🌹ಶಾಕುಂತಲದ ಸುಂದರ ಒಂದು ಶ್ಲೋಕ🌹
*यात्येकतोस्तशिखरं पतिरोषधीनां आविष्कृतोरुणपुर:सर एकतोर्क: | तेजोद्वयस्य युगपद्व्यसनोदयाभ्यां लोको नियम्यत इवात्मदशान्तरेषु ||*
_ಕಣ್ವ ಮಹರ್ಷಿಗಳು ಶಿಷ್ಯನಿಗೆ ವೇಳೆ ತಿಳಿದು ಬರಲು ಕಳುಹಿದ್ದಾರೆ.ಬೆಳಕಿದ್ದಲ್ಲಿಗೆ ಹೋಗಿ ರಾತ್ರಿ ಎಷ್ಟು ಉಳಿದಿದೆ ಎಂದು ಪರೀಕ್ಷಿಸುತ್ತಾ ಶಿಷ್ಯನಾಡುವ ಮಾತು. ಒಂದೆಡೆ ಚಂದ್ರನು ಅಸ್ತಾಚಲದ ಶಿಖರೆಡೆಗೆ ಪಾದ ಬೆಳೆಸಿದ್ದಾನೆ.ತಾನು ತನ್ನ ಕಾರ್ಯ ಮುಗಿಸಿ ಹಿಂತಿರುಗುತ್ತಿರುವನು. ಇನ್ನೊಂದೆಡೆ ಸೂರ್ಯನು ಅರುಣನೆಂಬ ಸಾರಥಿಯನ್ನು ಮುಂದೆ ಇಟ್ಟುಕೊಂಡು ಪ್ರಕಟವಾಗುತ್ತಿದ್ದಾನೆ. ಒಂದೇ ಸಮಯದಲ್ಲಿ ಎರಡು ತೇಜಸ್ಸುಳ್ಳ ವಸ್ತುಗಳ ಪತನ ಮತ್ತು ಉದಯಗಳಿಂದ ಜನರು ತಮ್ಮ ತಮ್ಮ ದಶೆಗಳು ಬದಲಾಗುವ ವಿಷಯದಲ್ಲಿ ಉಪದೇಶಿಸಲ್ಪಡುವಂತಿದೆ. ಗಿಡಮೂಲಿಕೆಗಳ ಬೆಳವಣಿಗೆಯ ಮೇಲೆ ಚಂದ್ರನ ಪ್ರಭಾವ ಹೆಚ್ಚು. ಆದ್ದರಿಂದ ಚಂದ್ರನಿಗೆ ಔಷಧಿಗಳ ಒಡೆಯನೆಂದು ಹೆಸರು.ಸೋಮ ಎಂಬ ಮೂಲಿಕೆಯು ಔಷಧಿಗಳ ರಾಜ.ಹಾಗಾಗಿ ಚಂದ್ರನಿಗೂ ಆ ಹೆಸರು ಇರಬಹುದೇನೋ.ಇಲ್ಲಿ ಅಂತರ ಎಂಬ ಶಬ್ದವು ವಿಶೇಷಾರ್ಥದಾಯಕ.ಜೀವನದಲ್ಲಿ ಏರಿಳಿತಗಳು ಸಹಜ.ವೃದ್ಧಿಯಾದಾಗ ಅತಿಯಾದ ಸಂತೋಷ, ವ್ಯಸನದಲ್ಲಿ ಅತಿಯಾದ ದು:ಖ ಸಲ್ಲದು.ಪ್ರಕೃತಿನಿಯಮವನ್ನು ಸೂರ್ಯ ಚಂದ್ರರೇ ಮೀರಲಾರರು.ಸಾಧಾರಣ ಮಾನವರಾದ ನಾವು ಹೇಗೆ ಮೀರಲು ಸಾಧ್ಯ.ಎರಡು ತೇಜ:ಪುಂಜದ ಏಕಕಾಲಿಕ ವ್ಯಸನೋದಯಗಳು ಮತ್ತು ಲೋಕದ ದಶಾಂತರಗಳ ಬಗ್ಗೆ ಬಿಂಬ ಪ್ರತಿಬಿಂಬ ಭಾವ ಕಂಡುಬಂದಿದೆ. ಸುಖ ದು:ಖಗಳ ಚಕ್ರವೂ ಸೂರ್ಯ ಚಂದ್ರರ ಉದಯಾಸ್ತಗಳಂತೆ ನಮ್ಮ ಜೀವನದಲ್ಲಿ ತಿರುಗಿ ತಿರುಗಿ ಬರುತ್ತಿರುವಾಗ ಇದು ಪ್ರಕೃತಿ ಸಹಜವೆಂದು ಸ್ವೀಕರಿಸುವುದು ಜ್ಞಾನಿಯ ಲಕ್ಷಣ.ಅದಕ್ಕಾಗಿ ಮರುಕಪಡದೇ ಹೆಚ್ಚು ಹಿಗ್ಗದೇ ತುಂಬಾ ಕುಗ್ಗದೇ ಇವರನ್ನು ನೋಡಿ ಪಾಠಕಲಿಯಿರಿ ಎಂದು ಪ್ರಕೃತಿ ನಮಗಾಗಿ ಎರಡು ಏಕಕಾಲಿಕ ಘಟನೆಗಳನ್ನು ತೋರಿಸಿಕೊಟ್ಟಂತಿದೆ.ಕವಿಗೆ ಕಂಡ ದೃಷ್ಟಿ ನಮಗೂ ದಾರಿದೀಪವಾಗಲಿ.ಉತ್ಪ್ರೇಕ್ಷಾ ಮತ್ತು ಸಮಾಸೋಕ್ತಿ ಅಲಂಕಾರಗಳು._
📜ಸಂಗ್ರಹ✍ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ