರ್ಣನೆ ಈ ಶ್ಲೋಕದಲ್ಲಿದೆ. ಇಂದ್ರನ ವಜ್ರಾಯುಧವು ಹೇಗೆ ಪರ್ವತಗಳನ್ನು ಸಂಹರಿಸಿತೊ ( ರೆಕ್ಕೆ ಕತ್ತರಿಸುವ ಮೂಲಕ ಅಹಂಕಾರ ಕತ್ತರಿಸಿದ್ದು) , ಆಕಸ್ಮಿಕವಾಗಿ ಹುಟ್ಟಿಕೊಂಡ ಕಾಡ್ಗಿಚ್ಚು ಹೇಗೆ ವನವನ್ನೆಲ್ಲ ದಹಿಸಿತೋ,ಅಂತೆಯೇ ಯುದ್ಧವೆಂಬ ಆಟದಲ್ಲಿ ಆ ಬಾಲಕನು ಆಯುಧವಿಲ್ಲದೇ ಭೀಮನು ಅಸುರರನ್ನು ಕುಟ್ಟಿ ಕೊಂದಂತೆ ಆ ನೀಚನಾದ ಧೂಮಕೇತುವಿನ ದೇಹ ಧೂಮವೇ ಕೇತುವಾಗುವಂತೆ ಮಾಡಿದನು‌.( ದೊಡ್ಡ ದೇಹವಾದ್ದರಿಂದ ಸಂಸ್ಕಾರದಲ್ಲಿ ಎದ್ದ ಹೊಗೆ ಆಕಾಶದೆತ್ತರಕ್ಕೆ ವ್ಯಾಪಿಸಿದಾಗ ಉಂಟಾದ ಹೊಗೆ ಧ್ವಜದಂತೆ ಅವನ ಸಾವನ್ನು ಸಾರಿತು.ಕಲ್ಪನೆ ತಪ್ಪಿದ್ದರೆ ಕ್ಷಮಿಸಿ).ಹೀಗೆ ನಿರಾಯಾಸವಾಗಿ ಆಯುಧರಹಿತನಾಗಿ ಮಾರಕ ಕರ್ಮವನ್ನು ಬಾಲನು ಅಥವಾ ಅವಿಯು ಮಾಡಿದ ಕಾರಣ ಅಂದಿನಿಂದ ಅವಿಮಾರಕನೆಂದೇ ಪ್ರಸಿದ್ಧಿ ಹೊಂದಿದನು.ಪ್ರಜೆಗಳ ಕಷ್ಟಗಳಿಗೆ ಸ್ವಯಂ ಸ್ಪಂದಿಸುವ ಆಗಿನ ರಾಜಕುಮಾರರೆಲ್ಲಿ,ಪ್ರಜೆಗಳಿಗೆ ತಂದೆಯ ಅಧಿಕರದ ಮದದಿಂದ ತೊಂದರೆ ಕೊಡುವ ಈಗಿನ ಮಂತ್ರಿಪುತ್ರರೆಲ್ಲಿ!_

📜ಸಂಗ್ರಹ✍ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩