ರಾಮಾಯಣ ೧೮೦

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೮೦🏝📖 

*ತ್ವಂ ಗತಿಃ ಪರಮಾ ದೇವ  ಸರ್ವೇಷಾಂ ನಃ ಪರಂತಪ | ವಧಾಯ ದೇವಶತ್ರೂಣಾಂ ನೃಣಾಂ ಲೋಕೇ ಮನಃ ಕುರು ||*

_ದೇವತೆಗಳ ಮಾತು ಪರಮಾತ್ಮನನ್ನು ಕುರಿತು- ಹೇ ಭಗವಾನ್ ನಮ್ಮೆಲ್ಲರಿಗೂ ಕೊನೇ ಗತಿ ನೀನೇ. ನಮ್ಮ ಶತ್ರುಗಳನ್ನು ನಾಶಮಾಡುವವನು ನೀನೇ ಆಗಿರುವಿ. ದೇವಶತ್ರುವೆನಿಸಿದ ರಾವಣನ ಸಂಚಾರಕ್ಕಾಗಿ ಮನುಜರ ಲೋಕದಲ್ಲಿ ಜನ್ಮ ತಾಳಲು ಮನಸ್ಸು ಮಾಡು. ದೇವತೆಗಳೇ ಅನನ್ಯಗತಿಕರಾಗಿ ಪ್ರಾರ್ಥಿಸುವಾಗ ಅವರ ದಶಾಂಶವೂ ಯೋಗ್ಯತೆ ಇರದ ನಮಗೆ *ನಾರಾಯಣ* ಎಂಬ ನಾಮ ಹತ್ತಾರು ಬಾರಿ ಪಠಿಸಲು ಏಕೆ ಹಿಂಜರಿಕೆ! ದೇವ ಶತ್ರುವೆಂದಲ್ಲಿ ಅಂತಹವರು ಲೋಕಕಂಟಕರು. ಅವರನ್ನು ಒಪ್ಪುವ, ತುಷ್ಟೀಕರಿಸುವ, ಹೊಗಳುವ ಮಂದಿಯೂ ಒಂದರ್ಥದಲ್ಲಿ ಲೋಕಕಂಟಕರೇ ಸರಿ. ರಾವಣನನ್ನು ಉತ್ತಮ ಆಡಳಿತಗಾರ, ಪರಾಕ್ರಮಿ ಎಂದೆಲ್ಲಾ ಬೊಗಳೆಬಿಡುವ ಅವನ ವಂಶಸ್ಥರು ಅಥವಾ ಅನುಯಾಯಿಗಳು ಲೋಕಕಂಟಕರೇ ಸರಿ. ಅವರನ್ನು ಬೇರೆ ಗತಿಯಿಲ್ಲ ಎಂದೋ, ನಮ್ಮ ಜಾತಿಯವರೆಂದೋ, ನಮಗೆ ಉಪಕಾರ ಮಾಡಿದಾರೆ ಎಂದೋ ಬೆಂಬಲಿಸುವುದು ಲೋಕದ ಅನಿಷ್ಟಗಳಿಗೆ ಬೆಂಬಲ ಕೊಟ್ಟಂತೆ. ಪರಮಾ ಗತಿಃ ಎಂಬ ದೇವತೆಗಳ ಮಾತು ಕೊನೇ ಗತಿ ಅವನೇ ಎಂಬ ಪ್ರಾರ್ಥನೆ. ನೀನಲ್ಲದೆ ನಮ್ಮನ್ನು ಕಾಯುವರಾರು ಎಂಬ ಭಾವ. ನಮ್ಮನ್ನು ಪೊರೆಯಲೆಂದಾದರೂ ಒಮ್ಮೆ ಈ ದುಃಖಭೂಯಿಷ್ಠವಾದ ಜನರ ಮಧ್ಯೆ ಅವತಾರ ತಾಳು ಎಂಬ ನಿವೇದನೆ._

*ಭಯಂ ತ್ಯಜತ ಭದ್ರಂ ವೋ ಹಿತಾರ್ಥಂ ಯುಧಿ ರಾವಣಮ್ |  ಸಪುತ್ರಪೌತ್ರಂ ಸಾಮಾತ್ಯಂ ಸಮಿತ್ರಜ್ಞಾತಿಬಾಂಧವಮ್ || ಹತ್ವಾ ಕ್ರೂರಂ ದುರಾತ್ಮಾನಂ ದೇವರ್ಷೀಣಾಂ ಭಯಾವಹಮ್*

_ಮಹಾವಿಷ್ಣುವಿನ ಮಾತು. ದೇವತೆಗಳೇ ಭಯವನ್ನು ತೊಡೆದುಹಾಕಿ. ನಿಮಗೆ ಮಂಗಲವಾಗಲೆಂದೇ ಆ ದುರಾತ್ಮನಾದ ರಾವಣನನ್ನು ಮಕ್ಕಳು-ಮೊಮ್ಮಕ್ಕಳು-ಮಂತ್ರಿಗಳು-ಮಿತ್ರರು-ಬಂಧುಗಳ ಸಹಿತ ನಾಶಮಾಡಿ ದೇವ-ಋಷಿಗಳ ಭಯವನ್ನು ದೂರಮಾಡುವೆ. ಅಷ್ಟಲ್ಲದೆ ಹನ್ನೊಂದು ಸಾವಿರ ವರ್ಷ ಭೂಮಿಯಲ್ಲಿ ಆಳುತ್ತಾ ನೆಲೆಸುವೆ. ಇಲ್ಲಿ ರಾವಣನನ್ನು ಕೊಲ್ಲುವುದು ಸರಿ ಉಳಿದವರೇಕೆ ಎಂದರೆ ದುಷ್ಟರ ನಡೆಯನ್ನು ಸಮರ್ಥಿಸುವವರೆಲ್ಲರೂ ದುಷ್ಟರೇ. ವಿಭೀಷಣನು ತನ್ನ ಬೆಂಬಲಿಗರ ಜೊತೆ ರಾಮಪಾಳಯಕ್ಕೆ ಬಂದು ನಿಂತ ಕಾರಣ ಉಳಿದನು. ಹಾಗೆ ಮಾಡದೆ ರಾವಣನಿಗೆ ಹೆಗಲಾದ ವೀರರೆಲ್ಲರೂ ಮಡಿದರು. ಭಗವಂತನ ಮಾತಿನ ಸಾರ ಅದೇ, ಅವನ ಜೊತೆಗೆ ಕುಕೃತ್ಯಗಳಿಗೆ ಸಾಥಿಯಾದ ಮಕ್ಕಳಿರಲಿ, ಮೊಮ್ಮಕ್ಕಳಿರಲಿ, ಮಂತ್ರಿಗಳಿರಲಿ, ಮಿತ್ರರಿರಲಿ ಯಾರಿದ್ದರೂ ಅವರೆಲ್ಲರೂ ನಾಶ ಹೊಂದುವುದು ಖಚಿತ. ಒಂದು ಕಳೆ ಕಿತ್ತ ಕೆಲ ಕಾಲದ ನಂತರ ಮತ್ತೆ ಹತ್ತಾರು ಹುಟ್ಟುತ್ತವೆ. ಹಾಗಾಗಿಯೇ ಇಷ್ಟು ಕಾಲ ಕಳೆಗಳಿಂದ ಕೊಳೆಯಾದ ಉತ್ತಮ ಫಲವಿಲ್ಲದ ಭೂಮಿ ಬಹುಕಾಲ ನಳನಳಿಸಲಿ, ಸಂಪದ್ಭರಿತವಾಗಲಿ ಎಂಬ ಭಾವದಿಂದ ಹನ್ನೊಂದು ಸಾವಿರ ವರ್ಷಗಳಷ್ಟು ದೀರ್ಘಕಾಲ ಭಗವಂತನ ಅವತಾರ._

ಸಂಗ್ರಹ: ಶ್ರೀನಿಧಿ ಅಭ್ಯಂಕರ್.
ಎಲ್ಲಾ ಲೇಖನಗಳಿಗೆ ಒಮ್ಮೆ ತೆರೆದು ನೋಡಿ. ತಪ್ಪುಗಳಿದ್ದಲ್ಲಿ ತಿದ್ದಿ ಮುನ್ನಡೆಸಿ.
http://shreenidhiabhyankar.blogspot.com

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩