ರಾಮಾಯಣ ೧೭೯

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೭೯🏝📖 

*ನಾಕೀರ್ತಯದವಜ್ಞಾನಾತ್ತದ್ರಕ್ಷೋ ಮಾನುಷಾಂಸ್ತದಾ| ತಸ್ಮಾತ್ಸ ಮಾನುಷಾದ್ವಧ್ಯೋ ಮೃತ್ಯುರ್ನಾನ್ಯೋಸ್ಯ ವಿದ್ಯತೇ||*

_ಋಷ್ಯಶೃಂಗನು ಅಥರ್ವ ಮಂತ್ರಗಳಿಂದ ಯಾಗ ಮಾಡಲು ತೊಡಗಿದಾಗ ಅಲ್ಲಿಯೇ ಸೂಕ್ಷ್ಮರೂಪದಲ್ಲಿ ನೆರೆದಿದ್ದ ದೇವತೆಗಳು ಬ್ರಹ್ಮನ ಬಳಿ ಪ್ರಾರ್ಥಿಸುತ್ತಾರೆ. ಲೋಕಕಂಟಕನಾದ ರಾವಣನು ಪ್ರಕೃತಿಸಹಜತೆಯನ್ನು ಮೀರಿ ವ್ಯವಸ್ಥೆಯನ್ನು ಹಾಳುಮಾಡುತ್ತಿರುವನು. ಸೂರ್ಯನು ತನ್ನ ಪ್ರಕಾಶ ಬೀರಲು, ಗಾಳಿ ಬೀಸಲು ಅವನಪ್ಪಣೆ ಪಡೆಯಬೇಕಾಗಿದೆ. ಹಾಗಾಗಿ ಅವನ ಮೃತ್ಯುವಿನ ಬಗೆಗೆ ಯೋಚಿಸು ಎಂದಾಗ ಬ್ರಹ್ಮನಾಡಿದ ಮಾತು. ನಾನು ವರ ನೀಡಿದಾಗ ಮಾನವರ ಮೇಲಿನ ತುಚ್ಛ ಭಾವನೆಯಿಂದ ಅವನು ಅವರನ್ನು ಬಿಟ್ಟಿರುವನು. ಹಾಗಾಗಿ ಮಾನವನಿಂದಲೇ ಸಾಯುವನು ಎಂದು. ದೇವ-ದಾನವ-ಗಂಧರ್ವ-ಯಕ್ಷ ಇವರೆಲ್ಲರಿಂದಲೂ ಅವಧ್ಯನೆಂದು ವರ ಕೊಟ್ಟಿರುವೆನು. ಆದರೆ ಮಾನವನ ವಿಷಯದಲ್ಲಿ ಮಾತ್ರ ವರವಿಲ್ಲ. ಇಲ್ಲಿ ಅನೇಕ ವಿಷಯಗಳಿವೆ. ಯಜ್ಞದಲ್ಲಿ ದೇವತೆಗಳು ಹೇಗೆ ಇರುವರೆಂದರೆ ಮಂತ್ರಗಳನ್ನು ಸ್ವರ ಸಹಿತವಾಗಿ ಶ್ರದ್ಧೆಯಿಂದ ನುಡಿದಾಗ ಆಯಾ ದೇವತೆಗಳು ಬಂದು ನೆಲೆಸುವರು. ಅಲ್ಲಿ ಮುಖ್ಯ ಕಾರಣ ಮಂತ್ರ. ಯಜ್ಞದಲ್ಲಿ ಬ್ರಹ್ಮನ ಸ್ಥಾನದಲ್ಲಿ ಕುಳಿತ ಯೋಗ್ಯ ವ್ಯಕ್ತಿಯಲ್ಲಿ ಬ್ರಹ್ಮನೇ ಸ್ವತಃ ಸೂಕ್ಷ್ಮವಾಗಿ ನೆಲೆಸಿರುತ್ತಾನೆ. ಇವರು ಪರಸ್ಪರ ಸಂಭಾಷಿಸುವದನ್ನೇ ಮಹರ್ಷಿಗಳು ಉಲ್ಲೇಖಿಸಿದ್ದಾರೆ. ದೇವತೆಗಳು ಎಂದಿಗೂ ಪ್ರತ್ಯಕ್ಷ ಬರುವುದನ್ನು ಇಷ್ಟಪಡುವುದಿಲ್ಲ. ಅವರು ವೇದದ ಮಾತಿನಂತೆ_ *ಪರೋಕ್ಷಪ್ರಿಯರು* _ಹಾಗಾಗಿ ಹಿಂದೆಯೂ ಇಂದಿಗೂ ದೇವತೆಗಳು ಆಹುತಿ ಮೊದಲಾದವನ್ನು ಸ್ವೀಕರಿಸುವುದು ಪರೋಕ್ಷವಾಗಿ ಮಾತ್ರ. ಎರಡನೆಯ ವಿಷಯ- ನಮ್ಮ ಶಕ್ತಿ ಸಾಮರ್ಥ್ಯ ಎಷ್ಟೇ ಇರಲಿ ಯಾರನ್ನೂ ಜೀವನದಲ್ಲಿ ಕಡೆಗಣಿಸಬಾರದು ಎಂಬುದು. ರಾವಣ ಬಹಳ ಕಾಲ ಬಲಿಷ್ಠನಾಗಿ ಮೆರೆದವನು. ತನ್ನನ್ನು ಹುಲುಮಾನವರು ಏನು ಮಾಡಿಯಾರು ಎಂಬ ಉಪೇಕ್ಷೆಯೇ ಅವನ ಸಾವಿಗೆ ಕಾರಣವೆನಿಸಿತು.  ಮೂರನೆಯದಾಗಿ ದೇವರು ವರ ನೀಡಿದರೆಂದರೆ ಸಹಜವಾಗಿ ಸಿಕ್ಕಿದ್ದಕ್ಕಿಂತ ಹೆಚ್ಚಿನದ್ದನ್ನು ಪಡೆಯುವುದು. ಜೀವಿಗಳ ಬಯಕೆಗಳ ಪಟ್ಟಿ ಮುಗಿಯುವಂತಹದಲ್ಲ. ಹಾಗಾಗಿ ವರ ನೀಡಿದರೂ ಅದರಲ್ಲೂ ಒಂದು ಸೂಕ್ಷ್ಮವಾದ ಉತ್ತರ ಇರುತ್ತದೆ. ಇದು ನಿನಗೂ ಆಪತ್ತು ತಂದೀತು ಎಂಬುದು. ಹಾಗಾಗಿ ಕೇವಲ ತಪವ ಆಚರಿಸಿದರೆ ಸಾಲದು, ವರ ಕೇಳುವಾಗಲೂ ನಮ್ಮ ಯೋಗ್ಯತೆಗೆ ಅನುಸಾರ ಬೇಡಿಕೆ ಇಡಬೇಕು. ವಾಲ್ಮೀಕಿಗಳ ಒಂದೊಂದು ಮಾತು ನೂರಾರು ಅರ್ಥಗಳನ್ನು ಏಕಕಾಲದಲ್ಲಿ ನೀಡುತ್ತದೆ._

*ಏತಸ್ಮಿನ್ನಂತರೇ ವಿಷ್ಣುರುಪಯಾತೋ ಮಹಾದ್ಯುತಿಃ | ಶಂಖಚಕ್ರಗದಾಪಾಣಿಃ ಪೀತವಾಸಾ ಜಗತ್ಪತಿಃ || ತ್ವಾಂ ನಿಯೋಕ್ಷ್ಯಾಮಹೇ ವಿಷ್ಣೋ ಲೋಕಾನಾಂ ಹಿತಕಾಮ್ಯಯಾ*

_ದೇವತೆಗಳು ಹಾಗೂ ಬ್ರಹ್ಮನು ಜಹದ ರಕ್ಷಕರಾರೆಂದು ಚಿಂತಿಸುತ್ತಿದ್ದ ಆ ಸಂದರ್ಭದಲ್ಲಿ ಶಂಖ-ಚಕ್ರ-ಗದಾಪಾಣಿಯಾಗಿ ಶುಭ್ರವಸನನಾಗಿ ಮಹಾವಿಷ್ಣುವು ಆ ಯಜ್ಞ ಶಾಲೆಯಲ್ಲಿ ಸೂಕ್ಷ್ಮ ರೂಪದಲ್ಲಿ ಬಂದನು. ಆನಂದಿತರಾದ ಬ್ರಹ್ಮಾದಿಗಳು ಅವನನ್ನು ಸ್ತುತಿಸಿ ನೀನೇ ಈ ಕಾರ್ಯಕ್ಕೆ ಸಮರ್ಥನೆಂದು ಲೋಕಹಿತವು ಅಡಗಿರುವ ಆ ಕಾರ್ಯಕ್ಕೆ ಅವನನ್ನು ನೇಮಿಸಿದರು. ಭಗವಂತ ಎಂದಿಗೂ ಭಕ್ತಪರಾಧೀನ. ಭಕ್ತರು ಸ್ತುತಿಸಿ ಲೋಕಹಿತದ ದೃಷ್ಟಿಯಿಂದ ಏನನ್ನು ನುಡಿದರೂ ಅದನ್ನು ಎಳ್ಳಷ್ಟೂ ಮರೆಯದಂತೆ ಮಾಡುವವನು. ಹಾಗಾಗಿಯೇ ಅವನು ಭಗ ಎಂದರೆ ಒಳಿತನ್ನು ಸಾಧಿಸುವವ. ದೇವತೆಗಳು ನಿಯೋಜಿಸುವುದು ಅಥವಾ ನೇಮಿಸುವುದು ಎಂದರೆ ಅವರ ಪ್ರಾರ್ಥನೆಗೆ ಓಗೊಟ್ಟು ದುಷ್ಟಸಂಹಾರದ ಕಾರ್ಯವನ್ನು ತಾನು ಕೈಗೆತ್ತಿಕೊಂಡನು ವ್ಯಾಪಕನಾದ ಪರಮಾತ್ಮ. ಅವರ ಯಾಚನೆಯಂತೆ ದಶರಥನ ಮೂವರು ಮಡದಿಯರಲ್ಲಿ ತನ್ನನ್ನು ನಾಲ್ಕಾಗಿಸಿ ಜನ್ಮತಾಳಿದನು. ಇಲ್ಲಿ *ಕೃತ್ವಾತ್ಮಾನಂ ಚತುರ್ವಿಧಮ್* ಎಂದು ಸ್ಪಷ್ಟವಾಗಿ ಇದೆ. ಹಾಗಾಗಿ ರಾಮನು ಮಾತ್ರ ವಿಷ್ಣು ಎಂಬ ವಾದವೇ ಸರಿಯಲ್ಲ. ರಾಮ-ಲಕ್ಷ್ಮಣ-ಭರತ-ಶತ್ರುಘ್ನ ನಾಲ್ವರೂ ಭಗವಂತನ ರೂಪಗಳೇ ಆಗಿವೆ._

ಸಂಗ್ರಹ: ಶ್ರೀನಿಧಿ ಅಭ್ಯಂಕರ್.
ಎಲ್ಲಾ ಲೇಖನಗಳಿಗೆ ಒಮ್ಮೆ ತೆರೆದು ನೋಡಿ. ತಪ್ಪುಗಳಿದ್ದಲ್ಲಿ ತಿದ್ದಿ ಮುನ್ನಡೆಸಿ.
http://shreenidhiabhyankar.blogspot.com

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩