🌹ಶಾಕುಂತಲದ ಒಂದು ಮಕರಂದ 🌹

*स्मर एव तापहेतु: निर्वापयिता स एव मे जात: |दिवस इवाभ्रश्यामस्तपात्यये जीवलोकस्य||*

_ದುಷ್ಯಂತನು ಮರೆಯಲ್ಲಿ ಶಕುಂತಲೆಯನ್ನು ನೋಡುತ್ತಾ ಮಾತುಗಳನ್ನು ಆಲಿಸುತ್ತಿರುವನು. ತನ್ನ ಬಗೆಗೆ ಎಂತಹ ಭಾವನೆ ಅವಳ ಮನದಲ್ಲಿ ಎಂಬ ಕುತೂಹಲ ಅವನಿಗೆ. ನಾಚಿಕೆಯಿಂದ ಶಕುಂತಲೆ ಸಖಿಯರ ಬಳಿ ಮನದ ಭಾವವನ್ನು ವ್ಯಕ್ತಪಡಿಸಿದಾಗ ಅವನಾಡುವ ಮಾತು. ನನ್ನ ಪಾಲಿಗೆ ದು:ಖ ಉಂಟು ಮಾಡಿದವನೂ ಕಾಮನೇ,ದು:ಖ ನಿವಾರಕನೂ ಅವನೇ ಆಗಿದ್ದಾನೆ. ಹೇಗೆಂದರೆ ಬೇಸಿಗೆಯ ಕೊನೆಗೆ ಕಾಣುವ ಕಪ್ಪಾದ ಮೋಡಗಳು ಅತಿ ಹೆಚ್ಚು ತಾಪಕ್ಕೆ ಕಾರಣವಾಗುತ್ತವೆ,ಮಾತ್ರವಲ್ಲದೆ ಮುಂದೆ ಮಳೆ ಸುರಿಸುವುದರ ಮೂಲಕ ಜಗದ ಬೇಗೆಯನ್ನು ಹೋಗಲಾಡಿಸಿ ತಂಪನ್ನೂ ಚೆಲ್ಲುತ್ತವೆ. ಶಕುಂತಲೆಯ ಬಗ್ಗೆ ನನ್ನಲ್ಲಿ ಮೂಡಿದ ಪ್ರೇಮ ನನ್ನ ಈ ಸದಾ ಚಿಂತಿಸುವ ದುರವಸ್ಥೆಗೆ ಕಾರಣವಾಯಿತು. ಆದರೆ ಅವಳ ವಾಣಿಯಿಂದ ನನ್ನ ಮೇಲಿರುವ ಪ್ರೀತಿಯನ್ನು ಕಂಡಾಗ ಅದು ಸಾರ್ಥಕವಾಯಿತೆಂದು ಅನಿಸುವುದು. ಹೀಗೆ ಕಾಮನು ತಾಪವನ್ನು ಶಾಂತಿಯನ್ನು ಮೋಡದಂತೆ ನನ್ನ ಬಾಳಲ್ಲಿ ಉಂಟುಮಾಡಿರುವನು ಎಂಬ ಭಾವ.ಈಗ ಶಕುಂತಲೆಯಲ್ಲಿ ಪ್ರೇಮಭಾವ ಹುಟ್ಟಿಸಿದ್ದು ಅದೇ ಮನ್ಮಥನು ಎಂಬ ಅಭಿಪ್ರಾಯ. ಮೋಡದ ನೆರಳು ವಾತಾವರಣದ ಬಿಸಿಯನ್ನು ಹೆಚ್ಚಿಸುವುದು ಅನುಭವ ಜನ್ಯ.ನಮ್ಮ ಜೀವನದಲ್ಲಿ ಕೆಲವು ಘಟನೆಗಳು ಹೀಗೆ ನಡೆಯುತ್ತವೆ.ದುರ್ಘಟನೆಗಳು ನಮಗೆ ಆ ಕ್ಷಣಕ್ಕೆ ದು:ಖ ಕೊಟ್ಟರೆ ಮುಂದೆ ತಪ್ಪು ಮಾಡದೆ ಜಾಗರೂಕತೆಯನ್ನು ಅಳವಡಿಸುವ ಪಾಠವನ್ನು ಕಲಿಸಿಕೊಡುತ್ತವೆ. ಆಪ್ತರು ಮಾಡುವ ವಂಚನೆ,ನಂಬಿಕೆದ್ರೋಹ,  ಸಾಲ ಕೊಡದಿರುವುದು, ಅತಿಯಾದ ಅಹಂಕಾರಕ್ಕೆ ಶಾಸ್ತಿಯಾಗುವುದು ಇವೆಲ್ಲ ಆ ಕಾಲದಲ್ಲಿ ಸಾಕಷ್ಟು ವ್ಯಥೆಗೆ ಕಾರಣವಾದರೂ ಮುಂದೆ ತಿದ್ದಿಕೊಳ್ಳಲು ಅನುವು ಮಾಡಿಕೊಡುತ್ತವೆ. ಕಾಳಿದಾಸನ ಉಪಮಾಲಂಕಾರ, ನನ್ನ ದೃಷ್ಟಾಂತ ವ್ಯತಿರೇಕ ಅಷ್ಟೇ._

📜ಸಂಗ್ರಹ ✍ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩