🌹ಶಾಕುಂತಲದ ಸುಂದರ ಕುಸುಮ🌹

*अन्तर्हिते शशिनि सैव कुमुद्वती मे दृष्टिं न नन्दयति संस्मरणीयशोभा | इष्टप्रवासजनितान्यबलाजनस्य दु:खानि नूनमतिमात्रदु:सहानि ||*

_ಕಣ್ವರ ಶಿಷ್ಯನು ಚಂದ್ರನ ಅಸ್ತವನ್ನು ವರ್ಣಿಸುತ್ತಿದ್ದಾನೆ. ಪ್ರಕೃತ ಶಕುಂತಲೆಯ ಸ್ಥಿತಿಯನ್ನು ತಿಳಿಸಿಕೊಡುವುದು ಕವಿಯ ಜಾಣ್ಮೆ. ಚಂದ್ರನು ಮುಳುಗಿದ ಮೇಲೆ ( ಸಮಯದಲ್ಲಿ ಲೀನನಾದ ಮೇಲೆ) ಈ ಹಿಂದಿನ ಕಾಂತಿಯು ನೆನಪಿನಲ್ಲಿ ಮಾತ್ರ ಇರುವ ನೈದಿಲೆಯ ಬಳ್ಳಿಯು ನನ್ನ ಕಣ್ಣುಗಳನ್ನು ತಣಿಸುತ್ತಿಲ್ಲ.ಚಂದ್ರನ ಉದಯದೊಂದಿಗೆ ತಾನೂ ಅರಳಿನಿಂತು ಶೋಭಿಸುತ್ತಿದ್ದ ಅನೇಕ ಹೂವುಗಳನ್ನು ಹೊತ್ತಿದ್ದ ನಿಸರ್ಗ ರಮಣೀಯವಾದ ನೈದಿಲೆಯ ಬಳ್ಳಿ ಈಗ ಹೂವಿನಿಂದ ಕೂಡಿದ್ದರೂ ಹಿಂದಿನ ಕಾಂತಿ ಉಳಿದಿಲ್ಲ.ಶಕುಂತಲೆ ಸ್ವಭಾವ ಸಹಜ ಸುಂದರಿಯಾದರೂ ಅವಳ ಮೊಗದಲ್ಲಿ ದುಷ್ಯಂತನ ಸಾಂಗತ್ಯದಲ್ಲಿ ಉಂಟಾದ ಮನೋಹರತೆ ಈಗಿಲ್ಲ.ಈಗ ಅವಳ ಮೊಗ ಬಾಡಿಹೋಗುತ್ತಿರುವ ಸುಮ.ಅವಳು ಬಾಡಿಹೋದ ಬಳ್ಳಿ. ಅಬಲೆಯರಿಗೆ ( ಪ್ರಿಯನ ಸಾಹಚರ್ಯವೇ ಬಲವಾಗುಳ್ಳ ಮಾನಿನಿಯರಿಗೆ) ತಮ್ಮ ಪ್ರಿಯಕರನ ವಿರಹದಿಂದ ಉಂಟಾದ ದು:ಖವು ತುಂಬಾ ಅಸಹನೀಯ.ಕುಮುದ್ವತಿಯು ( ನೈದಿಲೆಯ ಬಳ್ಳಿಯು ಚಂದ್ರನಿಲ್ಲದೇ ಹೂವಿದ್ದರೂ ಸೊರಗುತ್ತಿದೆ.) ಚಂದ್ರನೆಂಬ ತನ್ನ ಹೂವನ್ನು ಅರಳಿಸುವ ಪ್ರಿಯಕರನ ವಿರಹ ತಾಳದೇ ಅಳುತ್ತಿರುವಂತಿದೆ.ಸೊರಗುತ್ತಿದೆ ಕೂಡ. ಹೂವು ನಿಧಾನಕ್ಕೆ ಮುದುಡುತ್ತಿದೆ.ಶಕುಂತಲೆಯ ಮೊಗವೆಂಬ ಕುಮುದವು ದುಷ್ಯಂತನ ಅಗಲಿಕೆ ತಾಳಲಾರದೇ ಬಾಡಿಹೋಗುತ್ತಿದೆ.ಇಲ್ಲಿ ಚಂದ್ರ ಮರೆಯಾಗುವುದು ಹಾಗೂ ಇಷ್ಟರಾದವರ ಪ್ರವಾಸ ಇವುಗಳ ಮಧ್ಯೆ ಸಾಮ್ಯವಿದೆ.ಪೂರ್ವಾರ್ಧದ ವಿಶೇಷ ಉತ್ತರಾರ್ಧದ ಸಾಮಾನ್ಯದಿಂದ ಸಮರ್ಥಿಸಲಾಗಿದೆ.ಅರ್ಥಾಂತರ ನ್ಯಾಸಾಲಂಕಾರ. ಚಂದ್ರ ಕುಮುದ್ವತಿಯರ ವರ್ಣನೆಯ ಮೇಲೆ ಪ್ರಿಯನ ಮತ್ತು ಪ್ರಿಯಳ ಪ್ರಣಯ ಆರೋಪಿತ.ಹಾಗಾಗಿ ಸಮಾಸೋಕ್ತಿ ಅಲಂಕಾರ ಕೂಡ.ಕುಮುದ್ವತಿಯಾಗಿದ್ದ  ಶಕುಂತಲೆ ದುಷ್ಯಂತನ ಅಗಲುವಿಕೆಯಿಂದ ನೈಜ ಶೋಭೆ ಕಳೆದುಕೊಂಡಿದ್ದಾಳೆ ಎನ್ನುವುದು ವ್ಯಂಗ್ಯ. ಲೋಕದಲ್ಲಿ ಸಾಮಾನ್ಯ ಸ್ತ್ರೀಯರು ಹಾಗೆಯೇ ಅಲ್ಲವೇ.ತಮ್ಮ ಪತಿಯಂದಿರು ದೂರ ಇದ್ದಷ್ಟು ಅವರ ಚಡಪಡಿಕೆ ಕಾಳಜಿ ಹೆಚ್ಚಾಗುತ್ತದೆ,ಚಿಂತೆ ಸಂತತ ಕಾಡುತ್ತದೆ.ಪುರುಷರಿಗೆ ಅಷ್ಟು ತಟ್ಟುವುದಿಲ್ಲ ಪ್ರಿಯಳ ವಿರಹದ ಬಿಸಿ._

📜ಸಂಗ್ರಹ ✍ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩