ರಾಮಾಯಣ ೧೭೬
📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೭೬🏝📖
*ಕೌಸಲ್ಯಾ ತಂ ಹಯಂ ತತ್ರ ಪರಿಚರ್ಯ ಸಮಂತತಃ |ಕೃಪಾಣೈರ್ವಿಶಶಾಸೈನಂ*
*ತ್ರಿಭಿಃ ಪರಮಯಾ ಮುದಾ||ಪತತ್ರಿಣಾ ತದಾ ಸಾರ್ಧಂ ಸುಸ್ಥಿತೇನ ಚ ಚೇತಸಾ *ಅವಸದ್ರಜನೀಮೇಕಾಂ ಕೌಸಲ್ಯಾ ಧರ್ಮಕಾಮ್ಯಯಾ||*
_ಅಶ್ವಮೇಧ ಎಂದರೆ ಬರೀ ಕುದುರೆಯನ್ನಷ್ಟೇ ಬಲಿ ಕೊಡುವುದಲ್ಲ. ಐನೂರ ಹತ್ತೊಂಬತ್ತು ಬೇರೆ ಬೇರೆ ಪ್ರಾಣಿಗಳನ್ನು ಬಲಿ ಕೊಡುವ ಮಹಾಯಜ್ಞ. ಇಲ್ಲಿ ಪತ್ನಿಯ ಪಾತ್ರ ಎಂತಹದ್ದು ಎನ್ನುವುದಕ್ಕೆ ಈ ಶ್ಲೋಕ ಉತ್ತರ. ಪಟ್ಟಮಹಿಷಿಯಾದ ಕೌಸಲ್ಯೆಯು ಮೇಧಕ್ಕೆ ಸಿದ್ಧವಾದ ಯಜ್ಞವನ್ನು ಶಾಸ್ತ್ರೀಯ ರೀತಿಯಲ್ಲಿ ಪೂಜಿಸಿ-ನಮಸ್ಕರಿಸಿ ಅನಂತರ ಕೃಪಾಣದಿಂದ ಅದರ ಛೇದನಮಾರ್ಗವನ್ನು ಗುರುತು ಮಾಡಿ ಅನಂತರ ಧರ್ಮಕಾಮನೆಯಿಂದ, ಸ್ಥಿರಬುದ್ಧಿಯಿಂದ ಕೂಡಿ ಒಂದು ರಾತ್ರಿ ಬಳಿಯಲ್ಲೇ ಕಳೆದಳು. ಅಶ್ವವೆಂದರೆ ಪರಮಾತ್ಮನ ಒಂದು ರೂಪ ಎಂಬ ಭಾವನೆಯಲ್ಲಿ ಜಾಗರಣೆ ಮಾಡುತ್ತಾ ಭಗವಚ್ಚಿಂತನೆಯಲ್ಲಿ ತೊಡಗುವುದು. ಅನೇಕರು ದಶರಥನ ಪಟ್ಟಮಹಿಷಿ ಕೈಕೇಯಿಯಾಗಿದ್ದಳು, ಕೌಸಲ್ಯೆಯ ಮೇಲೆ ದಶರಥನಿಗೆ ಏನೂ ಪ್ರೀತಿ ಇರಲಿಲ್ಲ ಇತ್ಯಾದಿ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಆದರಿಲ್ಲಿ ವಾಲ್ಮೀಕಿಗಳು ಸ್ಪಷ್ಟವಾಗಿ ಕೌಸಲ್ಯೆಯನ್ನು ಉಲ್ಲೇಖಿಸಿದ್ದಾರೆ. ಮೂವರಲ್ಲಿ ಕೌಸಲ್ಯೆಯು ಪಟ್ಟದರಾಣಿಯಾಗಿದ್ದಳು. ಕೇವಲ ಕಾಮವು ಪಾಪಜನಕ. ಧರ್ಮಸಹಿತ ಕಾಮವು ಮಾತ್ರವೇ ಪುಣ್ಯಪ್ರದ. ಹಾಗಾಗಿ ಧರ್ಮಕಾಮನೆಯಿಂದ ಎಂಬ ಮಾತು ಬಹಳ ಸಾಧುವಾದುದು. ಧರ್ಮಕ್ಕೆ ಸಮ್ಮತಿ ಇಲ್ಲದ ಕಾಮವು ದೈಹಿಕ ತೃಪ್ತಿಯನ್ನು ಕೊಡಬಹುದೇ ಹೊರತು ಮಾನಸಿಕವಾಗಿ ಮುಂದೊಮ್ಮೆ ಕೊರಗುವಂತೆ ಹಾಗೂ ಪಾಪದ ಫಲ ಅನುಭವಿಸುವಂತೆ ಮಾಡಬಹುದು. ಯಜ್ಞಶಾಲೆಯಲ್ಲಿ ದರ್ಭಾಸನದ ಮೇಲೆ ಮಲಗಿ ಕಾಲಕಳೆಯುವುದು ರಾಣಿಯರ ಪಾಲಿಗೆ ಸವಾಲು. ಹಾಗಾಗಿಯೇ ಸ್ಥಿರಮನಸ್ಸಿನಿಂದ ಎಂದದ್ದು. ಸುಖವನ್ನು ತ್ಯಜಿಸಿ ಯಜ್ಞದಲ್ಲಿ ಭಾಗಿಯಾಗುವ ಏಕೈಕ ಉದ್ದೇಶಕ್ಕೆ ಮನಸ್ಸನ್ನು ಅಣಿಯಾಗಿಸಿ ನೆಲದ ಮೇಲೆ ಪವಡಿಸುವುದು. ಸಾಮಾನ್ಯರಾದ ನಮಗೇ ಕೆಲವೊಂದು ಸ್ಥಳದಲ್ಲಿ ಮಲಗುವುದು ಕಿರಿಕಿರಿ ತರುತ್ತದೆ. ಹಂಸತೂಲಿಕಾತಲ್ಪದಲ್ಲಿ ನಿತ್ಯವೂ ಸಖಿಯರ ಸೇವೆಯಲ್ಲಿ ಸುಖವಾಗಿ ಪವಡಿಸುವ ರಾಣಿಗೆ ಈ ವಿಧಿ ಸ್ವಲ್ಪ ಕಷ್ಟದ್ದೇ ಆಗಿದೆ._
*ಹೋತಾಧ್ವರ್ಯುಸ್ತಥೋದ್ಗಾತಾ ಹಸ್ತೇನ ಸಮಯೋಜಯನ್ |ಮಹಿಷ್ಯಾ ಪರಿವೃತ್ಯಾ ಚ ವಾವಾತಾಂ ಚ ತಥಾಪರಾಮ್ ||*
_ಈ ಯಜ್ಞದಲ್ಲಿ ರಾಜನು ತನ್ನ ರಾಣಿಯರನ್ನು ದಾನ ಮಾಡುವ ಪದ್ಧತಿ ಇದೆ. ಯಜ್ಞ ಎನ್ನುವ ಶಬ್ದಕ್ಕೆ ಒಂದು ಅರ್ಥ ತನ್ನಲ್ಲಿರುವುದನ್ನು ಕೊಡುವುದು. ವಿಶ್ವಜಿತ್ ಎಂಬ ಯಜ್ಞದಲ್ಲಂತೂ ತನ್ನನ್ನು ಬೇಕಾದರೂ ದಾನ ಮಾಡಿಬಿಡಬಹುದು. ಬ್ರಹ್ಮನಿಗೆ ಪಟ್ಟದರಾಣಿಯನ್ನು, ಹೋತೃವಿಗೆ ವಾವಾತೆಯನ್ನೂ, ಪರಿವೃತ್ತಿಯನ್ನು ಉದ್ಗಾತೃವಿಗೂ, ಅಧ್ವರ್ಯುವಿಗೆ ಪಾರಾವೃತ್ತಿಯನ್ನೂ ದಾನ ಮಾಡಬೇಕು. ತೆಗೆದುಕೊಳ್ಳುವವರಾರೂ ಅವರನ್ನು ಕಟ್ಟಿಕೊಳ್ಳುತ್ತಿರಲಿಲ್ಲ. ಅವರ ಸಮನಾದ ದ್ರವ್ಯವನ್ನು ತೆಗೆದುಕೊಂಡು ಅನುಗ್ರಹಿಸುತ್ತಿದ್ದರು. ಮುಂದೆ ನಾಲ್ಕು ದಿಕ್ಕಿನ ರಾಜ್ಯಗಳನ್ನು ಯಜ್ಞ ದಕ್ಷಿಣೆಯೆಂದು ದಶರಥನು ನೀಡಿದಾಗ ಋಷಿಗಳು ಅವನಿಗೇ ಹಿಂದಿರುಗಿಸಿ ದ್ರವ್ಯವನ್ನು ದಾನ ಪಡೆದು ಇವೆಲ್ಲವೂ ನಮಗೇಕೆ ನಿನಗೇ ಇರಲಿ ಎಂದಾಡುವ ಅನುಗ್ರಹದ ಮಾತು ಇದೇ ಕಾಂಡದಲ್ಲಿ ಬರುತ್ತದೆ. ಇಲ್ಲಿ ದಾನ ಮಾಡುವ ಉದಾರ ಬುದ್ಧಿ ಇರುವುದು ಮುಖ್ಯ. ಕ್ಷತ್ರಿಯನು ಇನ್ನೊಬ್ಬರ ರಕ್ಷಣೆಗೆ ತನ್ನ ಪ್ರಾಣವನ್ನಾದರೂ ಕೊಡುವ ಬಾಧ್ಯತೆ ಹೊಂದಿರುತ್ತಾನೆ. ಪ್ರಾಣವನ್ನೇ ಕೊಡಲು ಹಿಂಜರಿಯದವನು ಹೆಂಡತಿ-ಮಕ್ಕಳು-ರಾಜ್ಯ ಏನು ಬೇಕಾದರೂ ತೊರೆಯಲು ಸದಾ ಸಿದ್ಧನಿರಬೇಕು. ಲೋಕಕ್ಷೇಮದ ದೃಷ್ಟಿಯೊಂದೇ ಅವನಲ್ಲಿ ಸದಾ ಸನ್ನಿಹಿತವಾಗಿರಬೇಕು ಎನ್ನುವುದೇ ಈ ವಿಧಿಯ ಆಶಯ._
ಸಂಗ್ರಹ: ಶ್ರೀನಿಧಿ ಅಭ್ಯಂಕರ್.
ಎಲ್ಲಾ ಲೇಖನಗಳಿಗೆ ಒಮ್ಮೆ ತೆರೆದು ನೋಡಿ. ತಪ್ಪುಗಳಿದ್ದಲ್ಲಿ ತಿದ್ದಿ ಮುನ್ನಡೆಸಿ.
http://shreenidhiabhyankar.blogspot.com
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ