ರಾಮಾಯಣ ೧೭೭
📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೭೭🏝📖
*ನ ಭೂಮ್ಯಾ ಕಾರ್ಯಮಸ್ಮಾಕಂ ನ ಹಿ ಶಕ್ತಾಃ ಸ್ಮ ಪಾಲನೇ | ರತಾಃ ಸ್ವಾಧ್ಯಾಯಕರಣೇ ವಯಂ ನಿತ್ಯಂ ಹಿ ಭೂಮಿಪ||*
*ನಿಷಯಂ ಕಿಂಚಿದೇವೇಹ ಪ್ರಯಚ್ಛತು ಭವಾನಿತಿ | ಮಣಿರತ್ನಂ ಸುವರ್ಣಂ ವಾ ಗಾವೋ ಯದ್ವಾ ಸಮುದ್ಯತಮ್||*
_ಅಶ್ವಮೇಧದ ದಕ್ಷಿಣೆಯೆಂದು ದಶರಥನು ಪೂರ್ವದಿಕ್ಕಿನ ರಾಜ್ಯಗಳನ್ನು ಹೋತೃವಿಗೆ, ಪಶ್ಚಿಮದ ರಾಜ್ಯಗಳನ್ನು ಅಧ್ವರ್ಯುವಿಗೆ, ಉತ್ತರದಿಕ್ಕಿನ ರಾಜ್ಯಗಳನ್ನು ಉದ್ಗಾತೃವಿಗೆ, ಬ್ರಹ್ಮನಿಗೆ ದಕ್ಷಿಣದಿಕ್ಕಿನ ರಾಜ್ಯಗಳನ್ನು ದಾನವಾಗಿ ಕೊಟ್ಟಾಗ ಅವರಾಡಿದ ಮಾತು. ರಾಜನೇ, ಈ ಭೂಮಿಯನ್ನಾಳಲು ನೀನೇ ಸಮರ್ಥನು. ನಮಗೆ ಇದರಿಂದ ಯಾವ ಪ್ರಯೋಜನವೂ ಇಲ್ಲ. ನಾವು ಯಾವಾಗಲೂ ಅಧ್ಯಯನ-ಅಧ್ಯಾಪನಗಳಲ್ಲಿ ನಿರತರಾಗಿರುವೆವು. ಕೊಡುವುದೇ ನಿನ್ನ ನಿಶ್ಚಯವಾಗಿದ್ದರೆ ಅದರ ಬದಲಿಗೆ ಮಣಿ-ರತ್ನ-ಸುವರ್ಣ-ಗೋವು ಇವುಗಳಲ್ಲಿ ಯಾವುದಾದರೂ ಕೊಡು. ಗೋವುಗಳಿಗೆ ಆ ಕಾಲದಲ್ಲಿ ಇದ್ದ ಪ್ರಾಶಸ್ತ್ಯವನ್ನು ನಾವಿಲ್ಲಿ ಕಾಣಬಹುದು. ಸುವರ್ಣ ಅಥವಾ ರತ್ನಗಳಷ್ಟೇ ಮೌಲ್ಯವನ್ನು ಕೊಡುತ್ತಿದ್ದುದು ಕಾಣುವುದು. ಭೂಮಿಗಾಗಿ ಕಾದಾಡಿದ ಲಕ್ಷಾಂತರ ಜನರ ನಡುವೆಯೂ ಋಷಿಗಳು ಅಥವಾ ಯಾಜ್ಞಿಕರು ಎದ್ದು ಕಾಣುವುದು ಇದೇ ಕಾರಣದಿಂದ. ರಾಜನೇ ಸ್ವತಃ ದಾನ ಮಾಡುತ್ತಿದ್ದರೂ ತಾವು ಸ್ವೀಕರಿಸದೇ ಉಳಿಯುವುದು ಅಥವಾ ಭೂಮಿಯ ಮೇಲಿನ ಆಸೆಯನ್ನು ಬಿಡುವುದು ಮಹಾತ್ಯಾಗ. ಒಂದೊಂದು ರಾಜ್ಯಗಳು ಅಪಾರ ಸಂಪತ್ತಿನಿಂದ ತುಳುಕುವ ಕಾಲದಲ್ಲಿ ಅವುಗಳನ್ನು ತೃಣಸಮಾನವಾಗಿ ಕಾಣುವ ವೈರಾಗ್ಯನಿಧಿಗಳು ಇವರು. ಹಾಗಾಗಿಯೇ ಋಷಿಗಳ ಸ್ಥಾನ ಸನಾತನ ಸಂಸ್ಕೃತಿಯಲ್ಲಿ ಮಹತ್ತರವಾದದ್ದು. ನಿರಂತರ ಓದು, ಓದಿನಿಂದ ಬಂದ ವಿದ್ಯೆಯನ್ನು ಇನ್ನೊಬ್ಬರಿಗೆ ಕಲಿಸು ಇವೆರಡೇ ಅವರ ಧ್ಯೇಯ. ಈ ಯಜ್ಞ, ಇಲ್ಲಿ ಸಿಗುವ ದಕ್ಷಿಣೆ, ಸನ್ಮಾನ ಇವುಗಳೂ ಅದರೆದುರು ಗೌಣ. ಹಾಗಾಗಿಯೇ ಭೂಮಿಯ ಮೇಲೆ ಆಸೆ ಹುಟ್ಟಲಿಲ್ಲ. ಗೋವು ಸುವರ್ಣ ಮೊದಲಾದವು ಏಕೆಂದರೆ ಅತಿಥಿ ಸತ್ಕಾರ ಮೊದಲಾದವನ್ನು ಕೈಗೊಳ್ಳಲು ಹಾಗೂ ಕುಲಪತಿಯಾಗಿ ಹತ್ತು ಸಾವಿರ ಮಿಕ್ಕಿದ ಶಿಷ್ಯರನ್ನು ಸಲಹಲು ಅವಶ್ಯವಾದವುಗಳು. ದಶರಥನು ಅವರ ಅಭಿಲಾಷೆಯಂತೆ ಹತ್ತು ಲಕ್ಷ ಗೋವುಗಳನ್ನೂ-ಹತ್ತು ಕೋಟಿ ಸುವರ್ಣನಾಣ್ಯಗಳನ್ನೂ-ನಲ್ವತ್ತು ಕೋಟಿ ರಜತನಾಣ್ಯಗಳನ್ನೂ ದಾನ ನೀಡಿದನು. ದಶರಥನ ಉದಾರತೆಯನ್ನೂ ಇಲ್ಲಿ ಗಮನಿಸಬಹುದು. ಕೇವಲ ತನ್ನ ಪ್ರತಿಷ್ಠೆಗೆ ಮಾಡಿದ ಯಜ್ಞವಲ್ಲ. ಯಜ ಧಾತುವಿನ ನಿಜಾರ್ಥವಾದ ದಾನ ಎಂಬುದನ್ನು ಅಕ್ಷರಶಃ ನಿಜ ಮಾಡಿದನು. ತನ್ನದೆಂಬುದನ್ನು ಏನೊಂದು ಇಟ್ಟುಕೊಳ್ಳದಂತೆ ದಾನ ಮಾಡುವ ಬುದ್ಧಿ ಅಂತಹ ಮಹಾತ್ಮರಿಗೆ ಮಾತ್ರ ಬಂದೀತು. ಅತುಲ ಪರಾಕ್ರಮದಿಂದ ಸಂಪಾದಿಸಿದ ಭೂಮಿಯನ್ನು ಕೊಡಲು ಯಾವ ರಾಜ ಸುಲಭವಾಗಿ ಮನಸ್ಸು ಮಾಡಿಯಾನು! ಅಂತಹ ಉದಾರಚರಿತನೇ ದಶರಥನು.ಇಲ್ಲಿ ದಾನಿಯೂ ಪ್ರತಿಗ್ರಹಿಯು ಈರ್ವರೂ ಅತ್ಯಂತ ಎತ್ತರದ ಸ್ಥಾನದಲ್ಲಿದ್ದಾರೆ. ಈಗಿನ ಕಾಲದಲ್ಲಿ ಅಂತಹ ದಾನವನ್ನೂ ನಿರಾಕರಣೆಯನ್ನೂ ಕಲ್ಪಿಸುವುದೇ ಕಷ್ಟ._
*ಋತ್ವಿಜಸ್ತು ತತಃ ಸರ್ವೇ ಪ್ರದದುಃ ಸಹಿತಾ ವಸು | ಋಷ್ಯಶೃಂಗಾಯ ಮುನಯೇ ವಸಿಷ್ಠಾಯ ಧೀಮತೇ||*
_ಯಜ್ಞದಲ್ಲಿ ಪಾಲ್ಗೊಂಡ ಋತ್ವಿಜರೆಲ್ಲರೂ ಅಪಾರವಾದ ಆ ಸಂಪತ್ತನ್ನು ವಸಿಷ್ಠ ಹಾಗೂ ಋಷ್ಯಶೃಂಗನಿಗೆ ನೀಡಿ ನೀವೇ ಎಲ್ಲರಿಗೂ ಹಂಚಿಬಿಡಿ ಎಂದರು. ನೂರು ರುಪಾಯಿ ಲಾಭ ಬರುವಲ್ಲಿ ನೂರು ಮಾತುಗಳು ಹತ್ತಾರು ಜಗಳಗಳು ಕಾಣುವ ಈಗಿನ ಜಗದಲ್ಲಿ ಕೋಟಿ ಕೋಟಿ ಸಂಪತ್ತನ್ನು ಕಂಡೂ ಅದರೆಡೆಗೆ ಧಾವಿಸದೇ ಯೋಗ್ಯರ ಕೈಯಿಂದ ಪಡೆಯುವ ಸಹನೆ ಅಥವಾ ತಾಳ್ಮೆ ಅಪರೂಪದ ದೃಶ್ಯ. ಇವರು ಖಂಡಿತ ನಮ್ಮ ಪಾಲಿನದ್ದನ್ನು ಕೊಡುವರೆಂಬ ವಿಶ್ವಾಸ. ಪರಸ್ಪರ ತಂದೆ-ಮಕ್ಕಳ, ಪತಿ-ಪತ್ನಿಯರ ನಡುವೆ ಇಲ್ಲದ ವಿಶ್ವಾಸ ಇಲ್ಲಿ ಇಬ್ಬರು ಲೋಕೋನ್ನತ ಚರಿತರ ಮೇಲೆ ಇಡೀ ಋತ್ವಿಜರ ಗಣಕ್ಕಿದೆ. ಅವರೀರ್ವರೂ ಯಜ್ಞದಲ್ಲಿ ಮಾಡಿದ ಕಾರ್ಯಕ್ಕನುಗುಣವಾಗಿ ಎಲ್ಲರಿಗೂ ಸಂಪತ್ತನ್ನು ಹಂಚಿ ತೃಪ್ತಿಪಡಿಸಿದರು. ನಾವಾದರೆ ಹೆಚ್ಚು ಇಟ್ಟುಕೊಂಡು ಉಳಿದವರಿಗೆ ಸಾಧ್ಯವಾದಷ್ಟು ಹಂಚುವೆವು. ಆದರಿಲ್ಲಿ ಈರ್ವರೂ ತಮಗೆ ಕಡಿಮೆ ಇಟ್ಟುಕೊಂಡು ಎಲ್ಲರಿಗೂ ಯಥೇಚ್ಛವಾಗಿ ಪ್ರತಿಗ್ರಹೀತವಾದ ಸಂಪತ್ತನ್ನು ಹಂಚಿದರು. ಹೃದಯ ವೈಶಾಲ್ಯತೆಗೆ ಇದೊಂದು ಅದ್ಭುತ ನಿದರ್ಶನ._
ಸಂಗ್ರಹ: ಶ್ರೀನಿಧಿ ಅಭ್ಯಂಕರ್.
ಎಲ್ಲಾ ಲೇಖನಗಳಿಗೆ ಒಮ್ಮೆ ತೆರೆದು ನೋಡಿ. ತಪ್ಪುಗಳಿದ್ದಲ್ಲಿ ತಿದ್ದಿ ಮುನ್ನಡೆಸಿ.
http://shreenidhiabhyankar.blogspot.com
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ