ಪದಶಕ್ತಿ ೪೪

🏹*ಪದಶಕ್ತಿ* ---೪೪🌄

*ಪವನ*

_ಪುನಾತಿ ಇತಿ ಪವನಃ ಎಂಬಂತೆ ಪವಿತ್ರಗೊಳಿಸುವುದು ಎಂಬ ಅರ್ಥದಲ್ಲಿ ಈ ಶಬ್ದ ಪ್ರಯೋಗ ಇದೆ. ಪೂಙ್ ಧಾತುವಿಗೆ ಲ್ಯುಟ್ ಪ್ರತ್ಯಯ ಶುದ್ಧೀಕರಿಸು ಎಂಬ ಅರ್ಥದಲ್ಲಿ ಬಂದು ಈ ಪದ ಸಿದ್ಧವಾಗುತ್ತದೆ._

_ಪವನ ಶಬ್ದಕ್ಕೆ ಪ್ರಸಿದ್ಧ ಅರ್ಥ ಗಾಳಿ. ಅನೇಕ ವಸ್ತುಗಳಿಗೆ ಗಾಳಿ ಹಾಯಿಸಿದಾಗ ಅವುಗಳು ಶುದ್ಧವಾಗುತ್ತವೆ. ನಮ್ಮ ದೇಹದೊಳಗೆ ಆಗಾಗ ಪ್ರಣಾಯಾಮದ ಮೂಲಕ ಗಾಳಿಯನ್ನು ವ್ಯವಸ್ಥಿತವಾಗಿ ಜೋಡಿಸಿದಾಗ ದೇಹವು ಶುದ್ಧವಾಗುವುದು. ಪಾಪದ ಪ್ರಾಯಶ್ಚಿತ್ತ ರೂಪವಾಗಿ ಪ್ರಾಣಾಯಾಮದ ವಿಧಾನವೂ ಇದೇ ಅರ್ಥದಲ್ಲಿ ವಿಹಿತವಾಗಿದೆ. ಹತ್ತು ಅಥವಾ ನೂರು ಅಥವಾ ಸಾವಿರ ಪ್ರಾಣಾಯಾಮ ಮಾಡಿದಾಗ ತನು-ಮನಗಳೆರಡರ ಶುದ್ಧಿ ಸಹಜವಾಗಿ ಆಗುತ್ತದೆ. ಒಗೆಯಲು ಅಸಾಧ್ಯವಾದ ಬಟ್ಟೆಗಳನ್ನು ಗಾಳಿಗೆ ಹರವಿದಾಗ  ಅದೇ ಅದನ್ನು ಶುದ್ಧಮಾಡುತ್ತದೆ.ಹಾಗಾಗಿ ವಾಯು ಪ್ರಧಾನ ಶುದ್ಧಿಕಾರಕ._

_ಎರಡನೆಯದಾಗಿ ಅಕ್ಕಿ ಅಥವಾ ಧಾನ್ಯಗಳನ್ನು ಬೀಸಲು ಉಪಯೋಗಿಸುವ ಮೊರ ಅಥವಾ ತಡ್ಪೆಯೂ ಪವನ. ಅದರ ಕೆಲಸವೂ ಧಾನ್ಯಗಳಲ್ಲಿನ ಧೂಳು-ಕಸ-ಕಡ್ಡಿ-ಕಲ್ಲು-ಹುಳುಗಳ ನಿವಾರಣೆ. ಹಾಗಾಗಿ ಲೋಹದ-ಬಳ್ಳಿಯ-ಪ್ಲಾಸ್ಟಿಕ್ ಮೊದಲಾದ ವಸ್ತುಗಳಿಂದ ತಯಾರಾದ ಬಗೆಬಗೆ ಗಾತ್ರದ ಮೊರದ ಕೆಲಸ ಒಂದೇ ಅದು ಶುದ್ಧೀಕರಿಸುವುದು. ಬಾಗಿನ ಕೊಡುವಾಗಲೂ ಬಹುಶಃ ಮುಂದೆ ಮನೆಯ ವಸ್ತುಗಳ ಸ್ವಚ್ಛತೆಗೆ ಉಪಯೋಗಕ್ಕೆ ಬಂದೀತು ಎನ್ನುವ ದೃಷ್ಟಿಯಿಂದಲೂ ಅದನ್ನೇ ಕೆಲವೆಡೆ ಕೊಡುತ್ತಾರೆ. (ಬೇರೆ ಕಾರಣವೂ ಇದೆ.)_

_ಮತ್ತೊಂದು ಅರ್ಥ ಕುಂಬಾರನ ಒಲೆ. ಮಡಿಕೆ ಮಾಡಿದ ನಂತರ ಅವುಗಳು ಒಣಗಿ ಹೊರಭಾಗವನ್ನು ಸುಟ್ಟಾಗ ಸಣ್ಣ ರಂಧ್ರಗಳು ಮುಚ್ಚಿ ನೀರು ಸೋರದಂತೆ ತಡೆಯುತ್ತವೆ. ಈ ಮಡಿಕೆಯ ಹೊರಮೈಯ ಶುದ್ಧೀಕರಣ ಅಥವಾ ನಿರ್ಜಲೀಕರಣ ಮಾಡುವುದು ಕುಂಬಾರನ ಒಲೆ. ಒಲೆ ಮೇಲೆ ಕೆಲಕಾಲ ಅದನ್ನು ಇಟ್ಟು ಬೆಂಕಿಯಲ್ಲಿ ಕಾಯಿಸಿದಾಗ ಅದು ಬಳಕೆಗೆ ಸಿದ್ಧವಾಗುತ್ತದೆ. ಹಾಗಾಗಿ ಕುಂಬಾರನ ಒಲೆಯೂ ಪವನ._

_ಇನ್ನೊಂದರ್ಥ ನೀರು. ಲೋಕದಲ್ಲಿ ಏನನ್ನು ಶುದ್ಧ ಮಾಡಬೇಕಾದರೂ ನೀರು ಮುಖ್ಯ ಸಾಧನ. ಜಡ-ಜೀವ ವಸ್ತುಗಳೆಲ್ಲವೂ ನೀರಿನ ಸಂಪರ್ಕದಿಂದ ಶುದ್ಧವಾಗುವವು.ಹಾಗಾಗಿ ನೀರೂ ಪವನ._

_ಐದನೆಯದಾಗಿ ವಿಷ್ಣು ಪವನ. ಎಲ್ಲಾ ಕರ್ಮದ ಅಂತ್ಯದಲ್ಲಿ ನಾಮೋಚ್ಚಾರಣೆಯಿಂದಲೇ ನಾವು ಪವಿತ್ರರಾಗುವೆವು. ನಮ್ಮ ಪಾಪಗಳನ್ನು ಕಳೆದು ಪುನೀತನನ್ನಾಗಿಸುವುದು ಆ ಪರಮಾತ್ಮನ ನಾಮ._

_ವೈದಿಕ ಕರ್ಮಗಳಲ್ಲಿ ಧಾರಣೆಯಿಂದ ಪುನೀತವಾಗಿಸುವುದು ದರ್ಭಾದಿಗಳ ಪವಿತ್ರ. ನಾಲ್ಕು ಅಥವಾ ಎರಡು ಅಥವಾ ಮೂರರ ಪವಿತ್ರ. ತಾಮ್ರ-ರಜತ-ಸುವರ್ಣಾದಿಗಳ ಪವಿತ್ರ. ಇವೆಲ್ಲವೂ ಕರ್ಮ ಆಚರಿಸಲು  ಶುದ್ಧಿ ತಂದುಕೊಡುವ ಕಾರಣ ಪವನ._
 
_ಒಟ್ಟಾರೆಯಾಗಿ ಪುನೀತರನ್ನಾಗಿಸುವ ಸಾಧನಗಳೆಲ್ಲವೂ ಪವನ._

_ಕನ್ನಡ ಸಾಹಿತ್ಯದ ಕೀರ್ತನೆಗಳಲ್ಲಿ ಈ ಪದ ಸಾಕಷ್ಟು ಬಾರಿ ಬಳಕೆಯಾಗಿದೆ. ರಾಮಸ್ವಾಮಿ ಅಯ್ಯಂಗಾರ್ ರ ರಾಮ ಕೀರ್ತನೆಯಲ್ಲಿ ಇಲ್ಲಿ ನಾವು ಗಮನಿಸಬಹುದು.
*ಘೋರಾಘಸಂಹಾರ ರಣರಂಗ ಭೀಮ
ಶ್ರೀರಾಮ ಜಯರಾಮ ಕಲ್ಯಾಣರಾಮಪವನಾತ್ಮಜಾನಂದದಾತಾಪರೇಶ
ಭವನಾಶ ಜಗತೀಶ ದೈತೇಯನಾಶಸುವಿಲಾಸ ಮಾಂಪಾಹಿ ಶ್ರೀಮಾಂಗಿರೀಶಾ*

ಗುರುಗೋವಿಂದವಿಠಲರ ಈ ಕೀರ್ತನೆಯಲ್ಲೂ ವಾಯು ಎಂಬ ಅರ್ಥದಲ್ಲಿ ಈ ಪದವಿದೆ.
*ಪವನರಾಯನ ಕಾಣೆ ನಾನು
ತನುವು ಮನವು ಧನದ ಆಶೆಯೂ | ಪೋಗಲಿಲ್ಲಘನ*

ಸಂಸ್ಕೃತದಲ್ಲಿ ಗೀತೆಯಲ್ಲೇ ಭಗವಂತನ ಮಾತು- *ಪವನಃ ಪವತಾಮಸ್ಮಿ*
ಏಳು ವಿಧದ ವಾಯುವಿನ ಭೇದಗಳಲ್ಲಿ ಪ್ರಬಲನಾದ ಪವನ ಹೆಸರಿನ ವಾಯು ನಾನೇ ಎಂದು.

_ನಮ್ಮ ತನು-ಮನಗಳನ್ನು ಆ ಪವನನು ಸದಾ ಶುದ್ಧಗೊಳಿಸಲಿ ಎಂದು ಪ್ರಾರ್ಥಿಸೋಣ._

ತಪ್ಪುಗಳಿದ್ದರೆ ತಿದ್ದಿ.

ಎಲ್ಲಾ ಲೇಖನಗಳಿಗೆ ಒಮ್ಮೆ ಇಣುಕಿ ಈ ಕೆಳಗಿನ ಕೊಂಡಿಗೆ

ಸಂಗ್ರಹ: ಶ್ರೀನಿಧಿ ಅಭ್ಯಂಕರ್.

http://shreenidhiabhyankar.blogspot.com.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩